ADVERTISEMENT

IND vs ENG: ಬಿದ್ದ ಅಂಗಳದಲ್ಲೇ ಪುಟಿದೆದ್ದ ಭಾರತ

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಹಾದಿಯಲ್ಲಿ ಮೊದಲ ಮೆಟ್ಟಿಲೇರಿದ ವಿರಾಟ್ ಬಳಗ; ಅಕ್ಷರ್‌ಗೆ ಐದು ವಿಕೆಟ್‌

ಪಿಟಿಐ
Published 16 ಫೆಬ್ರುವರಿ 2021, 19:51 IST
Last Updated 16 ಫೆಬ್ರುವರಿ 2021, 19:51 IST
ಇಂಗ್ಲೆಂಡ್‌ ವಿರುದ್ಧ ಅಕ್ಷರ್ ಪಟೇಲ್‌ ಐದು ವಿಕೆಟ್‌ ಪಡೆದು ಸಂಭ್ರಮಿಸಿದರು.
ಇಂಗ್ಲೆಂಡ್‌ ವಿರುದ್ಧ ಅಕ್ಷರ್ ಪಟೇಲ್‌ ಐದು ವಿಕೆಟ್‌ ಪಡೆದು ಸಂಭ್ರಮಿಸಿದರು.   

ಚೆನ್ನೈ: ಪದಾರ್ಪಣೆಯ ಟೆಸ್ಟ್‌ನಲ್ಲಿಯೇ ವಿಕೆಟ್‌ಗಳ ಪಂಚಗುಚ್ಛ ಗಳಿಸಿದ ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಮತ್ತು ಆಫ್‌ಸ್ಪಿನ್ನರ್ ಆರ್. ಅಶ್ವಿನ್ ಬೌಲಿಂಗ್‌ ಮುಂದೆ ಇಂಗ್ಲೆಂಡ್ ತಂಡ ಮಂಡಿಯೂರಿತು.

ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 2ನೇ ಟೆಸ್ಟ್‌ನ ನಾಲ್ಕನೇ ದಿನವೇ ಆತಿಥೇಯ ಬಳಗವು ಜೋ ರೂಟ್ ಪಡೆಯ ವಿರುದ್ಧ 317 ರನ್‌ಗಳಿಂದ ಜಯಿಸಿತು. ನಾಲ್ಕು ಪಂದ್ಯಗಳ ಸರಣಿಯಲ್ಲಿ 1–1ರಿಂದ ಸಮಬಲ ಸಾಧಿಸಿತು. ಇದೇ ಅಂಗಳದಲ್ಲಿ ಹೋದ ವಾರ 227 ರನ್‌ಗಳಿಂದ ಸೋತಿದ್ದ ವಿರಾಟ್ ಕೊಹ್ಲಿ ಬಳಗವು ಮುಯ್ಯಿ ತೀರಿಸಿಕೊಂಡಿತು.

ಸ್ಪಿನ್ನರ್‌ ಸ್ನೇಹಿ ಪಿಚ್‌ನಲ್ಲಿ 482 ರನ್‌ಗಳ ಬೃಹತ್ ಗೆಲುವಿನ ಗುರಿಯನ್ನು ಬೆನ್ನಟ್ಟಿದ ರೂಟ್ ಪಡೆಯು 54.2 ಓವರ್‌ಗಳಲ್ಲಿ 164 ರನ್‌ ಗಳಿಸಿ ಸರ್ವಪತನವಾಯಿತು. ಇಂಗ್ಲೆಂಡ್ ಎದುರು ಇದು ದೊಡ್ಡ ಅಂತರದ ಜಯ. 1986ರಲ್ಲಿ ಲೀಡ್ಸ್‌ನಲ್ಲಿ ಭಾರತ ತಂಡವು 279 ರನ್‌ಗಳಿಂದ ಗೆದ್ದಿತ್ತು. ಸೋಮವಾರ ದಿನದಾಟದ ಮುಕ್ತಾ ಯಕ್ಕೆ ಇಂಗ್ಲೆಂಡ್ ತಂಡವು ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗಳಿಗೆ 53 ರನ್ ಗಳಿಸಿತ್ತು. ಕ್ರೀಸ್‌ನಲ್ಲಿದ್ದ ಡೇನಿಲ್ ಲಾರೆನ್ಸ್‌ ಮತ್ತು ನಾಯಕ ಜೋ ರೂಟ್ ಮಂಗಳವಾರ ಇನಿಂಗ್ಸ್‌ಗೆ ಸ್ಥಿರತೆ ಒದಗಿಸುವ ಪ್ರಯತ್ನ ಮಾಡಿದರು.

