ADVERTISEMENT

IND vs SA 2nd Test: ಭಾರತಕ್ಕೆ ಆರಂಭಿಕ ಆಘಾತ; ಭೋಜನ ವಿರಾಮಕ್ಕೆ 53/3

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2022, 16:13 IST
Last Updated 3 ಜನವರಿ 2022, 16:13 IST
ದಕ್ಷಿಣ ಆಫ್ರಿಕಾ ಆಟಗಾರರು ಸಂಭ್ರಮ
ದಕ್ಷಿಣ ಆಫ್ರಿಕಾ ಆಟಗಾರರು ಸಂಭ್ರಮ   

ಜೋಹಾನ್ಸ್‌ಬರ್ಗ್: ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ವಾಂಡರರ್ಸ್ ಮೈದಾನದಲ್ಲಿ ನಡೆಯುತ್ತಿರುವದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತ ತಂಡವು ಆರಂಭಿಕ ಆಘಾತಕ್ಕೊಳಗಾಗಿದೆ.

ಭೋಜನ ವಿರಾಮಕ್ಕೆ ಭಾರತ ತಂಡವು 26 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿದೆ. ನಾಯಕ ಕೆ.ಎಲ್. ರಾಹುಲ್ (19*) ಆಸರೆಯಾಗಿದ್ದು, ಕ್ರೀಸಿನಲ್ಲಿದ್ದಾರೆ. ಅವರಿಗೆ ಹನುಮ ವಿಹಾರಿ (4*) ಸಾಥ್ ನೀಡುತ್ತಿದ್ದಾರೆ.

ಈ ಮೊದಲು ಗಾಯಾಳು ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟಾಸ್ ಗೆದ್ದ ಕೆ.ಎಲ್. ರಾಹುಲ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಬೆನ್ನು ನೋವಿನಿಂದಾಗಿ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದು, ಇದೇ ಮೊದಲ ಬಾರಿಗೆ ಟೆಸ್ಟ್ ತಂಡವನ್ನು ಮುನ್ನಡೆಸುವ ಅದೃಷ್ಟ ರಾಹುಲ್‌ಗೆ ಒಲಿದಿದೆ.

ಕನ್ನಡಿಗರಾದ ರಾಹುಲ್ ಹಾಗೂ ಮಯಂಕ್ ಅಗರವಾಲ್ ಮೊದಲ ವಿಕೆಟ್‌ಗೆ 36 ರನ್‌ಗಳ ಜೊತೆಯಾಟ ಕಟ್ಟಿದರು. ಈ ಸಂದರ್ಭದಲ್ಲಿ 26 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಅಗರವಾಲ್ ಅವರ ವಿಕೆಟ್ ಮಾರ್ಕೊ ಜಾನ್ಸೆನ್ ಪಾಲಾಯಿತು.

ಬಳಿಕ ಚೇತೇಶ್ವರ ಪೂಜಾರ (3) ಹಾಗೂ ಅಜಿಂಕ್ಯ ರಹಾನೆ (0) ಅವರನ್ನು ಒಂದೇ ಓವರ್‌ನಲ್ಲಿ ಹೊರದಬ್ಬಿದ ಡುವಾನೆ ಒಲಿವಿಯರ್ ಭಾರತವನ್ನು ಕಾಡಿದರು.

ಸೆಂಚುರಿಯನ್‌ನಲ್ಲಿ ನಡೆದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಗೆದ್ದಿರುವ ಟೀಮ್ ಇಂಡಿಯಾ, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.