ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಹಾಗೂ ಭಾರತ ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ
ಚಿತ್ರಕೃಪೆ: Twitter/ @BCCI/@TheRealPCB
ಪಲೇಕೆಲೆ: ಈ ಬಾರಿಯ ಏಷ್ಯಾಪಕ್ ಏಕದಿನ ಕ್ರಿಕೆಟ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಪಲೇಕೆಲೆಯಲ್ಲಿ ಸೆಣಸಾಡುತ್ತಿರುವ ಉಭಯ ತಂಡಗಳು ಸಮತೋಲನದಿಂದ ಕೂಡಿವೆ.
ಭಾರತ ಪರ ನಾಯಕ ರೋಹಿತ್ ಶರ್ಮಾ ಹಾಗೂ ಯುವ ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ವಿರಾಟ್ ಕೊಹ್ಲಿ ಇಲ್ಲವೇ ಇಶಾನ್ ಕಿಶನ್ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. 5ನೇ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್ ಇದ್ದಾರೆ. ಇನ್ನೂ ಫಿಟ್ ಆಗದ ಕೆ.ಎಲ್. ರಾಹುಲ್ ಬದಲು ಕಿಶನ್ ವಿಕೆಟ್ ಕೀಪರ್ ಪಾತ್ರ ನಿಭಾಯಿಸಲಿದ್ದಾರೆ.
ವೇಗದ ಬೌಲಿಂಗ್ ಹೊಣೆಯನ್ನು ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಹೊತ್ತುಕೊಂಡಿದ್ದಾರೆ. ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದೂಲ್ ಠಾಕೂರ್ ಅವರ ನೆರವೂ ತಂಡಕ್ಕಿದೆ. ಉಳಿದಂತೆ ಕುಲದೀಪ್ ಯಾದ್ ಮತ್ತು ರವೀಂದ್ರ ಜಡೇಜ ಸ್ಪಿನ್ ಅಸ್ತ್ರ ಪ್ರಯೋಗಿಸಲಿದ್ದಾರೆ.
ಪಾಕ್ ಪರ ಇನಿಂಗ್ಸ್ ಆರಂಭಿಸಲು ಫಖರ್ ಜಮಾನ್ ಮತ್ತು ಇಮಾಮ್ ಉಲ್ ಹಕ್ ಸಜ್ಜಾಗಿದ್ದಾರೆ. ನಾಯಕ ಬಾಬರ್ ಅಜಂ ಹಾಗೂ ಅನುಭವಿ ಮೊಹಮ್ಮದ್ ರಿಜ್ವಾನ್ ಕ್ರಮವಾಗಿ 3, 4ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ರಿಜ್ವಾನ್, ವಿಕೆಟ್ ಕೀಪರ್ ಪಾತ್ರವನ್ನೂ ನಿಭಾಯಿಸಲಿದ್ದಾರೆ.
ಭಾರತದ ಬಲಿಷ್ಠ ಬ್ಯಾಟರ್‌ಗಳಿಗೆ ಸವಾಲೆಸೆಯಲು ವೇಗಿಗಳಾದ ಶಾಹೀನ್ ಆಫ್ರಿದಿ, ನಸೀಂ ಶಹಾ, ಹ್ಯಾರಿಸ್ ರವೂಫ್ ಸಜ್ಜಾಗಿದ್ದಾರೆ.
ಹೀಗಿವೆ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್
ಪಾಕಿಸ್ತಾನ: ಫಖರ್ ಜಮಾನ್, ಇಮಾಮ್ ಉಲ್ ಹಕ್, ಬಾಬರ್ ಆಜಂ (ನಾಯಕ), ಮೊಹಮ್ಮದ್ ರಿಜ್ವಾನ್, ಸಲ್ಮಾನ್ ಅಲಿ ಆಘಾ, ಇಫ್ರಿಕಾರ್ ಅಹಮದ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಶಾಹೀನ್ ಆಫ್ರಿದಿ, ನಸೀಂ ಶಹಾ, ಹ್ಯಾರಿಸ್ ರವೂಫ್
4–1ರಿಂದ ಭಾರತ ಮುಂದು
ಕ್ರಿಕೆಟ್ ಲೋಕದ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡವು ರಾಜತಾಂತ್ರಿಕ ಕಾರಣಗಳಿಂದಾಗಿ ತಟಸ್ಥ ತಾಣಗಳಲ್ಲಿ ಮುಖಾಮುಖಿಯಾಗುತ್ತಿವೆ. ಅದರಲ್ಲೂ ಐಸಿಸಿ ಮತ್ತು ಎಸಿಸಿ ಟ್ರೋಫಿ ಟೂರ್ನಿಗಳಲ್ಲಿ ಸೆಣಸಾಡುತ್ತಿವೆ. ದ್ವಿಪಕ್ಷೀಯ ಸರಣಿಗಳಲ್ಲಿ ಆಡುತ್ತಿಲ್ಲ.
ಪ್ರಮುಖ ಏಕದಿನ ಕ್ರಿಕೆಟ್ ಟೂರ್ನಿಗಳಲ್ಲಿ ಮುಖಾಮುಖಿಯಾಗಿರುವ ಕಳೆದ ಐದು ಪಂದ್ಯಗಳ ಪೈಕಿ ಭಾರತವು 4–1ರಿಂದ ಮುನ್ನಡೆ ಸಾಧಿಸಿದೆ.
2017ರಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದವು. ಅದರಲ್ಲಿ ಒಂದು ಪಂದ್ಯದಲ್ಲಿ ಭಾರತ ಹಾಗೂ ಇನ್ನೊಂದರಲ್ಲಿ ಪಾಕ್ ಗೆದ್ದಿತ್ತು.
2018ರ ಏಷ್ಯಾಕಪ್ ಟೂರ್ನಿಯಲ್ಲಿ ಉಭಯ ತಂಡಗಳು ಸೆಣಸಿದ ಎರಡೂ ಪಂದ್ಯಗಳಲ್ಲಿ ಭಾರತವೇ ಮೇಲುಗೈ ಸಾಧಿಸಿತ್ತು. 2019ರ ವಿಶ್ವಕಪ್ ಟೂರ್ನಿಯಲ್ಲಿಯೂ ಒಂದು ಪಂದ್ಯದಲ್ಲಿ ಎದುರುಬದುರಾಗಿದ್ದವು. ಭಾರತ ತಂಡ ಜಯಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.