ADVERTISEMENT

IND vs AUS | ಮೊದಲ ದಿನದಾಟ: ವಿರಾಟ್ ಅರ್ಧಶತಕ; ಭಾರತ 6 ವಿಕೆಟ್‌ಗೆ 233 ರನ್

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 12:16 IST
Last Updated 17 ಡಿಸೆಂಬರ್ 2020, 12:16 IST
ಅರ್ಧಶತಕ ಗಳಿಸಿದ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ (ಎಎಫ್‌ಪಿ ಚಿತ್ರ)
ಅರ್ಧಶತಕ ಗಳಿಸಿದ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ (ಎಎಫ್‌ಪಿ ಚಿತ್ರ)   

ಅಡಿಲೇಡ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಪಿಂಕ್‌ ಬಾಲ್‌ ಟೆಸ್ಟ್‌ನ ಮೊದಲ ದಿನದಾಟ ಮುಕ್ತಾಯವಾಗಿದ್ದು, ಭಾರತ ತಂಡ 6 ವಿಕೆಟ್‌ಗಳನ್ನು ಕಳೆದುಕೊಂಡು 233 ರನ್‌ ಗಳಿಸಿದೆ.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನಾಯಕ ವಿರಾಟ್‌ ಕೊಹ್ಲಿ ಪಡೆಗೆ ಉತ್ತಮ ಆರಂಭ ಸಿಗಲಿಲ್ಲ. ಕನ್ನಡಿಗ ಮಯಂಕ್‌ ಅಗರವಾಲ್‌ ಜೊತೆ ಇನಿಂಗ್ಸ್ ಆರಂಭಿಸಿದ ಯುವ ಆಟಗಾರ ಪೃಥ್ವಿ ಶಾ (0) ಇನಿಂಗ್ಸ್‌ನ ಎರಡನೇ ಎಸೆತದಲ್ಲೇ ವಿಕೆಟ್‌ ಒಪ್ಪಿಸಿದರು. ಅಗರವಾಲ್‌ (17) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಆರಂಭಿಕರಿಬ್ಬರೂ ಪೆವಿಲಿಯನ್‌ ಸೇರಿಕೊಂಡಾಗ ತಂಡದ ಮೊತ್ತ ಕೇವಲ 33 ರನ್‌.

ಈ ವೇಳೆ ನಾಯಕನ ಆಟವಾಡಿದ ಕೊಹ್ಲಿ, ಟೆಸ್ಟ್‌ ಪರಿಣತ ಬ್ಯಾಟ್ಸ್‌ಮನ್‌ ಚೇತೇಶ್ಚರ ಪೂಜಾರ (43) ಮತ್ತು ಉಪನಾಯಕ ಅಜಿಂಕ್ಯ ರಹಾನೆ (42) ಅವರೊಂದಿಗೆ ಮೂರು ಮತ್ತು ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ ಕ್ರಮವಾಗಿ 78 ಮತ್ತು 88 ರನ್‌ ಕೂಡಿಸಿದರು.

ADVERTISEMENT

180 ಎಸೆತಗಳನ್ನು ಎದುರಿಸಿದ ಕೊಹ್ಲಿ 8 ಬೌಂಡರಿ ಸಹಿತ 74 ರನ್ ಗಳಿಸಿದ್ದಾಗ ಇಲ್ಲದ ರನ್‌ ಕದಿಯಲು ಹೋಗಿ ರನೌಟ್ ಆದರು.ಇದರೊಂದಿಗೆ ಅವರುಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಬಾರಿಗೆ ರನೌಟ್‌ ಆದಂತಾಯಿತು.

ಸದ್ಯ ವೃದ್ಧಿಮಾನ್‌ ಸಾಹ (9) ಮತ್ತು ರವಿಚಂದ್ರನ್‌ ಅಶ್ವಿನ್‌ (15) ಕ್ರೀಸ್‌ನಲ್ಲಿದ್ದು, ಎರಡನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಆಸ್ಟ್ರೇಲಿಯಾ ಪರ ವೇಗಿ ಮಿಚೇಲ್‌ ಸ್ಟಾರ್ಕ್‌ ಎರಡು ವಿಕೆಟ್‌ ಪಡೆದರೆ, ಜೋಶ್‌ ಹ್ಯಾಷಲ್‌ವುಡ್‌, ಪ್ಯಾಟ್‌ ಕಮಿನ್ಸ್‌ ಮತ್ತು ನಾಥನ್‌ ಲಯನ್‌ ತಲಾ ಒಂದೊಂದು ವಿಕೆಟ್‌ ಉರುಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.