ಲಾರ್ಡ್ಸ್‌ನಲ್ಲಿ ಗುರುವಾರ ಆರಂಭವಾದ ಮೂರನೇ ಟೆಸ್ಟ್‌ನ ಒಂದೇ ಓವರ್‌ನಲ್ಲಿ ಎರಡು ವಿಕೆಟ್ ಪಡೆದು ಸಂಭ್ರಮಿಸಿದ ನಿತೀಶ್ ಕುಮಾರ್ ರೆಡ್ಡಿ
–ಪಿಟಿಐ ಚಿತ್ರ
ಲಂಡನ್: ಇಂಗ್ಲೆಂಡ್ ತಂಡವು ‘ಎಂಟೆದೆ ಬಂಟರ ಆಟ‘ವೆಂದೇ ಬಿಂಬಿಸಿಕೊಂಡು ಬಂದಿದ್ದ ‘ಬಾಝ್‌ಬಾಲ್’ ಶೈಲಿಯನ್ನು ಲಾರ್ಡ್ಸ್‌ನಲ್ಲಿ ಬದಿಗಿಟ್ಟು, ಸಾಂಪ್ರದಾಯಿಕ ಟೆಸ್ಟ್ ಮಾದರಿಗೆ ಹೊರಳಿತು. ಆ ಮೂಲಕ ಪ್ರವಾಸಿ ಭಾರತ ತಂಡವು ಪ್ರಯಾಸಪಡುವಂತೆ ಮಾಡಿತು.
ಗುರುವಾರ ‘ಹೋಮ್ ಆಫ್ ಕ್ರಿಕೆಟ್’ ಖ್ಯಾತಿಯ ಲಾರ್ಡ್ಸ್‌ನಲ್ಲಿ ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸಿದ್ಧಪಡಿ ಸಿರುವ ಪಿಚ್ ಮೇಲೆ ಹಸಿರು ಗರಿಕೆಗಳಿ ದ್ದವು. ವೇಗ ಮತ್ತು ಬೌನ್ಸ್ ಎಸೆತಗಳಿಗೆ ನೆರವಾಗುವಂತೆ ಮೇಲ್ನೋಟಕ್ಕೆ ಕಂಡಿತ್ತು.
ಸದಾ ಬ್ಯಾಟಿಂಗ್ ಟ್ರ್ಯಾಕ್ ಬಯಸುವ ಇಂಗ್ಲೆಂಡ್ ತಂಡದ ಮುಖ್ಯ ಕೋಚ್ ಬ್ರೆಂಡನ್ ಮೆಕ್ಕಲಂ ಅವರು ಇಲ್ಲಿ ಮಾತ್ರ ‘ಉಪಖಂಡ’ದಲ್ಲಿರು
ವಂತಹ ಪಿಚ್‌ಗಳನ್ನು ಸಿದ್ಧಪಡಿ ಸುವಂತೆ ಮುಖ್ಯ ಪಿಚ್ ಕ್ಯುರೇಟರ್ ಕಾರ್ಲ್ ಮೆಕ್‌ಡರ್ಮಾಟ್ ಅವರಿಗೆ ಹೇಳಿದ್ದರಂತೆ. ಮೆಕ್ಕಲಂ, ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಎಂಸಿಸಿ ಕ್ರಿಕೆಟ್ ಚಟುವಟಿಕೆಗಳ ನಿರ್ದೇಶಕ ರಾಬ್ ಲಿಂಚ್ ಮತ್ತು ಇಂಗ್ಲೆಂಡ್ ತಂಡದ ಆಯ್ಕೆಗಾರ ಲೂಕ್ ರೈಟ್ ಅವರು ಈ ಕುರಿತು ಚರ್ಚೆ ನಡೆಸಿದ್ದರೆಂದು ಇಲ್ಲಿಯ ಪ್ರಮುಖ ಸುದ್ದಿ ಪತ್ರಿಕೆ ‘ಡೇಲಿ ಮೇಲ್’ ವರದಿ ಮಾಡಿದೆ.
ಪಿಚ್‌ನಲ್ಲಿ ಪೇಸ್, ಬೌನ್ಸ್ ಮತ್ತು ವಿಕೆಟ್ ಎರಡೂ ಬದಿಗಳಲ್ಲಿ ಚೆಂಡು ಪರಿಣಾಮಕಾರಿ ಚಲನೆಯಾಗುವಂತೆ ಇರ ಬೇಕು ಎಂದೂ ಮೆಕ್ಕಲಂ ಹೇಳಿದ್ದರಂತೆ.
