ADVERTISEMENT

ನಾಯಕನಾಗಿ ಮತ್ತೊಂದು ದಾಖಲೆ ಬರೆಯಲು ಸಜ್ಜಾದ ವಿರಾಟ್ ಕೊಹ್ಲಿ

ಏಜೆನ್ಸೀಸ್
Published 15 ಡಿಸೆಂಬರ್ 2020, 12:53 IST
Last Updated 15 ಡಿಸೆಂಬರ್ 2020, 12:53 IST
   

ಅಡಿಲೇಡ್‌: ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿರುವ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡ ಟಿ20 ಸರಣಿಯನ್ನು 2–1 ಅಂತರದಿಂದ ಗೆದ್ದುಕೊಂಡಿದೆ. ಆ ಮೂಲಕ ಕಾಂಗರೂ ನಾಡಿನಲ್ಲಿ ಮೂರೂ ಮಾದರಿಯ ಕ್ರಿಕೆಟ್‌ ಸರಣಿ ಗೆದ್ದ ಭಾರತದ ಮೊದಲ ಮತ್ತು ಒಟ್ಟಾರೆ ಎರಡನೇ ನಾಯಕ ಎನಿಸಿರುವ ಕೊಹ್ಲಿ ಇದೀಗ ಮತ್ತೊಂದು ದಾಖಲೆ ಬರೆಯಲು ಸಜ್ಜಾಗಿದ್ದಾರೆ.

ಇದಕ್ಕೂ ಮೊದಲು ದಕ್ಷಿಣ ಆಫ್ರಿಕಾ ನಾಯಕ ಫಾಫ್‌ ಡು ಪ್ಲೆಸಿ ತಮ್ಮ ತಂಡಕ್ಕೆ ಆಸಿಸ್‌ನಲ್ಲಿ ಮೂರೂ ಮಾದರಿಯಲ್ಲಿ ಗೆಲುವು ತಂದುಕೊಟ್ಟಿದ್ದರು. ವಿರಾಟ್‌ ಪಡೆ 2018ರಲ್ಲಿ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯನ್ನು 2–1 ರಿಂದ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2–1ರಿಂದ ಗೆದ್ದುಕೊಂಡಿತ್ತು.

ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಇದೇ ತಿಂಗಳ 17ರಂದು ಅಡಿಲೇಡ್‌ನಲ್ಲಿ ನಡೆಯಲಿರುವ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಉಭಯ ತಂಡಗಳು ನಾಲ್ಕು ಟೆಸ್ಟ್‌ ಪಂದ್ಯಗಳಲ್ಲಿ ಸೆಣಸಾಟ ನಡೆಸಲಿದ್ದು, ಜನವರಿಯಲ್ಲಿ ತಂದೆಯಾಗುವ ಸಂಭ್ರಮದಲ್ಲಿರುವ ಕೊಹ್ಲಿ ಮೊದಲ ಪಂದ್ಯದ ಬಳಿಕ ತವರಿಗೆ ಮರಳಲಿದ್ದಾರೆ. ಆದಾಗ್ಯೂ ನಾಯಕರಾಗಿ ಹೊಸ ದಾಖಲೆ ಬರೆಯುವ ಅವಕಾಶ ಅವರಿಗಿದೆ.

ADVERTISEMENT

ವಿರಾಟ್ ಇದುವರೆಗೆ 187 ಪಂದ್ಯಗಳಲ್ಲಿ ತಂಡ ಮುನ್ನಡೆಸಿದ್ದು, 41 ಶತಕ ಸಿಡಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್‌ 324 ಪಂದ್ಯಗಳಿಂದ ಇಷ್ಟೇ ಶತಕ ಬಾರಿಸಿದ್ದಾರೆ. ಹೀಗಾಗಿ ಅಡಿಲೇಡ್‌ ಟೆಸ್ಟ್‌ನಲ್ಲಿ ಕೊಹ್ಲಿ ಮೂರಂಕಿ ದಾಟಿದರೆ ನಾಯಕನಾಗಿ ಅತಿಹೆಚ್ಚು ಶತಕ ಸಿಡಿಸಿದ ಆಟಗಾರ ಎಂಬ ಶ್ರೇಯಕ್ಕೆ ಭಾಜನರಾಗಲಿದ್ದಾರೆ.

ಉಳಿದಂತೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಗ್ರೇಮ್‌ ಸ್ಮಿತ್‌ (286 ಪಂದ್ಯಗಳಿಂದ 33 ಶತಕ), ಆಸ್ಟ್ರೇಲಿಯಾದವರಾದ ಸ್ಟೀವ್‌ ಸ್ಮಿತ್‌ (93 ಪಂದ್ಯಗಳಿಂದ 20 ಶತಕ) ಮತ್ತು ಮೈಕಲ್‌ ಕ್ಲಾರ್ಕ್‌ (139 ಪಂದ್ಯಗಳಿಂದ 19 ಶತಕ), ವೆಸ್ಟ್‌ ಇಂಡೀಸ್‌ನ ಬ್ರಯಾನ್‌ ಲಾರಾ (172 ಪಂದ್ಯಗಳಿಂದ 19 ಶತಕ) ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.