ADVERTISEMENT

IND vs SA Highlights: ದ.ಆಫ್ರಿಕಾ ಕಳಪೆ ಸಾಧನೆ; ಭಾರತ ಗೆಲುವಿನ ಶುಭಾರಂಭ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2025, 2:12 IST
Last Updated 10 ಡಿಸೆಂಬರ್ 2025, 2:12 IST
<div class="paragraphs"><p>ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್</p></div>

ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್

   

(ಪಿಟಿಐ ಚಿತ್ರ)

ಕಟಕ್: ಹಾರ್ದಿಕ್ ಪಾಂಡ್ಯ ಆಲ್‌ರೌಂಡ್ ಆಟದ ನೆರವಿನಿಂದ (ಅಜೇಯ 59, 16ಕ್ಕೆ 1 ವಿಕೆಟ್) ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಭಾರತ 101 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ADVERTISEMENT

ಇದರೊಂದಿಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಅಂತರದ ಮುನ್ನಡೆ ಗಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 175 ರನ್‌ಗಳ ಸವಾಲಿನ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 12.3 ಓವರ್‌ಗಳಲ್ಲಿ 74 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು.

ಹಾರ್ದಿಕ್ ಆಲ್‌ರೌಂಡ್ ಆಟ...

ಗಾಯದಿಂದ ಚೇತರಿಸಿಕೊಂಡಿರುವ ಹಾರ್ದಿಕ್, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಿಂಚುವ ಮೂಲಕ ಭರ್ಜರಿ ಪುನರಾಗಮನವನ್ನು ಮಾಡಿದರು.

ಭಾರತ ಸಂಕಷ್ಟದಲ್ಲಿದ್ದಾಗ ಆರನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಪಾಂಡ್ಯ ಬಿರುಸಿನ ಆಟವಾಡುವ ಮೂಲಕ ತಂಡವು ಬೃಹತ್ ಮೊತ್ತ ಪೇರಿಸಲು ನೆರವಾದರು.

ಪಾಂಡ್ಯ 28 ಎಸೆತಗಳಲ್ಲಿ 59 ರನ್ ಗಳಿಸಿ ಔಟಾಗದೆ ಉಳಿದರು. ಪಾಂಡ್ಯ ಇನಿಂಗ್ಸ್‌ನಲ್ಲಿ ಆರು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳು ಸೇರಿದ್ದವು.

ತಿಲಕ್ ವರ್ಮಾ (26) ಹಾಗೂ ಅಕ್ಷರ್ ಪಟೇಲ್ (23) ಉಪಯುಕ್ತ ಇನಿಂಗ್ಸ್ ಕಟ್ಟಿದರು.

ಹಾರ್ದಿಕ್ ಪಾಂಡ್ಯ

ಭಾರತೀಯ ಬೌಲರ್‌ಗಳ ಸಾಂಘಿಕ ಪ್ರದರ್ಶನ...

ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಕೇವಲ 74 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಅರ್ಷದೀಪ್ ಸಿಂಗ್, ಜಸ್‌ಪ್ರೀತ್ ಬೂಮ್ರಾ, ವರುಣ್ ಚಕ್ರವರ್ತಿ ಹಾಗೂ ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್‌ಗಳನ್ನು ಗಳಿಸಿದರು.

ಬೌಲಿಂಗ್‌ನಲ್ಲೂ ಮಿಂಚಿದ ಪಾಂಡ್ಯ ಒಂದು ವಿಕೆಟ್ ಗಳಿಸಿದ್ದರೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು. ಶಿವಂ ದುಬೆ ಸಹ ವಿಕೆಟ್ ಗಳಿಸುವುದರೊಂದಿಗೆ ಭಾರತದ ಎಲ್ಲ ಆರು ಬೌಲರ್‌ಗಳು ವಿಕೆಟ್ ಪಡೆದಂತಾಯಿತು.

ದಕ್ಷಿಣ ಆಫ್ರಿಕಾ ಕಳಪೆ ಸಾಧನೆ...

