ADVERTISEMENT

ಟ್ವೆಂಟಿ–20 ಕ್ರಿಕೆಟ್‌: ಸರಣಿ ಜಯದ ಮೇಲೆ ಭಾರತದ ಕಣ್ಣು

ತಿರುಗೇಟು ನೀಡುವ ತವಕದಲ್ಲಿ ಐರ್ಲೆಂಢ್

ಪಿಟಿಐ
Published 28 ಜೂನ್ 2018, 16:32 IST
Last Updated 28 ಜೂನ್ 2018, 16:32 IST
ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಶಿಖರ್ ಧವನ್  ಎಎಫ್‌ಪಿ ಚಿತ್ರ
ಮುಖ್ಯ ಕೋಚ್ ರವಿಶಾಸ್ತ್ರಿ ಮತ್ತು ಶಿಖರ್ ಧವನ್  ಎಎಫ್‌ಪಿ ಚಿತ್ರ   

ಡಬ್ಲಿನ್ : ಕೆ.ಎಲ್. ರಾಹುಲ್ ಮತ್ತು ದಿನೇಶ್ ಕಾರ್ತಿಕ್ ಅವರು ಶುಕ್ರವಾರ ನಡೆಯುವ ಭಾರತ ಮತ್ತು ಐರ್ಲೆಂಡ್ ನಡುವಣ ಟ್ವೆಂಟಿ–20 ಪಂದ್ಯದಲ್ಲಿ ಕಣಕ್ಕಿಳಿಯುವರೇ?

ಬುಧವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ರಾಹುಲ್ ಮತ್ತು ದಿನೇಶ್ ಅವರನ್ನು ಅಂತಿಮ ಹನ್ನೊಂದರ ಪಟ್ಟಿಯಲ್ಲಿ ಆಯ್ಕೆ ಮಾಡಿರಲಿಲ್ಲ. ಇದಕ್ಕಾಗಿ ಟ್ವಿಟರ್‌ನಲ್ಲಿ ಬಹಳಷ್ಟು ಜನರು ತಂಡದ ನಿಲುವನ್ನು ಟೀಕಿಸಿದ್ದಾರೆ. ಇಬ್ಬರೂ ಬ್ಯಾಟ್ಸ್‌ಮನ್‌ಗಳಿಗೆ ಅವಕಾಶ ನೀಡಬೇಕಿತ್ತು ಎಂದಿದ್ದಾರೆ.

ಆದರೆ ಹಿರಿಯ ಕ್ರಿಕೆಟಿಗ ಆಕಾಶ್ ಚೋಪ್ರಾ, ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಅವರು ರಾಹುಲ್ ಇರಬೇಕಿತ್ತು ಎಂದು ಟ್ವೀಟ್ ಮಾಡಿದ್ದರು. ಈ ಪಂದ್ಯದಲ್ಲಿ ಭಾರತ ತಂಡವು 76 ರನ್‌ಗಳಿಂದ ಗೆದ್ದಿತ್ತು. ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಅರ್ಧಶತಕ ಹೊಡೆದಿದ್ದರು. ಸ್ಪಿನ್‌ ಜೋಡಿ ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಾಹಲ್ ಅವರು ಉತ್ತಮವಾಗಿ ಬೌಲಿಂಗ್ ಮಾಡಿ ಜಯಕ್ಕೆ ಕಾರಣರಾಗಿದ್ದರು.

ADVERTISEMENT

ಈಚೆಗೆ ಇಂಗ್ಲೆಂಡ್ ಎದುರಿನ ಸರಣಿಯಲ್ಲಿ ಐರ್ಲೆಂಡ್ ಉತ್ತಮವಾಗಿ ಆಡಿತ್ತು. ಆದರೆ ಭಾರತದ ಎದುರು ಸಂಪೂರ್ಣ ಸಾಮರ್ಥ್ಯದೊಂದಿಗೆ ಮಿಂಚಲಿಲ್ಲ. ಆದ್ದರಿಂದ ಎರಡನೇ ಪಂದ್ಯದಲ್ಲಿ ಕೆಲವು ಆಟಗಾರರನ್ನು ಬದಲಾಯಿಸುವ ಯೋಚನೆಯಲ್ಲಿ ವಿರಾಟ್ ಕೊಹ್ಲಿ ಬಳಗ ಇದೆ. ಜುಲೈ 3ರಿಂದ ಇಂಗ್ಲೆಂಡ್ ಎದುರು ಸರಣಿ ಆರಂಭವಾಗಲಿದೆ. ಅದಕ್ಕಾಗಿ ಐರ್ಲೆಂಡ್ ಎದುರಿನ ಪಂದ್ಯವನ್ನು ಭಾರತವು ಪೂರ್ವಾಭ್ಯಾಸಕ್ಕಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ಕನ್ನಡಿಗ ರಾಹುಲ್, ದಿನೇಶ್, ಉಮೇಶ್ ಯಾದವ್, ಸಿದ್ಧಾರ್ಥ್ ಕೌಲ್ ಅವರಿಗೆ ಅವಕಾಶ ಲಭಿಸುವ ನಿರೀಕ್ಷೆ ಇದೆ. ಆಗ ಶಿಖರ್ ಧವನ್, ಮಹೇಂದ್ರಸಿಂಗ್ ದೋನಿ, ಭುವನೇಶ್ವರ್ ಕುಮಾರ್ ಮತ್ತು ಮನೀಷ್ ಪಾಂಡೆ ವಿಶ್ರಾಂತಿ ಪಡೆಯುವ ಸಾಧ್ಯತೆ ಇದೆ. ಚಾಹಲ್, ಕುಲದೀಪ್ ಸ್ಥಾನ ಉಳಿಸಿಕೊಳ್ಳಬಹುದು.

ತಿರುಗೇಟು ನೀಡುವತ್ತ ಆತಿಥೇಯರ ಚಿತ್ತ
ಭಾರತದ ಲೆಕ್ಕಾಚಾರ ಏನೇ ಇರಲಿ. ಆತಿಥೇಯ ತಂಡವು ತಿರುಗೇಟು ನೀಡುವ ಪ್ರಯತ್ನ ಮಾಡುವುದಂತೂ ಖಚಿತ. ಇತ್ತೀಚಿನ ದಿನಗಳಲ್ಲಿ ಬಲಿಷ್ಠ ತಂಡಗಳಿಗೆ ಸೆಡ್ಡು ಹೊಡೆದಿರುವ ಐರ್ಲೆಂಡ್ ತಂಡವು ಈ ಸರಣಿಯನ್ನು ಸಮಬಲಗೊಳಿಸುವ ವಿಶ್ವಾಸದಲ್ಲಿದೆ.

ಮೊದಲ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಜೇಮ್ಸ್‌ ಶಾನನ್ ಅವರು ಅರ್ಧಶತಕ (60 ರನ್) ಗಳಿಸಿದ್ದರು. ಮಧ್ಯಮವೇಗಿ ಪೀಟರ್ ಚೇಸ್ ಅವರು ನಾಲ್ಕು ವಿಕೆಟ್‌ಗಳನ್ನು ಗಳಿಸಿದ್ದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮತ್ತು ಸ್ಪಿನ್ನರ್‌ಗಳು ವೈಫಲ್ಯ ಅನುಭವಿಸಿದ್ದರು. ಐರ್ಲೆಂಡ್ ತಂಡವು ತನ್ನ ತವರಿನ ಅಂಗಳದಲ್ಲಿ ಸರಣಿ ಸೋಲಿನ ಅವಮಾನ ತಪ್ಪಿಸಿಕೊಳ್ಳಲು ಛಲದ ಆಟವಾಡುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.