ಅಹಮದಾಬಾದ್: ಆರಂಭ ಆಟಗಾರ ಶುಭಮನ್ ಗಿಲ್ ಅವರ ಆಕರ್ಷಕ ಶತಕ ಸೇರಿದಂತೆ ಬ್ಯಾಟರ್‌ಗಳ ಉತ್ತಮ ಪ್ರದರ್ಶನದ ನೆರವಿನಿಂದ ಭಾರತ ತಂಡ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಬುಧವಾರ ಇಂಗ್ಲೆಂಡ್ ತಂಡವನ್ನು 142 ರನ್‌ಗಳಿಂದ ಸದೆಬಡಿಯಿತು. ಸರಣಿಯನ್ನು 3–0 ಯಿಂದ ಕ್ಲೀನ್‌ಸ್ವೀಪ್ ಮಾಡಿತು.
ಭಾರತ ಆಟದ ಎಲ್ಲ ವಿಭಾಗಗಳ ಲ್ಲಿ ವಿಜೃಂಭಿಸಿತು. ಸರಣಿಯಲ್ಲಿ ಎರಡು ಅರ್ಧಶತಕಗಳನ್ನು ಗಳಿಸಿ ಮಿಂಚಿದ್ದ ಉಪನಾಯಕ ಗಿಲ್ (112) ಅವರು ಏಕದಿನ ಮಾದರಿಯಲ್ಲಿ ಏಳನೇ ಶತಕ ದಾಖಲಿಸಿದರು. ಲಯಕ್ಕೆ ಮರಳಿದ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ (52, 55 ಎಸೆತ) ಲಗುಬಗನೇ ಅರ್ಧಶತಕ ಬಾರಿಸಿದರೆ, ಶ್ರೇಯಸ್ ಅಯ್ಯರ್ (78, 64ಎ) ಮತ್ತೊಮ್ಮೆ ಮಿಂಚಿನ ಆಟವಾಡಿದರು. ಭಾರತ ಕೊನೆಯ ಎಸೆತದಲ್ಲಿ ಆಲೌಟ್ ಆದ ಭಾರತ 356 ರನ್‌ಗಳ ಭಾರಿ ಮೊತ್ತ ಗಳಿಸಿತು.
ಬ್ಯಾಟರ್‌ಗಳ ಅಬ್ಬರದ ನಂತರ ಬೌಲರ್‌ಗಳು ಸಾಂಘಿಕ ಪ್ರದರ್ಶನ ನೀಡಿ ಪ್ರವಾಸಿ ತಂಡವನ್ನು 34.2 ಓವರುಗಳಲ್ಲಿ 214 ರನ್‌ಗಳಿಗೆ ಉರುಳಿಸಿ ಅಧಿಕಾರಯುತವಾಗಿ ಪಂದ್ಯ ಗೆಲ್ಲಲು ನೆರವಾದರು. ರನ್‌ಗಳ ಆಧಾರದಲ್ಲಿ ಇದು ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಎರಡನೇ ಅತಿ ದೊಡ್ಡ ಜಯ.
ಇಂಗ್ಲೆಂಡ್ ಕಥೆ ಇಲ್ಲೂ ಭಿನ್ನವಾಗಿರಲಿಲ್ಲ. ಬೆನ್ ಡಕೆಟ್ (34) ಮತ್ತು ಫಿಲ್ ಸಾಲ್ಟ್ (24) ಅವರಿಂದ ಪ್ರವಾಸಿ ತಂಡ ಬಿರುಸಿನ ಆರಂಭ ಪಡೆಯಿತು. 6.2 ಓವರುಗಳಲ್ಲಿ 60 ರನ್‌ಗಳು
ಹರಿದುಬಂದಿದ್ದವು. ಆದರೆ ನಂತರ ನಿಯಮಿತವಾಗಿ ವಿಕೆಟ್‌ಗಳು ಪತನಗೊಂಡವು. ಪಂದ್ಯ ಮುಂದುವರಿದಂತೆ ಪಿಚ್‌ನಲ್ಲಿ ಸ್ಟ್ರೋಕ್‌ಗಳನ್ನು ಆಡುವುದೂ ಸುಲಭವಾಗಿರಲಿಲ್ಲ. ಭಾರತದ ಎದುರು ಮೊದಲ ಪಂದ್ಯ ಆಡಿದ ಟಾಮ್ ಬ್ಯಾಂಟನ್ 41 ಎಸೆತ
ಗಳಲ್ಲಿ 38 ರನ್ ಗಳಿಸಿದರು. 10 ಓವರುಗಳಲ್ಲಿ 2 ವಿಕೆಟ್‌ಗೆ 84 ರನ್ ಗಳಿಸಿದ್ದ ಇಂಗ್ಲೆಂಡ್ ಹೋರಾಟ ನಂತರ ಕ್ಷೀಣಿಸತೊಡಗಿತು.