74 ರನ್ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ಅತ್ಯಂತ ಕಳಪೆ ಸಾಧನೆಯಾಗಿದೆ. 2022ರಲ್ಲಿ ಭಾರತ ವಿರುದ್ಧವೇ 87 ರನ್ನಿಗೆ ಆಲೌಟ್ ಆಗಿತ್ತು.

ಒಂಬತ್ತನೇ ಸಲ 100ಕ್ಕೂ ಹೆಚ್ಚು ರನ್‌ಗಳ ಜಯ...

ಭಾರತ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಒಂಬತ್ತನೇ ಸಲ 100ಕ್ಕೂ ಹೆಚ್ಚು ರನ್‌ಗಳ ಗೆಲುವು ದಾಖಲಿಸಿದೆ. ಈ ಎಲ್ಲ ಗೆಲುವುಗಳು ಐಸಿಸಿಯ ಪೂರ್ಣ ಸದಸ್ಯತ್ವ ತಂಡಗಳ ವಿರುದ್ಧವೇ ದಾಖಲಾಗಿದೆ.

ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಆರನೇ ಸಲ 100ಕ್ಕೂ ಹೆಚ್ಚು ರನ್‌ಗಳ ಸೋಲಿಗೆ ಗುರಿಯಾಗಿದೆ.

ಬೂಮ್ರಾ 100 ವಿಕೆಟ್ ಸಾಧನೆ...

ಅಂತರರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ 100 ವಿಕೆಟ್‌ಗಳ ಸಾಧನೆ ಮಾಡಿದ್ದಾರೆ. ಅರ್ಷದೀಪ್ ಸಿಂಗ್ (107) ಬಳಿಕ ಈ ಸಾಧನೆ ಮಾಡಿದ ಭಾರತದ ಎರಡನೇ ಬೌಲರ್ ಎನಿಸಿದ್ದಾರೆ.

ಹಾಗೆಯೇ ಎಲ್ಲ ಮೂರು ಮಾದರಿಗಳಲ್ಲಿ 100ಕ್ಕೂ ಹೆಚ್ಚು ವಿಕೆಟ್ ಸಾಧನೆ ಮಾಡಿದ ಐದನೇ ಬೌಲರ್ ಎನಿಸಿದ್ದಾರೆ. ಲಸಿತ್ ಮಾಲಿಂಗ, ಶಕಿಬ್ ಅಲ್ ಹಸನ್, ಟಿಮ್ ಸೌಥಿ, ಶಾಹೀನ್ ಶಾ ಅಫ್ರಿದಿ ಸಾಲಿಗೆ ಬೂಮ್ರಾ ಸೇರ್ಪಡೆಗೊಂಡಿದ್ದಾರೆ.

ಶುಭಮನ್ ಗಿಲ್, ಜಸ್‌ಪ್ರೀತ್ ಬೂಮ್ರಾ

ಹಾರ್ದಿಕ್ ಸಿಕ್ಸರ್‌ಗಳ ಶತಕ..

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಾರ್ದಿಕ್ ಪಾಂಡ್ಯ 100 ಸಿಕ್ಸರ್‌ಗಳ ಸಾಧನೆ ಮಾಡಿದ್ದಾರೆ. ಈ ಸಾಧನೆ ಮಾಡಿದ ಭಾರತದ ನಾಲ್ಕನೇ ಬ್ಯಾಟರ್ ಎನಿಸಿದ್ದಾರೆ.

ಹಾಗೆಯೇ ಆರು ಅಥವಾ ಅದಕ್ಕಿಂತಲೂ ಕೆಳ ಕ್ರಮಾಂಕದಲ್ಲಿ ಮೂರನೇ ಸಲ ಅರ್ಧಶತಕದ ಸಾಧನೆ ಮಾಡಿದ್ದಾರೆ.

ಅರ್ಷದೀಪ್ ಮಿಂಚು....

ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪವರ್ ಪ್ಲೇಯಲ್ಲಿ ಅರ್ಷದೀಪ್ ಸಿಂಗ್ ಒಟ್ಟು 47 ವಿಕೆಟ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ಭಾರತದವರೇ ಆದ ಭುವನೇಶ್ವರ್ ಕುಮಾರ್ ದಾಖಲೆಯನ್ನು ಸರಿಗಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.