ADVERTISEMENT

ರೋಹಿತ್ ಶರ್ಮಾ ಫಿಟ್ ಆಗಿದ್ದರೆ ತಂಡದಲ್ಲಿರಬೇಕು: ಸಚಿನ್ ತೆಂಡೂಲ್ಕರ್

ಏಜೆನ್ಸೀಸ್
Published 10 ಡಿಸೆಂಬರ್ 2020, 7:37 IST
Last Updated 10 ಡಿಸೆಂಬರ್ 2020, 7:37 IST
ರೋಹಿತ್ ಶರ್ಮಾ
ರೋಹಿತ್ ಶರ್ಮಾ   

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಮುಂಬರುವ ಬಹುನಿರೀಕ್ಷಿತ ಟೆಸ್ಟ್ ಸರಣಿಗೆ ಹಿಟ್‌ಮ್ಯಾನ್ ಖ್ಯಾತಿಯ ಬಲಗೈ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಲಭ್ಯವಾಗುವರೇ ಎಂಬುದು ತಿಳಿದು ಬಂದಿಲ್ಲ. ಈ ಬಗ್ಗೆ ಭಾರತ ಕ್ರಿಕೆಟ್ ತಂಡದ ಮಾಜಿ ಐಕಾನ್ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯೆ ನೀಡಿದ್ದು, ಅವರು (ರೋಹಿತ್ ಶರ್ಮಾ) ಫಿಟ್ ಆಗಿದ್ದರೆ ಖಂಡಿತವಾಗಿಯೂ ಆಸೀಸ್ ವಿಮಾನವನ್ನೇರಬೇಕು. ಯಾಕೆಂದರೆ ಅವರಂತಹ ಸಾಮರ್ಥ್ಯದ ಆಟಗಾರನ ಸೇರ್ಪಡೆಯಿಂದ ತಂಡವು ಬಲಿಷ್ಠಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟರು.

ಎಲ್ಲ ಫಿಟ್ನೆಸ್ ಟೆಸ್ಟ್‌ಗಳನ್ನು ತೇರ್ಗಡೆ ಹೊಂದಿದರೆ ರೋಹಿತ್ ಶರ್ಮಾ ತಂಡದಲ್ಲಿರಬೇಕು. ಹಾಗಿದ್ದರೂ ರೋಹಿತ್ ಫಿಟ್ನೆಸ್ ಸ್ಥಿತಿ ಬಗ್ಗೆ ನನಗೆ ತಿಳಿದಿಲ್ಲ. ಇದು ಬಿಸಿಸಿಐ ಹಾಗೂ ರೋಹಿತ್‌ಗೆ ತಿಳಿದಿರುವ ವಿಚಾರವಾಗಿದೆ. ಬಿಸಿಸಿಐ, ರೋಹಿತ್, ಫಿಸಿಯೋ ಹಾಗೂ ಟೀಮ್ ಮ್ಯಾನೇಜ್‌ಮೆಂಟ್ ಪರಸ್ಪರ ಸಂಪರ್ಕದಲ್ಲಿರುತ್ತಾರೆ ಎಂದರು.

ಆಸೀಸ್ ಪ್ರವಾಸಕ್ಕೂ ಮುನ್ನ ರೋಹಿತ್ ಶರ್ಮಾ ಫಿಟ್ನೆಸ್ ಬಗ್ಗೆ ಗೊಂದಲವಿದ್ದು, ಸ್ಪಷ್ಟನೆಯಿಲ್ಲ ಎಂದು ನಾಯಕ ವಿರಾಟ್ ಕೊಹ್ಲಿ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿತ್ತು.

ADVERTISEMENT

ಮೊದಲ ಟೆಸ್ಟ್ ಬಳಿಕ ತವರಿಗೆ ಮರಳಿರುವ ವಿರಾಟ್ ಕೊಹ್ಲಿ ಸೇವೆಯಿಂದ ಟೀಮ್ ಇಂಡಿಯಾ ವಂಚಿತವಾಗಲಿದೆ. ಈ ಹಿನ್ನೆಲೆಯಲ್ಲಿ ತಂಡದಲ್ಲಿ ರೋಹಿತ್ ಸಾನಿಧ್ಯ ಅತಿ ಮುಖ್ಯವೆನಿಸುತ್ತದೆ ಎಂದು ಸಚಿನ್ ತೆಂಡೂಲ್ಕರ್ ಉಲ್ಲೇಖಿಸಿದರು.

ನೋಡಿ, ಖಂಡಿತವಾಗಿಯೂ ವಿರಾಟ್ ಕೊಹ್ಲಿ ಹಿಂತಿರುಗಿ ಬರುತ್ತಾರೆ. ಅಲ್ಲಿ ಬಹಳ ಸಮಯದಿಂದ ಆಸ್ಟ್ರೇಲಿಯಾ ಪ್ರವಾಸ ಮಾಡಿದ ಓರ್ವ ಹಿರಿಯ ಆಟಗಾರನ ಸೇವೆಯನ್ನು ಮಿಸ್ ಮಾಡಿಕೊಡಲಿದೆ. ಆದರೆ ಇದು ಓರ್ವ ವ್ಯಕ್ತಿಯಲ್ಲ ತಂಡದ ವಿಚಾರವಾಗಿದ್ದು, ಆದ್ದರಿಂದ ಓರ್ವ ಆಟಗಾರ ಗಾಯಗೊಂಡರೂ ತಂಡವು ಮುಂದಕ್ಕೆ ಸಾಗಬೇಕು ಎಂದು ಕಾಲ್ಪನಿಕವಾಗಿ ನುಡಿದರು.

