ADVERTISEMENT

IND vs ENG: ರೋಹಿತ್, ರಾಹುಲ್ ಸಾಲಿಗೆ ಸೂರ್ಯಕುಮಾರ್ ಯಾದವ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜುಲೈ 2022, 1:39 IST
Last Updated 11 ಜುಲೈ 2022, 1:39 IST
ಸೂರ್ಯಕುಮಾರ್ ಯಾದವ್
ಸೂರ್ಯಕುಮಾರ್ ಯಾದವ್   

ನಾಟಿಂಗ್‌ಹ್ಯಾಮ್: ಭಾರತ ಕ್ರಿಕೆಟ್ ತಂಡದ ಬಲಗೈ ಬ್ಯಾಟರ್ ಸೂರ್ಯಕುಮಾರ್ ಯಾದವ್ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಗಳಿಸಿದ ಸಾಧನೆ ಮಾಡಿದ್ದಾರೆ.

ಟ್ರೆಂಟ್ ಬ್ರಿಡ್ಜ್‌ ಮೈದಾನದಲ್ಲಿ ಭಾನುವಾರ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯ, ಜೀವನಶ್ರೇಷ್ಠ ಬ್ಯಾಟಿಂಗ್ ಸಾಧನೆ ಮಾಡಿದರು.

ಈ ಮೂಲಕ ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಭಾರತದ ಐದನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಭಾಜರಾದರು.

ಈ ಹಿಂದೆ ರೋಹಿತ್ ಶರ್ಮಾ (ಎರಡು ಬಾರಿ), ಸುರೇಶ್ ರೈನಾ, ಕೆ.ಎಲ್. ರಾಹುಲ್ ಹಾಗೂ ದೀಪಕ್ ಹೂಡಾ ಶತಕ ಗಳಿಸಿದ್ದರು. ಈ ಪೈಕಿ ಹೂಡಾ, ಕಳೆದಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಸೆಂಚುರಿ ಬಾರಿಸಿದ್ದರು.

ಹಾಗೆಯೇ ನಾಲ್ಕು ಅಥವಾ ಅದಕ್ಕಿಂತಲೂ ಕೆಳ ಕ್ರಮಾಂಕದಲ್ಲಿ ಕ್ರೀಸಿಗಿಳಿದು ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಭಾರತದ ಎರಡನೇ ಬ್ಯಾಟರ್ ಎನಿಸಿದ್ದಾರೆ. ಕನ್ನಡಿಗ ರಾಹುಲ್, ವೆಸ್ಟ್‌ಇಂಡೀಸ್ ವಿರುದ್ಧ ನಾಲ್ಕನೇ ಕ್ರಮಾಂಕದಲ್ಲಿ ಶತಕ ಗಳಿಸಿದ್ದರು.

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದಿದ್ದ ಸೂರ್ಯ, ಕೇವಲ 55 ಎಸೆತಗಳಲ್ಲಿ 117 ರನ್ ಗಳಿಸಿದರು. ಅವರ ಮನಮೋಹಕ ಇನಿಂಗ್ಸ್‌ನಲ್ಲಿ14 ಬೌಂಡರಿ ಹಾಗೂ ಆರು ಸಿಕ್ಸರ್‌ಗಳು ಸೇರಿದ್ದವು.

ಸೂರ್ಯಕುಮಾರ್ ಶತಕದ ಹೊರತಾಗಿಯೂ ಇಂಗ್ಲೆಂಡ್ ವಿರುದ್ಧದ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಭಾರತ 17 ರನ್ ಅಂತರದ ಸೋಲಿಗೆ ಶರಣಾಯಿತು. 216 ರನ್ ಗುರಿ ಬೆನ್ನಟ್ಟಿದ್ದ ಭಾರತ ಒಂಬತ್ತು ವಿಕೆಟ್ ನಷ್ಟಕ್ಕೆ 198 ರನ್ ಗಳಿಸಲಷ್ಟೇ ಶಕ್ತವಾಯಿತು.

ಆದರೂ ಮೊದಲೆರಡು ಪಂದ್ಯಗಳಲ್ಲಿ ಜಯ ಗಳಿಸಿದ್ದ ರೋಹಿತ್ ಶರ್ಮಾ ಬಳಗವು, ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 2-1ರ ಅಂತರದಿಂದ ವಶಪಡಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.