ಜಾಸ್ ಬಟ್ಲರ್ ಹಾಗೂ ಅಭಿಷೇಕ್ ಶರ್ಮಾ
ರಾಯಿಟರ್ಸ್ ಹಾಗೂ ಪಿಟಿಐ ಚಿತ್ರ
ಮುಂಬೈ: ಟಿ20 ಕ್ರಿಕೆಟ್ ಸರಣಿಯ 5ನೇ ಹಾಗೂ ಅಂತಿಮ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿದ ಟೀಂ ಇಂಡಿಯಾ ಆಟಗಾರ ಅಭಿಷೇಕ್ ಶರ್ಮಾ ಅವರ ಬಗ್ಗೆ ಇಂಗ್ಲೆಂಡ್ ತಂಡದ ನಾಯಕ ಜಾಸ್ ಬಟ್ಲರ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಮುಂಬೈನಲ್ಲಿ ನಡೆದ ಪಂದ್ಯದ ಮೊದಲ ಎಸೆತವನ್ನೇ ಸಿಕ್ಸರ್‌ಗೆ ಅಟ್ಟುವ ಮೂಲಕ, ಇಂಗ್ಲೆಂಡ್ ಬೌಲರ್‌ಗಳ ಮೇಲೆ ಪ್ರಹಾರ ಆರಂಭಿಸಿದ ಅಭಿಷೇಕ್, ಕೇವಲ 54 ಎಸೆತಗಳಲ್ಲಿ 135 ರನ್ ಗಳಿಸಿದರು. ಅವರ ಇನಿಂಗ್ಸ್‌ನಲ್ಲಿ 13 ಸಿಕ್ಸರ್ ಮತ್ತು 7 ಬೌಂಡರಿಗಳಿದ್ದವು.
ಇದರಿಂದಾಗಿ ಟೀಂ ಇಂಡಿಯಾ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 247 ರನ್ ಕಲೆಹಾಕಿತು.
ಅಭಿಷೇಕ್ ಬ್ಯಾಟಿಂಗ್ ಬಗ್ಗೆ ಮಾತನಾಡಿರುವ ಬಟ್ಲರ್, 'ಹೌದು. ಫಲಿತಾಂಶದಿಂದ ಬೇಸರವಾಗಿದೆ. ಅವರು (ಭಾರತ ತಂಡ) ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಗೆಲುವಿನ ಶ್ರೇಯ ಅಭಿಷೇಕ್ ಶರ್ಮಾಗೆ ಹೋಗಬೇಕು. ನಾನು ನೋಡಿದಂತೆ, ಪರಿಪೂರ್ಣ ಹೊಡೆತಗಳಿಂದ ಕೂಡಿದ ಅದ್ಭುತ ಇನಿಂಗ್ಸ್ ಇದು' ಎಂದು ಶ್ಲಾಘಿಸಿದ್ದಾರೆ.
ಅಭಿಷೇಕ್ ಇನಿಂಗ್ಸ್‌ನಿಂದ ಇಂಗ್ಲೆಂಡ್ ತಂಡ ಸಿಡಿಲಾಘಾತಕ್ಕೊಳಗಾಯಿತು ಎಂಬುದನ್ನು ನಿರಾಕರಿಸಿದ ಬಟ್ಲರ್, ಭಾರತದ ಗುರಿ ಎದುರು ಅಬ್ಬರದ ಆಟವಾಡುವುದು ಅಥವಾ ಸೋಲೊಪ್ಪಿಕೊಳ್ಳುವುದಷ್ಟೇ ತಮ್ಮ ತಂಡದೆದುರು ಇದ್ದ ಆಯ್ಕೆಗಳು ಎಂದಿದ್ದಾರೆ.
'ನಾವು ಇನ್ನೂ ಏನು ಮಾಡಬಹುದಿತ್ತು ಎಂಬ ಬಗ್ಗೆ ಸದಾ ಚರ್ಚಿಸುತ್ತೇವೆ. ಎದುರಾಳಿಯನ್ನು ತಡೆಯುವುದು ಹೇಗೆ ಎಂಬ ಬಗ್ಗೆ ಚಿಂತಿಸುತ್ತೇವೆ. ಆದರೆ, ಕೆಲವೊಮ್ಮೆ ಎದುರಾಳಿಯನ್ನು ಪ್ರಶಂಸಿಸಬೇಕಾಗುತ್ತದೆ. ಆತ (ಅಭಿಷೇಕ್ ಶರ್ಮಾ) ಅತ್ಯದ್ಭುತವಾಗಿ ಆಡಿದ' ಎಂದು ಹೇಳಿದ್ದಾರೆ.
ಭಾರತ ನೀಡಿದ ಗುರಿ ಬೆನ್ನತ್ತಿದ ಇಂಗ್ಲೆಂಡ್, 10.3 ಓವರ್‌ಗಳಲ್ಲಿ 97 ರನ್ ಗಳಿಗೆ ಆಲೌಟ್ ಆಯಿತು. ಫಿಲ್ ಸಾಲ್ಟ್ 23 ಎಸೆತಗಳಲ್ಲಿ 55 ರನ್ ಗಳಿಸಿದ್ದು ಬಿಟ್ಟರೆ, ಉಳಿದವರು ಪ್ರತಿರೋಧ ತೋರಲಿಲ್ಲ. ಹೀಗಾಗಿ, 150 ರನ್ ಅಂತರದ ಸೋಲೊಪ್ಪಿಕೊಂಡಿತು.
ಭಾರತ ತಂಡ ಟಿ20 ಮಾದರಿಯಲ್ಲಿ ರನ್ ಅಂತರದಲ್ಲಿ ಗಳಿಸಿದ ಎರಡನೇ ಅತಿದೊಡ್ಡ ಜಯ ಇದಾಗಿದೆ. 2023ರಲ್ಲಿ ನ್ಯೂಜಿಲೆಂಡ್ ಎದುರು 168 ರನ್‌ಗಳಿಂದ ಗೆಲುವು ಸಾಧಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.