ADVERTISEMENT

IND vs ENG 1st Test‌: ಜೇಮ್ಸ್‌ ‘ರಿವರ್ಸ್‌ ಸ್ವಿಂಗ್‌’ಗೆ ಭಾರತ ದೂಳೀಪಟ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 17:21 IST
Last Updated 9 ಫೆಬ್ರುವರಿ 2021, 17:21 IST
ಮೊದಲ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬಳಿಕ ಇಂಗ್ಲೆಂಡ್ ಆಟಗಾರರ ಸಂಭ್ರಮ – ಪಿಟಿಐ ಚಿತ್ರ
ಮೊದಲ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬಳಿಕ ಇಂಗ್ಲೆಂಡ್ ಆಟಗಾರರ ಸಂಭ್ರಮ – ಪಿಟಿಐ ಚಿತ್ರ   

ಚೆನ್ನೈ (ಪಿಟಿಐ): ಸ್ಪಿನ್ನರ್‌ಗಳ ಸ್ವರ್ಗದಂತಿರುವ ಚೆಪಾಕ್ ಪಿಚ್‌ನಲ್ಲಿ ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್‌ ಪ್ರಯೋಗಿಸಿದ ರಿವರ್ಸ್‌ ಸ್ವಿಂಗ್‌ ಎದುರು ಭಾರತ ಕ್ರಿಕೆಟ್ ತಂಡ ದೂಳೀ ಪಟವಾಯಿತು.

ಮಂಗಳವಾರ ಮುಕ್ತಾಯವಾದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು 227 ರನ್‌ಗಳ ಭರ್ಜರಿ ಜಯ ದಾಖಲಿಸಿತು. ನಾಲ್ಕು ಪಂದ್ಯಗಳ ಸರಣಿಯಲ್ಲಿ ಮುನ್ನಡೆ ಸಾಧಿಸಿದ ಇಂಗ್ಲೆಂಡ್‌ ತಂಡಕ್ಕೆ. ವಿಶ್ವ ಟೆಸ್ಟ್‌ ಚಾಂಪಿ ಯನ್‌ಷಿಪ್‌ ಫೈನಲ್‌ ಪ್ರವೇಶದ ಕನಸು ಕೂಡ ಗರಿಗೆದರಿತು. ಹೀನಾಯ ಸೋಲ ನುಭವಿಸಿದ ಭಾರತಕ್ಕೆ ಮುಂದಿನ ಹಾದಿಯು ಕಠಿಣವಾಯಿತು.

ಸೋಮವಾರ ದಿನದಾಟದಲ್ಲಿ ಪ್ರವಾಸಿ ಬಳಗವು ಭಾರತಕ್ಕೆ ಜಯಿಸಲು 420 ರನ್‌ಗಳ ಗುರಿ ಒಡ್ಡಿತ್ತು. ಆದರೆ ಭಾರತ ತಂಡವು 58.1 ಓವರ್‌ಗಳಲ್ಲಿ 192 ರನ್ ಗಳಿಸಿ ಹೀನಾಯ ಸೋಲನುಭವಿಸಿತು. ಇದಕ್ಕೆ ಪ್ರಮುಖ ಕಾರಣವಾಗಿದ್ದು ಆ್ಯಂಡರ್ಸನ್ ಹಾಕಿದ 27ನೇ ಓವರ್‌. ಚುರುಕಾದ ಹೊಡೆತಗಳ ಮೂಲಕ ಅರ್ಧಶತಕ ಗಳಿಸಿದ್ದ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ (50; 83ಎ, 7ಬೌಂಡರಿ, 1ಸಿಕ್ಸರ್) ಜೇಮ್ಸ್‌ ಹಾಕಿದ ರಿವರ್ಸ್‌ ಸ್ವಿಂಗ್‌ಗೆ ಕ್ಲೀನ್‌ಬೌಲ್ಡ್ ಆದರು. ನಾಯಕ ವಿರಾಟ್ ಕೊಹ್ಲಿ ಜೊತೆಗೆ ಗಿಲ್ ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 34 ರನ್‌ ಸೇರಿಸಿದರು. ಬೆಳಿಗ್ಗೆ ಚೇತೇಶ್ವರ್ ಪೂಜಾರ (15;38ಎ, 1ಬೌಂ) ಜ್ಯಾಕ್‌ ಲೀಚ್‌ ಸ್ಪಿನ್‌ ಎಸೆತಕ್ಕೆ ಔಟಾದ ಮೇಲೆ ಗಿಲ್ ತಮ್ಮ ಆತ್ಮವಿಶ್ವಾಸಭರಿತ ಆಟದ ಮೂಲಕ ಭರವಸೆ ಮೂಡಿಸಿದ್ದರು.