ADVERTISEMENT

ಆದರೆ, ಈ ಜೊತೆಯಾಟವನ್ನು ಮುರಿಯುವಲ್ಲಿ ಅಶ್ವಿನ್ ಯಶಸ್ವಿ ಯಾದರು.ಅಶ್ವಿನ್ ಎಸೆತದಲ್ಲಿ ಬೀಟ್ ಆದ ಲಾರೆನ್ಸ್‌ (26; 53ಎ, 2ಬೌಂ, 1ಸಿ) ಅವರನ್ನು ವಿಕೆಟ್‌ಕೀಪರ್ ರಿಷಭ್ ಪಂತ್ ಸ್ಟಂಪಿಂಗ್ ಮಾಡಿದರು. ಕ್ರೀಸ್‌ಗೆ ಬಂದ ಬೆನ್ ಸ್ಟೋಕ್ಸ್‌ ಅವರು ರೂಟ್ ಜೊತೆಗೂಡಿ ತಾಳ್ಮೆಯ ಆಟ ವಾಡಿದರು. ಸ್ಟೋಕ್ಸ್‌ ಕೇವಲ 8 ರನ್ ಗಳಿಸಲು 51 ಎಸೆತಗಳನ್ನು ಆಡಿದರು. ಈ ಜೊತೆಯಾಟಕ್ಕೂ ಅಶ್ವಿನ್ ತಡೆಯೊಡ್ಡಿದರು. ಸ್ಟೋಕ್ಸ್ ವಿಕೆಟ್ ಅನ್ನು ಗಳಿಸಿದರು.

ಇಲ್ಲಿಂದ ಅಕ್ಷರ್ ಆಟ ಶುರು ವಾಯಿತು. ಒಲಿ ಪೋಪ್ (12 ರನ್) ವಿಕೆಟ್ ಪಡೆದ ಅಕ್ಷರ್, 50ನೇ ಓವರ್‌ನಲ್ಲಿ ಜೋ ರೂಟ್ (33; 92ಎ) ವಿಕೆಟ್‌ ಕೂಡ ಕಬಳಿಸಿದರು. ಮೊದಲ ಇನಿಂಗ್ಸ್‌ನಲ್ಲಿಯೂ ರೂಟ್‌ ವಿಕೆಟ್ ಪಡೆದಿದ್ದರು ಈ ಎಡಗೈ ಸ್ಪಿನ್ನರ್.

ಇನಿಂಗ್ಸ್‌ನ ಕೊನೆಯ ವಿಕೆಟ್ ಒಲಿ ಸ್ಟೋನ್‌ ಕೂಡ ಅಕ್ಷರ್ ಬೀಸಿದ ಎಲ್‌ಬಿಡಬ್ಲು ಬಲೆಯಲ್ಲಿ ಬಿದ್ದರು. ಇಂಗ್ಲೆಂಡ್ ಎದುರು ಪದಾರ್ಪಣೆ ಪಂದ್ಯದಲ್ಲಿ 5 ವಿಕೆಟ್ ಗಳಿಸಿದ ಭಾರತದ ಎರಡನೇ ಬೌಲರ್ ಆದರು. 89 ವರ್ಷಗಳ ಹಿಂದೆ ಮೊಹಮ್ಮದ್ ನಿಸಾರ್ ಈ ಸಾಧನೆ ಮಾಡಿದ್ದರು. ಇದಕ್ಕೂ ಮುನ್ನ ಮಿಂಚಿನ ಬ್ಯಾಟಿಂಗ್ ಮಾಡಿದ ಮೋಯಿನ್ ಅಲಿ (43; 18ಎ, 3ಬೌಂ, 5ಸಿ) ಮತ್ತು ಬೆನ್ಫೋಕ್ಸ್‌ ಅವರ ವಿಕೆಟ್‌ಗಳನ್ನು ಕುಲದೀಪ್ ಕಬಳಿಸಿದರು.

ಮೂರನೇ ಟೆಸ್ಟ್ ಟಿಕೆಟ್ ಮಾರಾಟ: ಭಾರತ –ಇಂಗ್ಲೆಂಡ್ ನಡುವಣ ಮೂರನೇ ಟೆಸ್ಟ್ ಪಂದ್ಯದ ಎಲ್ಲ ಟಿಕೆಟ್‌ಗಳು ಮಾರಾಟವಾಗಿವೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕೋಲ್ಕತ್ತದಲ್ಲಿ ತಿಳಿಸಿದ್ದಾರೆ.

