ADVERTISEMENT

IND vs ENG Test: ಪದಾರ್ಪಣೆ ಮಾಡಿದ ಪಡಿಕ್ಕಲ್‌

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 23:30 IST
Last Updated 7 ಮಾರ್ಚ್ 2024, 23:30 IST
<div class="paragraphs"><p>ದೇವದತ್ತ ಪಡಿಕ್ಕಲ್‌ (ಸಂಗ್ರಹ ಚಿತ್ರ)</p></div>

ದೇವದತ್ತ ಪಡಿಕ್ಕಲ್‌ (ಸಂಗ್ರಹ ಚಿತ್ರ)

   

ಧರ್ಮಶಾಲಾ: ಎಡಗೈ ಬ್ಯಾಟರ್‌ ದೇವದತ್ತ ಪಡಿಕ್ಕಲ್‌ ಅವರು ಭಾರತ ಟೆಸ್ಟ್‌ ತಂಡಕ್ಕೆ ಗುರುವಾರ ಪದಾರ್ಪಣೆ ಮಾಡಿದರು. ನೂರನೇ ಟೆಸ್ಟ್‌ ಮೈಲಿಗಲ್ಲು ತಲುಪಿದ ಆರ್‌.ಅಶ್ವಿನ್ ಅವರು ಕರ್ನಾಟಕದ ಆಟಗಾರನಿಗೆ ‘ಟೆಸ್ಟ್‌ ಕ್ಯಾಪ್‌’ ನೀಡಿದರು. ಅವರು ಟೆಸ್ಟ್‌ಗೆ ಕಾಲಿಟ್ಟ ಭಾರತದ 314ನೇ ಹಾಗೂ ಕರ್ನಾಟಕದ 25ನೇ ಕ್ರಿಕೆಟಿಗ.

ರಜತ್‌ ಪಾಟೀದಾರ್ ಪಾದದ ನೋವಿನಿಂದ ಅಲಭ್ಯರಾಗಿದ್ದಾರೆ ಎಂದು ಗುರುವಾರ ಬೆಳಿಗ್ಗೆ ಪ್ರಕಟಿಸಿದ ನಂತರ, ಪಡಿಕ್ಕಲ್‌ಗೆ ಅವಕಾಶ ದೊರೆಯಿತು. ಈ ಸರಣಿಯಲ್ಲಿ ಪದಾರ್ಪಣೆ ಮಾಡಿದ ಭಾರತದ ಐದನೇ ಆಟಗಾರ ಅವರಾದರು. ಪಾಟೀದಾರ್‌, ಆಕಾಶ್ ದೀಪ್, ಧ್ರುವ್ ಜುರೇಲ್‌, ಸರ್ಫರಾಜ್ ಖಾನ್‌ ಇತರ ನಾಲ್ವರು.

ADVERTISEMENT

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಯಶಸ್ಸು ಗಳಿಸಿದ್ದ ಪಡಿಕ್ಕಲ್‌, ನಂತರ ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ರಾಜಸ್ತಾನ ರಾಯಲ್ಸ್ ಪರ ಆಡಿ ಸಾಮರ್ಥ್ಯ ತೋರಿದ್ದರು.

2022ರಲ್ಲಿ ಅನಾರೋಗ್ಯದ ಕಾರಣ ಅವರ ದೇಹತೂಕ ಇಳಿದು ಅಮೂಲ್ಯ ಒಂದು ವರ್ಷ ಆಡಲು ಆಗಲಿಲ್ಲ. ನಂತರ ಸತತ ತರಬೇತಿ, ಪರಿಶ್ರಮದ ಫಲವಾಗಿ ಮತ್ತೆ ರಾಜ್ಯ ತಂಡದಲ್ಲಿ ಅವಕಾಶ ಪಡೆದರು.

‘ನಿಜ, ಅದು ಅತ್ಯಂತ ಕಠಿಣ ಅವಧಿಯಾಗಿತ್ತು’ ಎಂದು ಪಡಿಕ್ಕಲ್ ತಂದೆ ಬಾಬುನು ಕುನ್ನತ್‌ ಗುರುವಾರ ಪುತ್ರನ ಟೆಸ್ಟ್‌ ಪದಾರ್ಪಣೆಯ ಕೆಲಹೊತ್ತಿನ ನಂತರ ‘ಪ್ರಜಾವಾಣಿ‘ಗೆ ತಿಳಿಸಿದರು. ‘ಅವನ ಮನಃಸ್ಥಿತಿ ಉತ್ತಮ ಮಟ್ಟದಲ್ಲಿರುವಂತೆ ಮತ್ತು ಆತ್ಮವಿಶ್ವಾಸ ಕುಂದದಂತೆ ನೋಡಿಕೊಳ್ಳುವುದು ನಮ್ಮ ಕೆಲಸವಾಗಿತ್ತು. ಅವನ ಛಲವೇ ಅವನನ್ನು ಇಲ್ಲಿಯವರೆಗೆ ತಂದಿದೆ’ ಎಂದರು.    

ವಿಜಯ್ ಹಜಾರೆ ಟೂರ್ನಿಯಲ್ಲಿ ಐದು ಪಂದ್ಯಗಳಿಂದ 465 ರನ್ ಗಳಿಸಿದ್ದ ಅವರು, ರಣಜಿ ಟ್ರೋಫಿಯಲ್ಲೂ ಯಶಸ್ಸಿನ ಓಟ ಮುಂದುವರಿಸಿದ್ದ 92.66 ಸರಾಸರಿಯಲ್ಲಿ 556 ರನ್ ಗಳಿಸಿದ್ದರು. ಪಂಜಾಬ್ ವಿರುದ್ಧ ಮೊದಲ ಪಂದ್ಯದಲ್ಲೇ 193 ರನ್ ಹೊಡೆದಿದ್ದ ಅವರು ಮತ್ತೆ ಮೂರು ಶತಕಗಳನ್ನು (ಎರಡು ರಣಜಿಯಲ್ಲಿ, ಒಂದು ಭಾರತ ‘ಎ’ ತಂಡದ ಪರ ಇಂಗ್ಲೆಂಡ್ ಲಯನ್ಸ್ ವಿರುದ್ಧ) ಗಳಿಸಿದ್ದರು. ವಿಫಲರಾಗಿದ್ದ ಶ್ರೇಯಸ್‌ ಅಯ್ಯರ್ ಅವರನ್ನು ಕೈಬಿಟ್ಟ ನಂತರ ಪಡಿಕ್ಕಲ್‌ ಸಹಜವಾಗಿ ಅವಕಾಶ ಪಡೆದರು. ಆದರೆ ಈ ಸರಣಿಯಲ್ಲೇ ಆಡುವ 11ರಲ್ಲಿ ಅವಕಾಶ ಅನಿರೀಕ್ಷಿತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.