ADVERTISEMENT

SA vs IND: ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಮಣಿದ ರಾಹುಲ್ ಬಳಗ

ದ್ವಿಶಕತದ ಜೊತೆಯಾಟವಾಡಿದ ತೆಂಬಾ ಬವುಮಾ–ವ್ಯಾನ್ ಡರ್ ಡುಸೆನ್‌

ಪಿಟಿಐ
Published 19 ಜನವರಿ 2022, 16:49 IST
Last Updated 19 ಜನವರಿ 2022, 16:49 IST
ಶಿಖರ್ ಧವನ್ ಅವರ ಬ್ಯಾಟಿಂಗ್ ಶೈಲಿ –ಪಿಟಿಐ ಚಿತ್ರ
ಶಿಖರ್ ಧವನ್ ಅವರ ಬ್ಯಾಟಿಂಗ್ ಶೈಲಿ –ಪಿಟಿಐ ಚಿತ್ರ   

ಪರ್ಲ್‌, ದಕ್ಷಿಣ ಆಫ್ರಿಕಾ: ನಾಯಕತ್ವದ ಹೊಣೆ ಇಲ್ಲದೆ ನಿರಾಳವಾಗಿ ಬ್ಯಾಟ್ ಬೀಸಿದ ವಿರಾಟ್ ಕೊಹ್ಲಿ ಮತ್ತು ಎಡಗೈ ಬ್ಯಾಟರ್‌ ಶಿಖರ್ ಧವನ್ ಅವರು ಅಮೋಘ ಜೊತೆಯಾಟದ ಮೂಲಕ ಮಿಂಚಿದರು. ಆದರೆ ಇತರ ಬ್ಯಾಟರ್‌ಗಳು ವೈಫಲ್ಯ ಅನುಭವಿಸಿದರು. ಹೀಗಾಗಿ ಭಾರತ ತಂಡ ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋಲಿನ ಕಹಿಯುಂಡಿತು.

ಬೊಲ್ಯಾಂಡ್ ಪಾರ್ಕ್‌ನಲ್ಲಿ 297 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಕೆ.ಎಲ್‌.ರಾಹುಲ್ ಬಳಗ 8 ವಿಕೆಟ್ ಕಳೆದುಕೊಂಡು 265 ರನ್ ಗಳಿಸಿತು. ಈ ಮೂಲಕ 31 ರನ್‌ಗಳ ಸೋಲೊಪ್ಪಿಕೊಂಡಿತು.

ಧವನ್ ಜೊತೆ ಮೊದಲ ವಿಕೆಟ್‌ಗೆ 46 ರನ್‌ಗಳನ್ನು ಸೇರಿಸಿ ಹಂಗಾಮಿ ನಾಯಕ ರಾಹುಲ್ ಔಟಾದರು. ನಂತರ ಧವನ್ ಮತ್ತು ಕೊಹ್ಲಿ 92 ರನ್‌ಗಳನ್ನು ಸೇರಿಸಿದರು. ಇಬ್ಬರೂ ಅರ್ಧಶತಕಗಳನ್ನು ಗಳಿಸಿದರು. ಈ ಜೊತೆಯಾಟ ಮುರಿದ ನಂತರ ಸತತವಾಗಿ ವಿಕೆಟ್‌ಗಳು ಉರುಳಿದವು. ಎಂಟನೇ ಕ್ರಮಾಂಕದ ಶಾರ್ದೂಲ್ ಠಾಕೂರ್ ಅರ್ಧಶತಕ ಗಳಿಸಿದರೂ ಅಷ್ಟರಲ್ಲಿ ಕಾಲ ಮಿಂಚಿತ್ತು.

ADVERTISEMENT

ಬವುಮಾ–ಡಸೆನ್‌ ಆಸರೆ

ಟಾಸ್‌ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ದಕ್ಷಿಣ ಆಫ್ರಿಕಾ ಆರಂಭದಲ್ಲಿ ಕೊಂಚ ಎಡವಿದರೂ ನಾಯಕ, ಮೂರನೇ ಕ್ರಮಾಂಕದ ತೆಂಬಾ ಬವುಮಾ (110; 143 ಎಸೆತ, 8 ಬೌಂಡರಿ) ಮತ್ತು ಐದನೇ ಕ್ರಮಾಂಕದ ರಸಿ ವ್ಯಾನ್ ಡೆರ್‌ ಡುಸೆನ್ (ಔಟಾಗದೆ 129; 96 ಎಸೆತ, 9 ಬೌಂಡರಿ, 4 ಸಿಕ್ಸರ್‌) ಅವರ ಅಮೋಘ ಶತಕಗಳ ಬಲದಿಂದ ಸವಾಲಿನ ಮೊತ್ತ ಕಲೆ ಹಾಕಿತು. ಬವುಮಾ ಮತ್ತು ಡುಸೆನ್‌ಭಾರತದ ವಿರುದ್ಧ ಎರಡನೇ ವಿಕೆಟ್‌ಗೆ ದಾಖಲೆಯ 204 ರನ್‌ಗಳನ್ನು ಸೇರಿಸಿದರು.