ಟೀಕೆಗಳಿಗೆ ಕೊಹ್ಲಿ ತಿರುಗೇಟು
‌ಚೆಪಾಕ್ ಪಿಚ್‌ನಲ್ಲಿ ಚೆಂಡು ತಿರುಗುತ್ತಿದ್ದ ರೀತಿಗೆ ಆತಂಕಪಡದೇ ಆಡಿದ್ದು ತಮ್ಮ ತಂಡದ ಯಶಸ್ಸಿಗೆ ಕಾರಣ. ಇದೇ ಪಿಚ್‌ನಲ್ಲಿ ತಂಡವು 600ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿತು ಎಂದು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದರು.

ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಸೇರಿದಂತೆ ಕೆಲವರು, ’ದೂಳಿನ ಬಟ್ಟಲು‘ ಎಂದು ಪಿಚ್‌ ಬಗ್ಗೆ ಮಾಡಿದ್ದ ಟೀಕೆಗೆ ಕೊಹ್ಲಿ ತಿರುಗೇಟು ಕೊಟ್ಟರು. ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಟಾಸ್ ಜಯಿಸಿದ್ದು ಮಾತ್ರ ಪಂದ್ಯದಲ್ಲಿ ಮೇಲುಗೈ ಸಾಧಿಸಲು ಕಾರಣವಲ್ಲ. ಪಂದ್ಯದ ಪ್ರತಿಯೊಂದು ಹಂತದಲ್ಲಿ ಉತ್ತಮ ಆಟದಿಂದ ಸಾಧಿಸಿದ ಹಿಡಿತವು ಕಾರಣವಾಯಿತು‘ ಎಂದರು.

ಮೊದಲ ಪಂದ್ಯದಲ್ಲಿ ಭಾರತ ಸೋತಾಗ ಯಾಕೆ ದೂರಲಿಲ್ಲ. ಈಗ ಇಂಗ್ಲೆಂಡ್ ಸೋತಿದ್ದಕ್ಕೆ ಪಿಚ್ ಕಾರಣವೆಂದು ಹೇಳುವುದು ಎಷ್ಟು ಸರಿ ಎಂದು ಆಸ್ಟ್ರೇಲಿಯಾದ ಮಾಜಿ ಆಟಗಾರ ಶೇನ್ ವಾರ್ನ್ ಪ್ರಶ್ನಿಸಿದ್ದಾರೆ.

ಗಿಲ್‌ಗೆ ಗಾಯ
ಭಾರತ ತಂಡದ ಯುವ ಆಟಗಾರ ಶುಭಮನ್ ಗಿಲ್ ಅವರ ಮುಂಗೈಗೆ ಪೆಟ್ಟಾಗಿದ್ದು ಸ್ಕ್ಯಾನಿಂಗ್‌ ಮಾಡಿಸಲಾಗಿದೆ ಎಂದು ತಂಡದ ಮೂಲಗಳು ತಿಳಿಸಿವೆ. ಸೋಮವಾರ ಅವರು ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಚೆಂಡು ಎಡಗೈಗೆ ಬಡಿದು ಪೆಟ್ಟಾಗಿತ್ತು. ಆದ್ದರಿಂದ ಮೂಳೆಗೆ ಪೆಟ್ಟುಬಿದ್ದಿರುವ ಸಾಧ್ಯತೆ ಇರುವುದರಿಂದ ಸ್ಕ್ಯಾನಿಂಗ್ ಮಾಡಿಸಲಾಗಿದೆ ಎಂದು ಮೂಲಗಳು ಹೇಳಿವೆ.

ನಿಯಮ ಉಲ್ಲಂಘನೆ: ಚೆಪಾಕ್ ಕ್ರೀಡಾಂಗಣದಲ್ಲಿ ಪ್ರೇಕ್ಷಕರೊಬ್ಬರು ಬಯೋಬಬಲ್ ನಿಯಮ ಉಲ್ಲಂಘಿಸಿದ ಘಟನೆ ಸೋಮವಾರ ನಡೆದಿದೆ. ಭಾರತ ಮತ್ತು ಇಂಗ್ಲೆಂಡ್ ತಂಡಗಳ ಆಟಗಾರರು ಅಭ್ಯಾಸ ಮಾಡುವ ಸ್ಥಳಕ್ಕೆ ಪ್ರವೇಶಿಸಿದ ವ್ಯಕ್ತಿಯೊಬ್ಬರಿಗೆ ಭದ್ರತಾ ಸಿಬ್ಬಂದಿಯು ಎಚ್ಚರಿಕೆ ನೀಡಿ ಕಳಿಸಿದೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.