ಎಡಗೈ ವೇಗಿ ಆರ್ಷದೀಪ್ ಸಿಂಗ್ (33ಕ್ಕೆ3) ಆರಂಭ ಆಟಗಾರರ ವಿಕೆಟ್ ಪಡೆದರು. ಹರ್ಷಿತ್ ರಾಣಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು.
ಗಿಲ್ ಸೊಬಗಿನಾಟ: ಉತ್ತಮ ಲಯದಲ್ಲಿರುವ ಗಿಲ್, ಇದಕ್ಕೆ ಮೊದಲು ಭಾರತ ತಂಡದ ಇನಿಂಗ್ಸ್‌ಗೆ ಬಲ ತುಂಬಿದರು. ಅವರಿಗೆ ಕೊಹ್ಲಿ ಮತ್ತು ಅಯ್ಯರ್ ಉತ್ತಮ ಬೆಂಬಲ ನೀಡಿದರು. ಕೊಹ್ಲಿ ಜೊತೆ 116 ರನ್ ಸೇರಿಸಿದರೆ, ಶ್ರೇಯಸ್ ಅಯ್ಯರ್ ಜೊತೆ 104 ರನ್ ಜೊತೆಯಾಟವಾಡಿದರು. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತ ತಂಡದ ಉಪನಾಯಕ, ಮೂರೂ ಮಾದರಿಯ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಶತಕ ಬಾರಿಸಿದ ಅಪರೂಪದ ದಾಖಲೆಗೆ ಪಾತ್ರರಾದರು.
ವೇಗಿಗಳನ್ನು ಮತ್ತು ಸ್ಪಿನ್ನರ್‌ಗಳನ್ನು ದಂಡಿಸುವಲ್ಲಿ ಗಿಲ್ ಭೇದ ತೋರಲಿಲ್ಲ. ಅವರ ಫುಟ್‌ವರ್ಕ್ ಪರಿಪೂರ್ಣವಾಗಿದ್ದಂತೆ ಕಂಡಿತು. ಅಂತಿಮವಾಗಿ ಅವರು ಅದಿಲ್ ರಶೀದ್ (64ಕ್ಕೆ4) ಬೌಲಿಂಗ್‌ನಲ್ಲಿ ಸ್ವೀಪ್ ಮಾಡಲು ಯತ್ನಿಸಿ ಬೌಲ್ಡ್ ಆದರು. ಅವರ ಆಟದಲ್ಲಿ 14 ಬೌಂಡರಿ, ಮೂರು ಸಿಕ್ಸರ್‌ಗಳಿದ್ದವು.
ಕೊಹ್ಲಿ ಬೇರೂರಲು ಕೊಂಚ ಸಮಯ ತೆಗೆದುಕೊಂಡ ನಂತರ ಸರಾಗವಾಗಿ ಆಡತೊಡಗಿದರು. 73ನೇ
ಅರ್ಧಶತಕದ ಹಾದಿಯಲ್ಲಿ ಆಕರ್ಷಕ ಡ್ರೈವ್‌ಗಳನ್ನು
ಪ್ರದರ್ಶಿಸಿದರು. ಅದಿಲ್ ರಶೀದ್ ಅವರ ಲೆಗ್‌ಬ್ರೇಕ್ ಎಸೆತದಲ್ಲಿ ಕೊಹ್ಲಿ ವಿಕೆಟ್‌ಕೀಪರ್‌ಗೆ ಕ್ಯಾಚ್ ನೀಡಿದರು. ಅವರು ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಅವರ ವಿಕೆಟ್ ಅನ್ನು ಐದನೇ ಬಾರಿ ಪಡೆದಂತಾಯಿತು. ಅವರು ಏಕದಿನ ಮಾದರಿಯಲ್ಲಿ 14,000 ರನ್ ದಾಟಲು 37 ರನ್ ದೂರವಿದ್ದಾರೆ. ಈ ಹಿಂದಿನ ಪಂದ್ಯದಲ್ಲಿ ಶತಕ ಬಾರಿಸಿದ್ದ ನಾಯಕ ರೋಹಿತ್ ಶರ್ಮಾ ಇಲ್ಲಿ ಬೇಗನೇ ನಿರ್ಗಮಿಸಿದರು.
