ADVERTISEMENT

IND vs PAK | ಕ್ರಿಕೆಟ್‌ಗೂ ಮೊದಲು ಭಾರತ–ಪಾಕ್ ಸಂಬಂಧ ಸುಧಾರಿಸಲಿ: ಹರಭಜನ್ ಸಿಂಗ್

ಪಿಟಿಐ
Published 12 ಸೆಪ್ಟೆಂಬರ್ 2025, 9:36 IST
Last Updated 12 ಸೆಪ್ಟೆಂಬರ್ 2025, 9:36 IST
   

ಮುಂಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸಂಬಂಧಗಳು ಸುಧಾರಿಸಿದ ನಂತರ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪಂದ್ಯವಾಡಲಿ ಎಂದು ಮಾಜಿ ಕ್ರಿಕೆಟಿಗ ಹರಭಜನ್ ಸಿಂಗ್‌ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾನುವಾರ (ಸೆ.14) ಭಾರತ ಮತ್ತು ಪಾಕಿಸ್ತಾನ ತಂಡಗಳು ದುಬೈನಲ್ಲಿ ಮುಖಾಮುಖಿಯಾಗಲಿವೆ. ಆಪರೇಷನ್‌ ಸಿಂಧೂರ ನಂತರ ಇದೇ ಮೊದಲ ಬಾರಿ ಸಾಂಪ್ರದಾಯಿಕ ಎದುರಾಳಿಗಳು ಮೈದಾನದಲ್ಲಿ ಸೆಣಸಲಿವೆ.

‘ಆಪರೇಷನ್‌ ಸಿಂಧೂರ ನಂತರ ಪಾಕಿಸ್ತಾನದೊಂದಿಗೆ ಯಾವುದೇ ವ್ಯಾಪಾರ ಹಾಗೂ ಕ್ರಿಕೆಟ್‌ ಇರಬಾರದು ಎಂಬುದು ಭಾರತೀಯರ ಅಭಿಪ್ರಾಯವಾಗಿದೆ. ನಾವು ವಿಶ್ವ ಚಾಂಪಿಯನ್‌ಶಿಪ್‌ ಲೆಜೆಂಡ್ಸ್‌ ಟೂರ್ನಿಯಲ್ಲೂ ಕೂಡ ಪಾಕ್‌ನೊಂದಿಗೆ ಪಂದ್ಯ ಆಡಿರಲಿಲ್ಲ’ ಎಂದಿದ್ದಾರೆ.

ADVERTISEMENT

‘ಭಾರತ ಸರ್ಕಾರ ಕೂಡ ಪಾಕ್‌ನೊಂದಿಗೆ ದ್ವಿಪಕ್ಷೀಯ ಸರಣಿ ಆಡಬಾರದು ಎಂದು ಸೂಚಿಸಿದೆ. ಆದರೆ, ಬಹುರಾಷ್ಟ್ರೀಯ ಟೂರ್ನಿಯಲ್ಲಿ ಭಾಗವಹಿಸಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಹಾಗಾಗಿ ಏಷ್ಯಾ ಕಪ್‌ನಲ್ಲಿ ಭಾರತವು ಪಾಕ್‌ ವಿರುದ್ಧ ಆಡಬಹುದು. ಆದರೆ, ಎರಡೂ ದೇಶಗಳ ನಡುವಿನ ಸಂಬಂಧಗಳು ಉತ್ತಮಗೊಳ್ಳಬೇಕಿದೆ’ ಎಂದು ಹೇಳಿದ್ದಾರೆ.

ಭಾರತ ತಂಡವು ಉತ್ತಮ ಕ್ರಿಕೆಟ್‌ ಆಡುತ್ತಿದ್ದು, ವಿರಾಟ್‌ ಹಾಗೂ ರೋಹಿತ್‌ ಅವರ ನಿವೃತ್ತಿಯ ನಂತರವೂ ತಂಡವು ಉತ್ತಮ ಪ್ರದರ್ಶನ ನೀಡುತ್ತಿದೆ. ದುಬೈನಲ್ಲಿ ಸ್ಪಿನ್ನರ್‌ಗಳಿಗೆ ಉತ್ತಮ ನೆರವು ಸಿಗಲಿದ್ದು, ಭಾರತವು ಪ್ರಶಸ್ತಿ ಗೆಲ್ಲುವ ವಿಶ್ವಾಸವಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.