ಪಿಚ್ ಮೇಲೆ ಗರಿಕೆಗಳನ್ನು ನೋಡಿದವರು ರೋಚಕ ಹಣಾಹಣಿಯ ನಿರೀಕ್ಷೆಯಲ್ಲಿದ್ದರು. ಈಚೆಗೆ ಇಲ್ಲಿ ನಡೆದಿದ್ದ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಣ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಮಾದರಿಯ ಪಂದ್ಯ ನಡೆಯುವ ನಿರೀಕ್ಷೆ ಮೂಡಿಸಿತ್ತು. ಆ ಪಂದ್ಯದ ಮೊದಲ ಹಾಗೂ ಎರಡನೇ ದಿನಗಳಲ್ಲಿ 14 ವಿಕೆಟ್‌ಗಳು ಪತನವಾಗಿದ್ದವು.
ಆದರೆ ಮೆಕ್ಕಲಂ ಮತ್ತು ಅಭಿಮಾನಿಗಳ ನಿರೀಕ್ಷೆಯನ್ನು ಸಂಪೂರ್ಣ ಈಡೇರಿಸುವಂತಹ ಪಿಚ್ ಸಿಗಲಿಲ್ಲ. ಆದರೆ ಚೆಂಡು ನಿಧಾನಗತಿ ಮತ್ತು ಕೆಳಮಟ್ಟದ ಪುಟಿತ ಕಾಣುವಂತೆ ಪಿಚ್ ಇದಾಗಿದೆ. ಸ್ಟೋಕ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬಾಝ್‌ಬಾಲ್ ಯುಗದಲ್ಲಿ ಇಂಗ್ಲೆಂಡ್ ನಾಯಕ ಟಾಸ್ ಗೆದ್ದು ಬ್ಯಾಟಿಂಗ್ ತೆಗೆದುಕೊಳ್ಳುತ್ತಿರುವುದು ಇದು ಎರಡನೇ ಬಾರಿಯಷ್ಟೇ!
ದೊಡ್ಡ ಸ್ಕೋರ್ ಮಾಡಿ ಭಾರತ ತಂಡವನ್ನು ಒತ್ತಡಕ್ಕೆ ತಳ್ಳುವುದು ಅವರ ಯೋಜನೆಯಾಗಿತ್ತು. ಜೋ ರೂಟ್ (ಬ್ಯಾಟಿಂಗ್ 99; 191ಎ, 4X9) ಅವರ ಬ್ಯಾಟಿಂಗ್ ಬಲದಿಂದ ಆತಿಥೇಯ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್‌ಗೆ 251 ರನ್ ಗಳಿಸಿದೆ.
ತಂಡಕ್ಕೆ ಮರಳಿದ ಜಸ್‌ಪ್ರೀತ್ ಬೂಮ್ರಾ ಅವರು ತಮ್ಮ ಆರಂಭಿಕ ಸ್ಪೆಲ್‌ನಲ್ಲಿ ಅಷ್ಟೇನೂ ಪರಿಣಾಮಕಾರಿ ಯಾಗಿರಲಿಲ್ಲ. ಹೆಚ್ಚು ರನ್ ಕೊಡಲಿಲ್ಲ. ಆದರೆ ವಿಕೆಟ್ ಪಡೆಯುವಲ್ಲಿಯೂ ಸಫಲರಾಗಲಿಲ್ಲ. ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಮಿಂಚಿದ್ದ ಆಕಾಶ್ ದೀಪ್ ಅವರೂ ಹೊಸಚೆಂಡಿನಲ್ಲಿ ನಿರೀಕ್ಷಿತ ಲೈನ್ ಮತ್ತು ಲೆಂಗ್ತ್ ನಲ್ಲಿ ಬೌಲಿಂಗ್ ಮಾಡಲಿಲ್ಲ. ಇದರಿಂದಾಗಿ ಆರಂಭಿಕ ಜೋಡಿ ಬೆನ್ ಡಕೆಟ್ ಮತ್ತು ಜಾಕ್ ಕ್ರಾಲಿ ಅವರ ಆಟ ಸರಾಗವಾಗಿ ಸಾಗಿತು. ಇನಿಂಗ್ಸ್‌ನ ಮೊದಲ ಒಂದು ಗಂಟೆಯು ಇಂಗ್ಲೆಂಡ್ ಪಾಲಿಗೆ ಯಾವುದೇ ತೊಂದರೆಯಿಲ್ಲದೇ ಸರಿದುಹೋಯಿತು.