ADVERTISEMENT

ಅದೇ ಓವರ್‌ನ ಐದನೇ ಎಸೆತದಲ್ಲಿ ಅಜಿಂಕ್ಯ ರಹಾನೆ ಕೂಡ ಅದೇ ತಪ್ಪು ಮಾಡಿ ಸೊನ್ನೆ ಸುತ್ತಿದರು. ಅನುಭವಿ ಜೇಮ್ಸ್‌ ಕುಣಿದಾಡಿ ಸಂಭ್ರಮಿಸಿದರು. ಮೊದಲ ಇನಿಂಗ್ಸ್‌ನಲ್ಲಿ 91 ರನ್‌ಗಳನ್ನು ಗಳಿಸಿದ್ದ ಪಂತ್ 2ನೇ ಇನಿಂಗ್ಸ್‌ನಲ್ಲಿಯೂ ನಿರೀಕ್ಷೆ ಮೂಡಿಸಿದ್ದರು. ಆದರೆ, ಪಂತ್ 11 ರನ್ ಗಳಿಸಿದ್ದಾಗ ಜೇಮ್ಸ್‌ ಮತ್ತೊಮ್ಮೆ ತಮ್ಮ ಚಾಣಾಕ್ಷತನ ಮೆರೆದರು. ಚೆಂಡಿನ ಚಲನೆಯನ್ನು ಅರಿತು ಆಡುವಲ್ಲಿ ಎಡವಿದ ಪಂತ್ ಹೊಡೆದ ಚೆಂಡನ್ನು ಶಾರ್ಟ್‌ ಕವರ್‌ನಲ್ಲಿದ್ದ ಇಂಗ್ಲೆಂಡ್ ನಾಯಕ ಜೋ ರೂಟ್ ಬೊಗಸೆ ತುಂಬಿಕೊಂಡರು.

ಇದಾದ ಮೇಲೆ ಕ್ರೀಸ್‌ನಲ್ಲಿದ್ದ ವಿರಾಟ್ ಕೊಹ್ಲಿ ತಂಡವನ್ನು ಸೋಲಿ ನಿಂದ ದೂರ ಕೊಂಡೊಯ್ದಲು ಪ್ರಯತ್ನಿಸಿದರು. ಆದರೆ ಇನ್ನೊಂದು ಬದಿಯಲ್ಲಿ ಗಟ್ಟಿಯಾಗಿ ನಿಲ್ಲುವ ಛಲ ಉಳಿದ ವರಿಂದ ಕಂಡುಬರಲಿಲ್ಲ. ಮೊದಲ ಇನಿಂಗ್ಸ್‌ನಲ್ಲಿ ಮಿಂಚಿದ್ದ ವಾಷಿಂಗ್ಟನ್ ಸುಂದರ್ ಖಾತೆಯನ್ನೇ ಆರಂಭಿಸಲಿಲ್ಲ. 46 ಎಸೆತ ಆಡಿ ಒಂಬತ್ತು ರನ್ ಗಳಿಸಿದ ಅಶ್ವಿನ್ ತುಸು ದಿಟ್ಟತನ ತೋರಿದರು. ಆದರೆ, ಸ್ಪಿನ್ನರ್ ಲೀಚ್ ಎಸೆತದಲ್ಲಿ ಔಟಾದರು. 74 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಕೊಹ್ಲಿ ತಮ್ಮ ಆಟದ ವೇಗವನ್ನು ತಗ್ಗಿಸಿದರು. ಅವರು ನಿಧಾನವಾಗಿ ಶತಕದ ಸನಿಹ ಸಾಗಿದರು. ಆದರೆ, ಅವರ ಗುರಿಗೆ ಬೆನ್ ಸ್ಟೋಕ್ಸ್‌ ಅಡ್ಡಿಯಾದರು. ಕೊಹ್ಲಿ ವಿಕೆಟ್‌ ಪತನದೊಂದಿಗೆ ತಂಡದ ಗೆಲುವು ಮತ್ತು ಡ್ರಾ ಮಾಡಿಕೊಳ್ಳುವ ಆಸೆ ಕಮರಿತು. ಬಾಲಂಗೋಚಿ ಬ್ಯಾಟ್ಸ್‌ಮನ್‌ಗಳು ಹೆಚ್ಚು ಪ್ರತಿರೋಧ ಒಡ್ಡಲಿಲ್ಲ.

ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡವು 578 ರನ್‌ಗಳ ಬೃಹತ್ ಮೊತ್ತ ಗಳಿಸಲು ಕಾರಣರಾಗಿದ್ದ ಜೋ ರೂಟ್ (218 ರನ್) ಅವರಿಗೆ ಪಂದ್ಯದ ಆಟಗಾರ ಗೌರವ ನೀಡಲಾಯಿತು. ಭಾರತ ತಂಡವು ಮೊದಲ ಇನಿಂಗ್ಸ್‌ನಲ್ಲಿ 337 ರನ್ ಗಳಿಸಿತ್ತು. ಫಾಲೋ ಆನ್‌ ನೀಡದ ಇಂಗ್ಲೆಂಡ್ ಎರಡನೇ ಇನಿಂಗ್ಸ್‌ನಲ್ಲಿ 178 ರನ್ ಗಳಿಸಿ ಆತಿಥೇಯರಿಗೆ ಕಠಿಣ ಸವಾಲೊಡ್ಡಿತ್ತು.

ಪಂದ್ಯದಲ್ಲಿ ಆರು ವಿಕೆಟ್ ಗಳಿಸಿದ ಜಾಕ್ ಲೀಚ್

ಮಂಡಿಯೆತ್ತರಕ್ಕೆ ದೂಳೆದ್ದ ಪಿಚ್‌ನಲ್ಲಿ ಪರದಾಡಿದ ಬ್ಯಾಟ್ಸ್‌ಮನ್‌ಗಳು

ಟೆಸ್ಟ್ ಕ್ರಿಕೆಟ್‌ನಲ್ಲಿ 3ನೇ ಅರ್ಧಶತಕ ದಾಖಲಿಸಿದ ಶುಭಮನ್ ಗಿಲ್

***

ಈ ಪಂದ್ಯದಲ್ಲಿ ನಾವು ಆಡಿರುವ ರೀತಿಯು ಹೆಮ್ಮೆ ಮೂಡಿಸಿದೆ. ಏಷ್ಯಾದ ಪಿಚ್‌ಗಳಲ್ಲಿ ಪ್ರವಾಸಿ ತಂಡವು ಆಡಬೇಕಾದ ರೀತಿಯ ಮಾದರಿಯನ್ನು ತೋರಿಸಿದ್ದೇವೆ

– ಜೋ ರೂಟ್, ಇಂಗ್ಲೆಂಡ್ ತಂಡದ ನಾಯಕ

***

ಮೊದಲ ಇನಿಂಗ್ಸ್‌ ಬ್ಯಾಟಿಂಗ್ ವೈಫಲ್ಯವು ಹಿನ್ನಡೆಗೆ ಕಾರಣ. 2ನೇ ಇನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಮಾಡುವ ಗುರಿಯಿತ್ತು. ಆದರೆ, ಬ್ಯಾಟ್ಸ್‌ಮನ್‌ಗಳು ಏಕ್ರಾಗತೆ ಕಳೆದುಕೊಂಡರು

– ವಿರಾಟ್ ಕೊಹ್ಲಿ, ಭಾರತ ತಂಡದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.