ಜಸ್‌ಪ್ರೀತ್ ಬೂಮ್ರಾ ಮತ್ತು ಭುವನೇಶ್ವರ್ ಕುಮಾರ್ ಆರಂಭದಲ್ಲಿ ಆತಿಥೇಯ ಬ್ಯಾಟರ್‌ಗಳನ್ನು ಕಾಡಿದರು. ತಿರುವು ಮತ್ತು ಸ್ವಿಂಗ್ ಲಭಿಸಿದ ಕಾರಣ ಇಬ್ಬರೂ ಪರಿಣಾಮ ಬೀರಿದರು. ಆರನೇ ಓವರ್‌ನಲ್ಲಿ ಬೂಮ್ರಾ ಅವರ ಮೋಹಕ ಔಟ್‌ಸ್ವಿಂಗರ್‌ಗೆ ಜೇನ್‌ಮ್ಯಾನ್ ಮಲಾನ್ ವಿಕೆಟ್ ಕಳೆದುಕೊಂಡರು. ಮೊದಲ ಪವರ್ ಪ್ಲೇ ಮುಗಿದಾಗ ತಂಡ ಒಂದು ವಿಕೆಟ್‌ಗೆ 39 ರನ್ ಎಂಬ ಸ್ಥಿತಿಯಲ್ಲಿತ್ತು.

ಟೆಸ್ಟ್‌ಗೆ ವಿದಾಯ ಹೇಳಿದ ನಂತರ ಮೊದಲ ಏಕದಿನ ಪಂದ್ಯ ಆಡಿದ ಕ್ವಿಂಟನ್ ಡಿ ಕಾಕ್ ಅವರು ಬವುಮಾ ಜೊತೆಗೂಡಿ ಇನಿಂಗ್ಸ್ ಕಟ್ಟಲು ಶ್ರಮಿಸಿದರು. ಆದರೆ ಫಲ ಸಿಗಲಿಲ್ಲ. 2017ರ ಜೂನ್ ನಂತರ ಮೊದಲ ಏಕದಿನ ಪಂದ್ಯ ಆಡಿದ ಆಫ್‌ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಎಸೆತವನ್ನು ಕಟ್ ಮಾಡಲು ಪ್ರಯತ್ನಿಸಿದ ಡಿ ಕಾಕ್ ವಿಕೆಟ್ ಕಳೆದುಕೊಂಡರು.

18 ಓವರ್ ಆಗುವಷ್ಟರಲ್ಲಿ ತಂಡ ಮೂರು ವಿಕೆಟ್ ಕಳೆದುಕೊಂಡಿತು. ಆಗ ಸ್ಕೋರ್‌ ಕಾರ್ಡ್‌ನಲ್ಲಿದ್ದ ಮೊತ್ತ 68 ಮಾತ್ರ. ವೆಂಕಟೇಶ್ ಅಯ್ಯರ್ ಅವರ ನೇರ ಎಸೆತಕ್ಕೆ ಏಡನ್ ಮರ್ಕರಮ್ ರನೌಟ್ ಆಗಿ ಮರಳಿದ್ದರು. ಈ ಹಂತದಲ್ಲಿ ದಕ್ಷಿಣ ಆಫ್ರಿಕಾಕ್ಕೆ 200 ರನ್ ಗಳಿಸುವುದು ಕಷ್ಟ ಎನಿಸಿತ್ತು. ಆದರೆ ಬವುಮಾ ಮತ್ತು ಡುಸೆನ್‌ ಪಂದ್ಯದ ಗತಿಯನ್ನೇ ಬದಲಿಸಿದರು. ಸ್ವೀಪ್ ಮತ್ತು ರಿವರ್ಸ್ ಸ್ವೀಪ್‌ಗಳೊಂದಿಗೆ ಸ್ಪಿನ್ನರ್‌ಗಳನ್ನು ಎದುರಿಸಿದ ಡುಸೆನ್ ವೇಗಿಗಳ ಎದುರು ಭರ್ಜರಿ ಹೊಡೆತಗಳೊಂದಿಗೆ ಮಿಂಚಿದರು.

ಬವುಮಾ ತಾಳ್ಮೆಯಿಂದ ರನ್ ಗಳಿಸುತ್ತ ಸಾಗಿದರು. ಅವರು 45ನೇ ಓವರ್‌ನಲ್ಲಿ ಮೂರಂಕಿ ದಾಟಿದರೆ ಡಸೆನ್‌ 48ನೇ ಓವರ್‌ನಲ್ಲಿ ಶತಕ ಪೂರೈಸಿದರು. ಶಾರ್ದೂಲ್ ಠಾಕೂರ್ ಕೊನೆಯ ಓವರ್‌ನಲ್ಲಿ 17 ರನ್ ಸೇರಿದಂತೆ ಒಟ್ಟು 72 ರನ್ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.