14ನೇ ಓವರ್ ಬೌಲಿಂಗ್ ಮಾಡಿದ ಆಲ್‌ರೌಂಡರ್ ನಿತೀಶ್ ಕುಮಾರ್ (35ಕ್ಕೆ2) ಅವರು ಮೂರು ಎಸೆತಗಳ ಅಂತರದಲ್ಲಿ ಡಕೆಟ್ ಮತ್ತು ಕ್ರಾಲಿ ಅವರಿಗೆ ಪೆವಿಲಿಯನ್ ದಾರಿ ತೋರಿಸಿದರು. ಇದೇ ಓವರ್‌ನಲ್ಲಿ ಗಲ್ಲಿ ಫೀಲ್ಡರ್ ಶುಭಮನ್ ಗಿಲ್ ಅವರು ಒಲಿ ಪೋಪ್ ಅವರ ಕ್ಯಾಚ್ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ. ಇದು ತುಸು ಕಠಿಣ ವಾಗಿತ್ತು. ಅವರ ಪ್ರಯತ್ನಕ್ಕೆ ಫಲ ಸಿಗಲಿಲ್ಲ.
ಪೋಪ್ ಜೊತೆಗೂಡಿದ ‘ಸಾಂಪ್ರದಾಯಿಕ ಶೈಲಿ’ಯ ಬ್ಯಾಟರ್ ರೂಟ್ ಅವರು ತಂಡಕ್ಕೆ ಬಲ ತುಂಬಿದರು. ನಿಧಾನಗತಿ ಮತ್ತು ಕೆಳಹಂತದಲ್ಲಿ ಪುಟಿದು ಬರುತ್ತಿದ್ದ ಚೆಂಡನ್ನು ಟೈಮಿಂಗ್ ಮಾಡುವುದು ಬ್ಯಾಟರ್‌ಗಳಿಗೆ ಸುಲಭವಾಗಿಲ್ಲ. ಭಾರತದ ಬೌಲರ್‌ಗಳಿಗೆ ತಮ್ಮ ತವರಿನಂಗಳಗಳಲ್ಲಿ ಇಂತಹದೇ ಪಿಚ್ ಮೇಲೆ ಆಡಿರುವ ರೂಢಿಯಿದೆ. ಅದರಿಂದಾಗಿ ವಿಕೆಟ್ ಟು ವಿಕೆಟ್ ಎಸೆತಗಳನ್ನು ಪ್ರಯೋಗಿಸಿದರು. ಬ್ಯಾಟರ್‌ಗಳು ರಕ್ಷಣಾತ್ಮಕ ಆಟಕ್ಕೆ ಹೆಚ್ಚು ಒತ್ತು ನೀಡಿದರು.
ರೂಟ್ ಮತ್ತು ಓಲಿ ಪೋಪ್ (44;104ಎ) ಮೂರನೇ ವಿಕೆಟ್‌ಗೆ 109 ರನ್ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು. ಅಪಾಯಕಾರಿಯಾಗಿದ್ದ ಈ ಜೊತೆಯಾಟವನ್ನು ರವೀಂದ್ರ ಜಡೇಜ ಮುರಿದರು. ನಂತರ ಬಂದ ಹ್ಯಾರಿ ಬ್ರೂಕ್ (11) ಅವರನ್ನು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಇರಲು ಬೂಮ್ರಾ ಅವಕಾಶ ನೀಡಲಿಲ್ಲ. ಬಳಿಕ ರೂಟ್ ಅವರನ್ನು ಸೇರಿಕೊಂಡ ನಾಯಕ ಬೆನ್ ಸ್ಟೋಕ್ಸ್ (ಔಟಾಗದೇ 39;102ಎ) ನಿಧಾನಗತಿಯಲ್ಲಿ ರನ್ ಕಲೆಹಾಕುತ್ತಿದ್ದಾರೆ. ಅವರಿಬ್ಬರು ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ 79 ರನ್ ಗಳಿಸಿ, ಎರಡನೇ ದಿನಕ್ಕೆ ಆಟವನ್ನು ಕಾಯ್ದುಕೊಂಡಿದ್ದಾರೆ.
ರೂಟ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ 3,000 ರನ್ (60 ಇನಿಂಗ್ಸ್) ಗಡಿ ದಾಟಿದರು. ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹಿರಿಮೆಗೆ ಪಾತ್ರವಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.