ADVERTISEMENT

ಭಾರತ ತಂಡವನ್ನು ಯಾವತ್ತೂ ಹಗುರವಾಗಿ ಪರಿಗಣಿಸಬಾರದು: ಆಸ್ಟ್ರೇಲಿಯಾ ಕೋಚ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಜನವರಿ 2021, 2:25 IST
Last Updated 20 ಜನವರಿ 2021, 2:25 IST
ಟೀಮ್ ಇಂಡಿಯಾ ಗೆಲುವಿನ ಸಂಭ್ರಮ
ಟೀಮ್ ಇಂಡಿಯಾ ಗೆಲುವಿನ ಸಂಭ್ರಮ   

ಬ್ರಿಸ್ಪೇನ್: ಭಾರತ ತಂಡವನ್ನು ಯಾವತ್ತೂ ಹಗುರವಾಗಿ ಪರಿಗಣಿಸಬಾರದುಎಂಬ ಪಾಠವನ್ನು ಈ ಸರಣಿಯು ಕಲಿಸಿದೆ ಎಂದು ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಎದುರಾದ ಸೋಲಿನ ಬಳಿಕ ಆಸ್ಟ್ರೇಲಿಯಾ ಮುಖ್ಯ ತರಬೇತುದಾರ ಜಸ್ಟಿನ್ ಲ್ಯಾಂಗರ್ ಅಭಿಪ್ರಾಯಪಟ್ಟಿದ್ದಾರೆ.

ಗಾಬಾದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮೂರು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ನೆಲದಲ್ಲಿ ಮಗದೊಂದು ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ದಾಖಲಿಸಿದೆ.

ಭಾರತದ ಯುವ ಪಡೆಯ ಗೆಲುವನ್ನು ಕೊಂಡಾಡಿರುವ ಕ್ರಿಕೆಟ್ ಪಂಡಿತರು, 'ಕ್ರಿಕೆಟ್ ಇತಿಹಾಸದಲ್ಲೇ ಸರ್ವಶ್ರೇಷ್ಠ ಸರಣಿ ಗೆಲುವು' ಎಂದು ಉಲ್ಲೇಖ ಮಾಡಿದ್ದಾರೆ. ಇದುವೇ ಭಾರತೀಯ ತಂಡದ ಸಾಧನೆಗೆ ಕೈಗನ್ನಡಿಯಾಗಿದೆ.

ADVERTISEMENT

ತವರಿನಲ್ಲಿ ಎದುರಾದ ಸೋಲಿನಿಂದ ಮರ್ಮಾಘಾತ ಎದುರಿಸಿರುವ ಆಸ್ಟ್ರೇಲಿಯಾ ತಂಡದ ಮುಖ್ಯ ತರಬೇತುದಾರ ಜಸ್ಟಿನ್ ಲ್ಯಾಂಗರ್, ಭಾರತ ತಂಡವನ್ನು ಯಾವತ್ತೂ ಹಗರುವಾಗಿ ಪರಿಗಣಿಸಬಾರದು ಎಂಬ ಪಾಠವನ್ನು ಈ ಸರಣಿಯು ಕಲಿಸಿದೆ ಎಂದು ಹೇಳಿದರು.

'ಇದು ನಂಬಲಾಗದ ಟೆಸ್ಟ್ ಸರಣಿ. ಕ್ರಿಕೆಟ್ ಅಂತ್ಯದಲ್ಲಿ ಒಬ್ಬರು ಗೆಲ್ಲುವುದು, ಸೋಲುವುದು ಸಹಜ. ಇಂದು ಟೆಸ್ಟ್ ಕ್ರಿಕೆಟ್ ಜಯಿಸಿದೆ. ಈ ನೋವು ದೀರ್ಘ ಕಾಲದ ವರೆಗೆ ನಮ್ಮಲ್ಲಿ ಉಳಿಯಲಿದೆ. ಸಂಪೂರ್ಣ ಶ್ರೇಯಕ್ಕೆ ಭಾರತ ಅರ್ಹವಾಗಿದೆ. ಈ ಸರಣಿಯಲ್ಲಿ ಭಾರತ ತಂಡ ಅದ್ಭುತವಾಗಿದ್ದು, ನಾವು ಅವರಿಂದ ಪಾಠವನ್ನು ಕಲಿತ್ತಿದ್ದೇವೆ' ಎಂದು ಹೇಳಿದರು.

ಮೊದಲನೆಯದಾಗಿ ನೀವು ಯಾವತ್ತೂ ಯಾವುದನ್ನು ಹಗುರವಾಗಿ ಪರಿಗಣಿಸಬಾರದು. ಎರಡನೇಯದಾಗಿ ಭಾರತವನ್ನು ಎಂದಿಗೂ ಕಡೆಗಣಿಸಬಾರದು. ಅಲ್ಲಿ 130 ಕೋಟಿ ಭಾರತೀಯರಿದ್ದಾರೆ. ಅವರಲ್ಲಿ ನೀವು ಆ ಮೊದಲ ಹನ್ನೊಂದರಲ್ಲಿ ಆಡಿದರೆ ನಿಜಕ್ಕೂ ನೀವು ಕಠಿಣವಲ್ಲವೇ ? ಎಂದು ಸೋಲಿನ ನಡುವೆಯೂ ಟೀಮ್ ಇಂಡಿಯಾ ಸಾಧನೆಯನ್ನು ಮೆಚ್ಚಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.