ADVERTISEMENT

ಆರಂಭಿಕನಾಗಿ 10 ಸಾವಿರ ರನ್ ಪೂರೈಸಿದ ರೋಹಿತ್; ಕೊಹ್ಲಿಯಿಂದ ಮತ್ತೊಂದು ದಾಖಲೆ

ನ್ಯೂಜಿಲೆಂಡ್‌ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ

​ಪ್ರಜಾವಾಣಿ ವಾರ್ತೆ
Published 29 ಜನವರಿ 2020, 17:44 IST
Last Updated 29 ಜನವರಿ 2020, 17:44 IST
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ   

ಹ್ಯಾಮಿಲ್ಟನ್‌: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಉಪನಾಯಕ ರೋಹಿತ್‌ ಶರ್ಮಾ ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದ ಮೂಲಕ ಮತ್ತೆರಡು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ವಿರಾಟ್‌ ಟಿ20 ಕ್ರಿಕೆಟ್‌ನಲ್ಲಿ ಭಾರತ ಪರ ಅತಿಹೆಚ್ಚು ರನ್‌ ಗಳಿಸಿದ ನಾಯಕ ಎನಿಸಿಕೊಂಡರೆ, ಉಪನಾಯಕ ರೋಹಿತ್‌ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ 10 ಸಾವಿರ ರನ್‌ ಪೂರೈಸಿದ ಸಾಧನೆ ಮಾಡಿದರು.‌

ಇಲ್ಲಿನ ಸೆಡನ್‌ ಪಾರ್ಕ್‌ ಅಂಗಳದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 20 ಓವರ್‌ಗಳಲ್ಲಿ 179 ರನ್‌ಗಳ ಸವಾಲಿನ ಮೊತ್ತ ಪೇರಿಸಿದೆ. ಈ ಮೊತ್ತ ಬೆನ್ನತ್ತಿರುವ ಆತಿಥೇಯ ನ್ಯೂಜಿಲೆಂಡ್‌ ಸದ್ಯ 11 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 88 ರನ್‌ ಗಳಿಸಿದೆ.

ADVERTISEMENT

16ಎಸೆತಗಳಲ್ಲಿ 27ರನ್‌ ಗಳಿಸಿರುವ ನಾಯಕ ಕೇನ್‌ ವಿಲಿಯಮ್ಸನ್‌ ಮತ್ತು ಇನ್ನೂ ಖಾತೆ ತೆರೆಯದ ಕಾಲಿನ್‌ ಡಿ ಗ್ರಾಂಡ್‌ಹೋಮ್‌ ಕ್ರೀಸ್‌ನಲ್ಲಿದ್ದಾರೆ.ಆರಂಭಿಕ ಮಾರ್ಟಿನ್‌ ಗಪ್ಟಿಲ್‌ (31), ಕಾಲಿನ್‌ ಮುನ್ರೋ (14) ಹಾಗೂಮಿಚೇಲ್ ಸ್ಯಾಂಟ್ನರ್‌ (9) ಪೆವಿಲಿಯನ್‌ ಸೇರಿಕೊಂಡಿದ್ದಾರೆ.

ಭಾರತ ಪರ ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್ ಮತ್ತು ಯಜುವೇಂದ್ರ ಚಾಹಲ್‌ ತಲಾ ಒಂದೊಂದು ವಿಕೆಟ್‌ ಪಡೆದಿದ್ದಾರೆ.

ಕೊಹ್ಲಿ ದಾಖಲೆ
ಟಿ20 ಕ್ರಿಕೆಟ್‌ನಲ್ಲಿ ನಾಯಕನಾಗಿ 1088 ರನ್‌ ಗಳಿಸಿದ್ದ ಕೊಹ್ಲಿ,ಈ ಪಂದ್ಯದಲ್ಲಿ 25 ರನ್‌ ಗಳಿಸಿದ್ದಾಗ ಭಾರತ ಪರ ಚುಟುಕು ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ ನಾಯಕ ಎನಿಸಿಕೊಂಡರು.

ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಫಾಫ್‌ ಡು ಪ್ಲೆಸಿ (1273), ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸ್‌ನ್‌ (1148) ಮೊದಲೆರಡು ಸ್ಥಾನಗಳಲ್ಲಿದ್ದು, ಭಾರತದ ಮಾಜಿ ನಾಯಕ ಎಂಎಸ್‌ ಧೋನಿ (1112) ನಾಲ್ಕನೇ ಸ್ಥಾನಕ್ಕೆ ಜಾರಿದ್ದಾರೆ.

ಈ ಪಂದ್ಯದಲ್ಲಿ 27 ಎಸೆತಗಳನ್ನು ಎದುರಿಸಿದ ಕೊಹ್ಲಿ 38 ರನ್‌ ಗಳಿಸಿ ಔಟಾದರು. ನಾಯಕನಾಗಿ ಅವರ ಖಾತೆಯಲ್ಲಿ 1,126‬ ರನ್‌ ಇವೆ.

ರೋಹಿತ್‌ ಸಾಧನೆ
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ 10 ಸಾವಿರ ರನ್‌ ಗಳಿಸಿದ ಸಾಧನೆಯನ್ನು ಟೀಂ ಇಂಡಿಯಾ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಮಾಡಿದರು.

ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ2308, ಏಕದಿನ ಮಾದರಿಯಲ್ಲಿ 7148 ಮತ್ತು ಟೆಸ್ಟ್ ಮಾದರಿಲ್ಲಿ 556 ರನ್ ಗಳಿಸಿದ್ದಾರೆ. ಇದಕ್ಕಾಗಿ ಅವರು 218 ಇನಿಂಗ್ಸ್‌ ಆಡಿದ್ದಾರೆ.

ಇಂದಿನ ಪಂದ್ಯದಲ್ಲಿ ಕೇವಲ 40 ಎಸೆತಗಳಲ್ಲಿ 65 ರನ್ ಬಾರಿಸಿದ ರೋಹಿತ್‌, ಚುಟುಕು ಕ್ರಿಕೆಟ್‌ನಲ್ಲಿ 20ನೇ ಅರ್ಧ ಶತಕ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.