ADVERTISEMENT

IND vs ENG: ವಿರಾಟ್ ಕೊಹ್ಲಿ ಮತ್ತೆ ವೈಫಲ್ಯ; ವ್ಯಾಪಕ ಟ್ರೋಲ್‌ಗೆ ಗುರಿ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 14:35 IST
Last Updated 1 ಜುಲೈ 2022, 14:35 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಎಜ್‌ಬಾಸ್ಟನ್: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಮಗದೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೊಳಗಾಗಿದ್ದಾರೆ.

ಎಜ್‌ಬಾಸ್ಟನ್ ಮೈದಾನದಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಅದೃಷ್ಟ ವಿರಾಟ್ ಕೊಹ್ಲಿ ಅವರಿಗೆ ಸಾಥ್ ಕೊಡಲಿಲ್ಲ.

19 ಎಸೆತಗಳನ್ನು ಎದುರಿಸಿದ ಕೊಹ್ಲಿ 11 ರನ್ ಗಳಿಸಿ ಔಟ್ ಆಗಿ ಪೆವಿಲಿಯನ್‌ಗೆ ಮರಳಿದರು.

ADVERTISEMENT

ಎರಡು ಬೌಂಡರಿ ಬಾರಿಸಿದ್ದ ವಿರಾಟ್, ಉತ್ತಮ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದ್ದರು. ಆದರೆ ಮ್ಯಾಟಿ ಪಾಟ್ಸ್ ದಾಳಿಯಲ್ಲಿ ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು.

ಇದರೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರ ಸತತ ವೈಫಲ್ಯ ಮುಂದುವರಿದಿದೆ. 2019ರಲ್ಲಿ ಕೊಹ್ಲಿ ಕೊನೆಯದಾಗಿ ಶತಕ ಗಳಿಸಿದ್ದರು.

ಅಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿವ್ಯಾಪಕ ಟ್ರೋಲ್‌ಗೆ ಗುರಿಯಾಗಿದ್ದಾರೆ. ಈ ನಡುವೆ ಕಟ್ಟಾ ಅಭಿಮಾನಿಗಳು ವಿರಾಟ್‌ಗೆ ಬೆಂಬಲ ಸೂಚಿಸಿದ್ದಾರೆ.

'ವಿರಾಟ್ ಕೊಹ್ಲಿ ಅವರಿಂದ ಯಾವುದೇ ನಿರೀಕ್ಷೆಯನ್ನು ಇಟ್ಟುಕೊಳ್ಳದಿದ್ದರೂ ಸಹ ನಿರಾಶೆ ಮೂಡಿಸುತ್ತಾರೆ' ಎಂದು ಅಭಿಮಾನಿಯೊಬ್ಬರು ಟ್ವೀಟಿಸಿದ್ದಾರೆ.

'ಯಾವನೇ ಆಟಗಾರನಿಂದಲೂ ಈ ರೀತಿಯಾದ ಅಧಃಪತನ ನೋಡಿರಲಿಲ್ಲ' ಎಂದು ಮತ್ತೊಬ್ಬರು ಕಮೆಂಟಿಸಿದ್ದಾರೆ.

ಈ ಮೊದಲು ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದರು. ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಟೀಮ್ ಇಂಡಿಯಾವನ್ನು ಜಸ್‌ಪ್ರೀತ್ ಬೂಮ್ರಾ ಮುನ್ನಡೆಸುತ್ತಿದ್ದಾರೆ.

ಈ ಮೂಲಕ ಕಪಿಲ್ ದೇವ್ ಬಳಿಕ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಿದ ಮೊದಲ ವೇಗದ ಬೌಲರ್ ಎನಿಸಿದ್ದಾರೆ.

ಕೊರೊನಾ ಸೋಂಕು ತಗುಲಿರುವ ರೋಹಿತ್ ಶರ್ಮಾ ಪ್ರತ್ಯೇಕವಾಸದಲ್ಲಿದ್ದು, ಸೀಮಿತ ಓವರ್‌ಗಳ ಸರಣಿಯ ವೇಳೆಗೆ ತಂಡಕ್ಕೆ ಮರಳುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.