ವಿಶ್ರಾಂತಿ: ಈ ಪಂದ್ಯಕ್ಕೆ ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜ ಅವರಿಗೆ ವಿಶ್ರಾಂತಿ ನೀಡಿತು. ಮೀನಖಂಡದ ಗಾಯದಿಂದ ಸ್ಪಿನ್ನರ್ ವರುಣ್ ಚಕ್ರವರ್ತಿ ಆಡಲಿಲ್ಲ. ಹೀಗಾಗಿ ಸ್ಪಿನ್ನರ್‌ಗಳಾದ ವಾಷಿಂಗ್ಟನ್ ಸುಂದರ್ ಮತ್ತು ಕುಲದೀಪ್ ಯಾದವ್ ಅವಕಾಶ ಪಡೆದರು.
ಸ್ಕೋರ್ ಕಾರ್ಡ್
ಸ್ಕೋರ್ ಕಾರ್ಡ್
ಭಾರತ: 356 (50 ಓವರುಗಳಲ್ಲಿ)
ರೋಹಿತ್ ಸಿ ಸಾಲ್ಟ್ ಬಿ ವುಡ್ 1 (2ಎ)
ಗಿಲ್ ಬಿ ರಶೀದ್ 112 (102, 4x14, 6x3)
ಕೊಹ್ಲಿ ಸಿ ಸಾಲ್ಟ್ ಬಿ ರಶೀದ್ 52 (55ಎ, 4x7, 6x1)
ಶ್ರೇಯಸ್ ಸಿ ಸಾಲ್ಟ್ ಬಿ ರಶೀದ್ 78 (64ಎ, 4x8, 6x2)
ರಾಹುಲ್ ಎಲ್‌ಬಿಡಬ್ಲ್ಯು ಬಿ ಮಹಮೂದ್ 40 (29ಎ, 4x3, 6x1)
ಹಾರ್ದಿಕ್ ಬಿ ರಶೀದ್ 17 (9ಎ, 6x2)
ಅಕ್ಷರ್ ಸಿ ಬ್ಯಾಂಟನ್ ಬಿ ರೂಟ್ 13 (12, 4x2)
ಸುಂದರ್ ಸಿ ಬ್ರೂಕ್ ಬಿ ವುಡ್ 14 (14ಎ, 4x1)
ಹರ್ಷಿತ್ ಸಿ ಬಟ್ಲರ್ ಬಿ ಅಟ್ಕಿನ್ಸನ್ 13 (10ಎ, 4x1, 6x1)
ಅರ್ಷದೀಪ್ ರನೌಟ್ (ಸಾಲ್ಟ್) 2 (2ಎ)
ಕುಲದೀಪ್ ಔಟಾಗದೇ 1 (1ಎ)
ಇತರೆ 13 (ಲೆಗ್‌ಬೈ 1, ವೈಡ್ 12)
ವಿಕೆಟ್ ಪತನ: 1–6 (ರೋಹಿತ್ ಶರ್ಮಾ, 1.1), 2–122 (ವಿರಾಟ್ ಕೊಹ್ಲಿ, 18.6), 3–226 (ಶುಭಮನ್ ಗಿಲ್, 34.3), 4–259 (ಶ್ರೇಯಸ್ ಅಯ್ಯರ್, 38.2), 5–289 (ಹಾರ್ದಿಕ್ ಪಾಂಡ್ಯ, 40.6), 6–307 (ಅಕ್ಷರ್ ಪಟೇಲ್, 43.5), 7–333 (ಕೆ.ಎಲ್.ರಾಹುಲ್, 46.4), 8–353 (ಹರ್ಷಿತ್ ರಾಣಾ, 48.6), 9–353 (ವಾಷಿಂಗ್ಟನ್ ಸುಂಧರ್, 49.3), 10–356 (ಅರ್ಷದೀಪ್ ಸಿಂಗ್, 49.6)
ಬೌಲಿಂಗ್: ಸಖಿಬ್ ಮಹಮೂದ್ 10–0–68–1; ಮಾರ್ಕ್ ವುಡ್ 9–1–45–2; ಗಸ್ ಅಟ್ಕಿನ್ಸನ್ 8–0–74–1; ಜೋ ರೂಟ್ 5–0–47–1; ಅದಿಲ್ ರಶೀದ್ 10–0–64–4; ಲಿಯಾಮ್ ಲಿವಿಂಗ್‌ಸ್ಟೋನ್ 8–0–57–0.
