ಭಾರತ, ಪಾಕಿಸ್ತಾನ ತಂಡದ ಅಭಿಮಾನಿಗಳು
ಪಿಟಿಐ ಚಿತ್ರ
ಪಲೇಕೆಲೆ: ಈ ಬಾರಿಯ ಏಷ್ಯಾಪಕ್ ಏಕದಿನ ಕ್ರಿಕೆಟ್ ಟೂರ್ನಿಯ ಮೂರನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಭಾರತ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಇದೇ ವರ್ಷ ಅಕ್ಟೋಬರ್‌ನಲ್ಲಿ ಭಾರತದ ಆತಿಥ್ಯದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ಪೂರ್ವಾಭ್ಯಾಸಕ್ಕೆ ವೇದಿಕೆಯಾಗಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಉಭಯ ತಂಡಗಳ ಹಣಾಹಣಿಯೇ ಹೈಲೈಟ್. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕೋಟ್ಯಂತರ ಅಭಿಮಾನಿಗಳು ಕಾತರದಿಂದ ಕಾದಿದ್ದಾರೆ.
ಎ ಗುಂಪಿನಲ್ಲಿರುವ ಈ ತಂಡಗಳು ಇದೇ ಟೂರ್ನಿಯಲ್ಲಿ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಅಲ್ಲದೇ ಅಕ್ಟೋಬರ್‌ನಲ್ಲಿ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯದಲ್ಲಿ ಹಣಾಹಣಿ ನಡೆಸಲಿವೆ.
ಪಲೇಕೆಲೆಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಪರ ನಾಯಕ ರೋಹಿತ್ ಶರ್ಮಾ ಹಾಗೂ ಯುವ ಶುಭಮನ್ ಗಿಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ವಿರಾಟ್ ಕೊಹ್ಲಿ ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ನಾಲ್ಕನೇ ಕ್ರಮಾಂಕಕ್ಕೆ ಶ್ರೇಯಸ್ ಅಯ್ಯರ್ ಇದ್ದಾರೆ. ಇನ್ನೂ ಫಿಟ್ ಆಗದ ಕೆ.ಎಲ್. ರಾಹುಲ್ ಬದಲು ಇಶಾನ್ ಕಿಶನ್ ವಿಕೆಟ್ ಕೀಪರ್ ಪಾತ್ರ ನಿಭಾಯಿಸಲಿದ್ದಾರೆ.
ವೇಗದ ಬೌಲಿಂಗ್ ಹೊಣೆಯನ್ನು ಜಸ್‌ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಸಿರಾಜ್ ಹೊತ್ತುಕೊಂಡಿದ್ದಾರೆ. ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ಶಾರ್ದೂಲ್ ಠಾಕೂರ್ ಅವರ ನೆರವೂ ತಂಡಕ್ಕಿದೆ. ಉಳಿದಂತೆ ಕುಲದೀಪ್ ಯಾದ್ ಮತ್ತು ರವೀಂದ್ರ ಜಡೇಜ ಸ್ಪಿನ್ ಅಸ್ತ್ರ ಪ್ರಯೋಗಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.