ADVERTISEMENT

IND vs AUS: ಭೋಜನ ವಿರಾಮಕ್ಕೆ 4 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿದ ಭಾರತ

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 4:59 IST
Last Updated 17 ಜನವರಿ 2021, 4:59 IST
ಔಟ್ ಆದ ಬಳಿಕ ಪೆವಿಲಿಯನ್‌ಗೆ ಮರಳುತ್ತಿರುವ ಅಜಿಂಕ್ಯ ರಹಾನೆ
ಔಟ್ ಆದ ಬಳಿಕ ಪೆವಿಲಿಯನ್‌ಗೆ ಮರಳುತ್ತಿರುವ ಅಜಿಂಕ್ಯ ರಹಾನೆ   

ಬ್ರಿಸ್ಬೇನ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಗಾಬಾದಲ್ಲಿನಡೆಯುತ್ತಿರುವ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೂರನೇದಿನದಾಟದ ಭೋಜನ ವಿರಾಮದ ಹೊತ್ತಿಗೆ ಟೀಮ್ ಇಂಡಿಯಾ 60 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿದೆ.

ಟೀಮ್ ಇಂಡಿಯಾ ಇನ್ನಿಂಗ್ಸ್ ಮುನ್ನಡೆಗಾಗಿ ಇನ್ನು ಆರು ವಿಕೆಟ್ ಬಾಕಿ ಉಳಿದಿರುವಂತೆಯೇ 208 ರನ್ ಗಳಿಸಬೇಕಾದ ಅಗತ್ಯವಿದೆ.

ಎರಡು ವಿಕೆಟ್ ನಷ್ಟಕ್ಕೆ 62 ರನ್ ಎಂಬ ಮೊತ್ತದಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತಕ್ಕೆ ಅನುಭವಿ ಚೇತೇಶ್ವರ ಪೂಜಾರ ಹಾಗೂ ನಾಯಕ ಅಜಿಂಕ್ಯ ರಹಾನೆ ಉತ್ತಮ ಜೊತೆಯಾಟ ನೀಡುವ ಸೂಚನೆ ನೀಡಿದರು.

ADVERTISEMENT

ಆದರೆ ಜೋಶ್ ಹ್ಯಾಜಲ್‌ವುಡ್ ದಾಳಿಯಲ್ಲಿ ವಿಕೆಟ್ ಕೀಪರ್ ಟಿಮ್ ಪೇನ್‌ಗೆ ವಿಕೆಟ್ ಒಪ್ಪಿಸಿದ ಪೂಜಾರ ನಿರಾಸೆ ಅನುಭವಿಸಿದರು. 94 ಎಸೆತಗಳನ್ನು ಎದುರಿಸಿದ ಪೂಜಾರ ಎರಡು ಬೌಂಡರಿಗಳಿಂದ 25 ರನ್ ಗಳಿಸಿದರು.

ಬಳಿಕ ಮಯಂಕ್ ಅಗರವಾಲ್ ಜೊತೆ ಸೇರಿದ ರಹಾನೆ ತಂಡವನ್ನು ಮುನ್ನಡೆಸಿದರು. ಮೊದಲೆರಡು ಪಂದ್ಯಗಳ ವೈಫಲ್ಯದ ಬಳಿಕ ಮೂರನೇ ಪಂದ್ಯದಲ್ಲಿ ಅವಕಾಶ ವಂಚಿತರಾಗಿರುವ ಮಯಂಕ್, ಈ ಪಂದ್ಯದಲ್ಲಿ ಗಾಯಾಳು ಹನುಮ ವಿಹಾರಿ ಸ್ಥಾನವನ್ನು ತುಂಬಿದ್ದರು. ಅಲ್ಲದೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆಯಾಗಿ ಮೊದಲ ಬಾರಿಗೆ ಮಧ್ಯಮ ಕ್ರಮಾಂಕದಲ್ಲಿ ಕಾಣಿಸಿಕೊಂಡರು.

ಅತ್ತ ರೋಹಿತ್ ಶರ್ಮಾ ಹಾಗೂ ಚೇತೇಶ್ವರ ಪೂಜಾರ ರೀತಿಯಲ್ಲೇ ಕ್ರೀಸಿನಲ್ಲಿ ನೆಲೆಯೂರಿದ ಬಳಿಕ ವಿಕೆಟ್ ಒಪ್ಪಿಸಿದ ನಾಯಕ ಅಜಿಂಕ್ಯ ರಹಾನೆ ಔಟ್ ಆಗುವುದರೊಂದಿಗೆ ಭಾರತ ಹಿನ್ನೆಡೆಗೊಳಗಾಯಿತು. 93 ಎಸೆತಗಳನ್ನು ಎದುರಿಸಿದ ರಹಾನೆ ಮೂರು ಬೌಂಡರಿಗಳಿಂದ 37 ರನ್ ಗಳಿಸಿದರು.

ಈಗ ವಿಕೆಟ್ ಕೀಪರ್ ರಿಷಭ್ ಪಂತ್ (4*) ಜೊತೆಗೂಡಿರುವ ಮಯಂಕ್ ಅಗರವಾಲ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. 73 ಎಸೆತಗಳನ್ನು ಎದುರಿಸಿರುವ ಮಯಂಕ್ ಮೂರು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 38 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ. ಆಸೀಸ್ ಪರ ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ಪ್ಯಾಟ್ ಕಮಿನ್ಸ್ ಮತ್ತು ನಥನ್ ಲಿಯನ್ ತಲಾ ಒಂದು ವಿಕೆಟನ್ನು ಹಂಚಿಕೊಂಡರು.

ಈ ಮೊದಲು ಮಾರ್ನಸ್ ಲಾಬುಷೇನ್ ಅಮೋಘ ಶತಕ (108) ಹಾಗೂ ನಾಯಕ ಟಿಮ್ ಪೇನ್ ಆಕರ್ಷಕ ಅರ್ಧಶತಕದ (50) ನೆರವಿನಿಂದ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 369 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ಭಾರತದ ಪರ ಪದಾರ್ಪಣಾ ಬೌಲರ್‌ಗಳಾದ ಟಿ. ನಟರಾಜನ್ ಹಾಗೂವಾಷಿಂಗ್ಟನ್ ಸುಂದರ್ ಮತ್ತು ಶಾರ್ದೂಲ್ ಠಾಕೂರ್ ತಲಾ ಮೂರು ವಿಕೆಟ್‌ಗಳನ್ನು ಹಂಚಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.