ಇಂಗ್ಲೆಂಡ್: 214 (34.2 ಓವರುಗಳಲ್ಲಿ)
ಸಾಲ್ಟ್ ಸಿ ಅಕ್ಷರ್ ಬಿ ಅರ್ಷದೀಪ್ 23 (21ಎ, 4x4)
ಡಕೆಟ್ ಸಿ ಶರ್ಮಾ ಬಿ ಅರ್ಷದೀಪ್ 34 (22ಎ, 4x8)
ಬ್ಯಾಂಟನ್ ಸಿ ರಾಹುಲ್ ಬಿ ಕುಲದೀಪ್ 38 (41ಎ, 4x4, 6x2)
ರೂಟ್ ಬಿ ಪಟೇಲ್ 24 (29ಎ, 4x2)
ಬ್ರೂಕ್ ಬಿ ಹರ್ಷಿತ್ 19 (26ಎ, 4x1, 6x1)
ಬಟ್ಲರ್ ಬಿ ಹರ್ಷಿತ್ 6 (9ಎ)
ಲಿವಿಂಗ್‌ಸ್ಟೋನ್ ಸ್ಟಂ ರಾಹುಲ್ ಬಿ ಸುಂದರ್ 9 (23ಎ, 4x1)
ಅಟ್ಕಿನ್ಸನ್ ಬಿ ಪಟೇಲ್ 38 (19ಎ, 4x6, 6x1)
ರಶೀದ್ ಬಿ ಪಾಂಡ್ಯ 0 (5)
ವುಡ್ ಸಿ ಅಯ್ಯರ್ ಬಿ ಪಾಂಡ್ಯ 9 (7ಎ, 4x2)
ಸಖಿಬ್ ಔಟಾಗದೇ 2 (4ಎ)
ಇತರೆ 12 (ಬೈ 5, ಲೆಗ್‌ಬೈ 4, ವೈಡ್ 3)
ವಿಕೆಟ್ ಪತನ: 1–60 (ಬೆನ್ ಡಕೆಟ್, 6.2), 2–80 (ಫಿಲ್ ಸಾಲ್ಟ್, 8.4), 3–126 (ಟಾಮ್ ಬ್ಯಾಂಟನ್, 17.6), 4–134 (ಜೋ ರೂಟ್, 20.2), 5–154 (ಜೋಸ್ ಬಟ್ಲರ್, 24.1), 6–161 (ಹ್ಯಾರಿ ಬ್ರೂಕ್, 26.6), 7–174 (ಲಿಯಾಮ್ ಲಿವಿಂಗ್‌ಸ್ಟೋನ್, 29.3), 8–175 (ಅದಿಲ್ ರಶೀದ್, 30.3), 9–192 (ಮಾರ್ಕ್ ವುಡ್, 32.1), 10–214 (ಗಸ್ ಅಟ್ಕಿನ್ಸನ್ 34.2)
ಬೌಲಿಂಗ್: ಅರ್ಷದೀಪ್ ಸಿಂಗ್ 5–0–33–2; ಹರ್ಷಿತ್ ರಾಣಾ 5–1–31–2; ವಾಷಿಂಗ್ಟನ್ ಸುಂದರ್ 5–0–43–1; ಅಕ್ಷರ್ ಪಟೇಲ್ 6.2–1–22–1; ಹಾರ್ದಿಕ್ ಪಾಂಡ್ಯ 5–0–38–2; ಕುಲದೀಪ್ ಯಾದವ್ 8–0–38–1
ಪಂದ್ಯದ ಆಟಗಾರ:
ಭಾರತಕ್ಕೆ 142 ರನ್ ಜಯ
ಸರಣಿಯಲ್ಲಿ 3–0 ಗೆಲುವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.