'ವೆಸ್ಟ್‌ಇಂಡೀಸ್ ವಿರುದ್ಧದ ಪಂದ್ಯವೊಂದು ನೆನಪಿಸಿಕೊಳ್ಳುತ್ತೇನೆ. ಅನಿಲ್ ಕುಂಬ್ಳೆ ಗಾಯಗೊಂಡಾಗ, ಅವರಿಲ್ಲದೆ ಮುಂದಿನ ಟೆಸ್ಟ್ ಆಡಿದೆವು. ಅಂದು ಅನಿಲ್ ಕುಂಬ್ಳೆ ಪ್ರಮುಖ ಬೌಲರ್ ಆಗಿದ್ದರು. ಈ ರೀತಿಯ ಸವಾಲುಗಳನ್ನು ಎದುರಿಸಲು ಸಿದ್ಧವಾಗಿರಬೇಕು. ಇದು ತಂಡದ ವಿಚಾರ. ಮೊದಲ ಟೆಸ್ಟ್ ಬಳಿಕ ವಿರಾಟ್ ಇರುವುದಿಲ್ಲ. ಭಾರತೀಯ ತಂಡದ ಸೊಗಸು ನಮ್ಮಲ್ಲಿ ಬೆಂಚ್ ಸ್ಟ್ರೆಂಗ್ತ್ ಹೊಂದಿದ್ದೇವೆ. ಬೇರೆ ಯಾವನೇ ಆಟಗಾರನಿಗೆ ಅಲ್ಲಿಗೆ ಹೋಗಿ ದೇಶಕ್ಕೆ ಏನಾದರೂ ಮಾಡಲು ಅವಕಾಶವಿದೆ. ನಿಸ್ಸಂಶಯವಾಗಿಯೂ ವಿರಾಟ್ ಕೊಹ್ಲಿ ಸೇವೆಯನ್ನು ಕಳೆದುಕೊಳ್ಳಲಿದೆ. ಆದರೆ ವ್ಯಕ್ತಿಯ ಬದಲು ಇವೆಲ್ಲ ತಂಡದ ವಿಷಯ' ಎಂದು ವಿವರಿಸಿದರು.

ಬೌಲಿಂಗ್ ವಿಭಾಗದಲ್ಲೂ ಇಶಾಂತ್ ಶರ್ಮಾ ಸೇವೆಯಿಂದ ವಂಚಿತವಾಗಲಿದ್ದೇವೆ. ಆದರೆ ಇಶಾಂತ್ ಅನುಪಸ್ಥಿತಿಯಲ್ಲಿ ಒಂದು ಬೌಲಿಂಗ್ ಘಟಕವಾಗಿ ಟೀಮ್ ಇಂಡಿಯಾವು ಸವಾಲನ್ನು ಎದುರಿಸಬೇಕು ಎಂದು ಸಚಿನ್ ಸಲಹೆ ಮಾಡಿದರು.

ವೈಟ್ ಬಾಲ್ ಪದಾರ್ಪಣೆ ಸರಣಿಯಲ್ಲೇ ಪರಿಣಾಮಕಾರಿ ನಿರ್ವಹಣೆ ನೀಡಿರುವ ತಂಗರಸು ನಟರಾಜನ್ ಅವರನ್ನು ಟೆಸ್ಟ್ ತಂಡಕ್ಕೂ ಸೇರ್ಪಡೆಗೊಳಿಸಬೇಕಿತ್ತು ಎಂಬ ಪ್ರಶ್ನೆಗೆ ಉತ್ತರವಾಗಿ ಸಚಿನ್, 'ಅವರು ಆಡಿದ ಪಂದ್ಯಗಳಲ್ಲಿ ಅತ್ಯುತ್ತಮ ನಿರ್ವಹಣೆ ನೀಡಿದ್ದಾರೆ. ಆದರೆ ಬದಲಿ ಆಟಗಾರನಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬುದನ್ನು ಆಯ್ಕೆಗಾರರು ಹಾಗೂ ಟೀಮ್ ಮ್ಯಾನೇ‌ಜ್‌ಮೆಂಟ್ ನಿರ್ಧರಿಸುತ್ತಾರೆ. ಈ ನಿರ್ಣಯಗಳ ಮೇಲೆ ಪ್ರಭಾವ ಬೀರಲು ಬಯಸುವುದಿಲ್ಲ' ಎಂದರು.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೊದಲ ಟೆಸ್ಟ್ ಪಂದ್ಯವು ಆಡಿಲೇಡ್‌ನಲ್ಲಿ ಅಹರ್ನಿಶಿಯಾಗಿ ಸಾಗಲಿದೆ. ಆಸೀಸ್ ನೆಲದಲ್ಲಿ ಭಾರತ ಇದೇ ಮೊದಲ ಬಾರಿಗೆ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿನ್, 'ಇದೇ ಮೊದಲ ಬಾರಿಗೆ ಆಡುತ್ತಿರುವುದರಿಂದ ಸರಣಿಯ ಮೂರನೇ ಅಥವಾ ನಾಲ್ಕನೇ ಟೆಸ್ಟ್ ಆಗಿದ್ದರೆ ಖಂಡಿತವಾಗಿಯೂ ನೆರವಾಗುತ್ತಿತ್ತು. ಏಕೆಂದರೆ ಬಹಳ ಸಮಯದ ಬಳಿಕ ಭಾರತ ಟೆಸ್ಟ್ ಕ್ರಿಕೆಟ್ ಆಡುತ್ತಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.