ADVERTISEMENT

INDvsNZ| ಭಾರತಕ್ಕೆ 300 ರನ್‌ ಟಾರ್ಗೆಟ್ ಕೊಟ್ಟರೂ ಕಡಿಮೆಯೇ: ಮಿಚೆಲ್ ಸ್ಯಾಂಟ್ನರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜನವರಿ 2026, 5:40 IST
Last Updated 24 ಜನವರಿ 2026, 5:40 IST
   

ರಾಯಪುರ: ಭಾರತದ ಈ ಬ್ಯಾಟಿಂಗ್‌ ಪಡೆಯ ಎದುರು ನಾವು ಪಂದ್ಯ ಗೆಲ್ಲಬೇಕಾದರೆ 300 ರನ್‌ಗಿಂತ ಜಾಸ್ತಿ ಗುರಿ ನೀಡಬೇಕಾಗುತ್ತದೆ ಎಂದು ನ್ಯೂಜಿಲೆಂಡ್‌ ನಾಯಕ ಮಿಚೆಲ್ ಸ್ಯಾಂಟ್ನರ್ ಹೇಳಿದ್ದಾರೆ.

ರಾಯಪುರದಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್‌ ತಂಡವು 20 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 208 ರನ್‌ ಗಳಿಸಿತ್ತು. 209 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ ಭಾರತ ತಂಡವು, ಆರಂಭಿಕ ಆಘಾತದ ನಡುವೆಯೂ ಇನ್ನೂ 28 ಎಸೆತಗಳು ಬಾಕಿಯಿರುವಂತೆಯೇ ಪಂದ್ಯ ಜಯಿಸಿತ್ತು.

ಪಂದ್ಯದ ನಂತರ ಭಾರತದ ವಿರುದ್ಧ ಗೆಲ್ಲಲು ಎಷ್ಟು ರನ್‌ಗಳ ಟಾರ್ಗೆಟ್‌ ಸಾಕಾಗುತ್ತಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಮಿಚೆಲ್ ಸ್ಯಾಂಟ್ನರ್, ‘ಬಹುಶಃ ಭಾರತದ ಬಲಿಷ್ಟ ಬ್ಯಾಟಿಂಗ್‌ ಎದುರು ಪಂದ್ಯ ಗೆಲ್ಲಲು 300 ರನ್‌ಗಿಂತ ಜಾಸ್ತಿ ಗುರಿ ನೀಡಬೇಕಾಗುತ್ತದೆ. ಅವರ ತಂಡದಲ್ಲಿ ಸ್ಪೋಟಕ ಬ್ಯಾಟರ್‌ಗಳಿದ್ದಾರೆ, ಕೆಳ ಕ್ರಮಾಂಕದ ಆಟಗಾರರು ಕೂಡ ಉತ್ತಮ ಬ್ಯಾಟಿಂಗ್‌ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಹಾಗಾಗಿ ಅವರು ಮೊದಲ ಬಾಲ್‌ನಿಂದಲೇ ಸ್ಪೋಟಕ ಆಟವಾಡಲು ಸಾಧ್ಯವಾಯಿತು’ ಎಂದು ಹೇಳಿದ್ದಾರೆ.

ADVERTISEMENT

ಟೀಂ ಇಂಡಿಯಾದಲ್ಲಿ ಎಲ್ಲಾ ಆಟಗಾರರಿಗೂ ಅವರ ನೈಜ ಆಟವಾಡಲು ಅನುವು ಮಾಡಿಕೊಡಲಾಗಿದೆ. ಹಾಗಾಗಿ, ಭಾರತದ ವಿರುದ್ಧದ ಟಿ–20 ಪಂದ್ಯದಲ್ಲಿ 200ರಿಂದ 210 ರನ್‌ಗಳ ಗುರಿಯು ಇನ್ನು ಸಾಕಾಗುವುದಿಲ್ಲ. ನಾವು ಪಂದ್ಯ ಗೆಲ್ಲಲು ಬೌಲಿಂಗ್‌ನಲ್ಲಿ ಸುಧಾರಣೆ ಕಾಣಬೇಕಾಗಿದೆ. ಮುಂದಿನ ಪಂದ್ಯದಲ್ಲಿ ನಾವು ಪುಟಿದೇಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭಾರತ ವಿರುದ್ಧದ 5 ಪಂದ್ಯಗಳ ಟಿ–20 ಸರಣಿಯಲ್ಲಿ ನ್ಯೂಜಿಲೆಂಡ್‌ ಈಗಾಗಲೇ 0–2ರ ಹಿನ್ನಡೆಯಲ್ಲಿದೆ. ಸರಣಿ ಕನಸು ಜೀವಂತವಾಗಿರಿಸಿಕೊಳ್ಳಲು ಭಾನುವಾರ (ಜ.25) ನಡೆಯಲಿರುವ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಾದ ಒತ್ತಡದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.