ADVERTISEMENT

IND vs SA: ಮತ್ತೆ ವಿವಾದಕ್ಕೀಡಾದ ಡಿಆರ್‌ಎಸ್; ಕೊಹ್ಲಿ, ಅಶ್ವಿನ್ ಕೆಂಡಾಮಂಡಲ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಜನವರಿ 2022, 5:52 IST
Last Updated 14 ಜನವರಿ 2022, 5:52 IST
ವಿರಾಟ್ ಕೊಹ್ಲಿ ಅಸಮಾಧಾನ
ವಿರಾಟ್ ಕೊಹ್ಲಿ ಅಸಮಾಧಾನ   

ಕೇಪ್‌ಟೌನ್: ಪ್ರವಾಸಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಇಲ್ಲಿನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ಸಾಗುತ್ತಿರುವ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ರೋಚಕ ಹಂತವನ್ನು ತಲುಪಿದೆ.

ಸರಣಿ ವಿಜೇತರನ್ನು ನಿರ್ಣಯಿಸುವ ಈ ಪಂದ್ಯವು ಅತ್ಯಂತ ಕುತೂಹಲ ಘಟ್ಟಕ್ಕೆ ತಲುಪಿದೆ. ಈ ನಡುವೆ ಡಿಸಿಷನ್ ರಿವ್ಯೂ ಸಿಸ್ಟಂ (ಡಿಆರ್‌ಎಸ್) ನಿಖರತೆ ಕುರಿತು ಮಗದೊಮ್ಮೆ ಅನುಮಾನಗಳು ಮೂಡಿ ಬಂದಿವೆ.

ಮೂರನೇ ದಿನದಾಟದ ಅಂತಿಮ ಅವಧಿಯಲ್ಲಿ ಈ ಘಟನೆ ನಡೆದಿತ್ತು. 212 ರನ್‌ಗಳ ಗುರಿ ಹಿಂಬಾಲಿಸುತ್ತಿದ್ದ ದಕ್ಷಿಣ ಆಫ್ರಿಕಾ ದಿಟ್ಟ ಉತ್ತರವನ್ನೇ ನೀಡುತ್ತಿತ್ತು.

ದ್ವಿತೀಯ ಪಂದ್ಯದ ಹೀರೊ ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಮಗದೊಮ್ಮೆ ಕ್ರೀಸಿನಲ್ಲಿ ಬಂಡೆಕಲ್ಲಿನಂತೆ ನಿಂತಿದ್ದರು. ಈ ಹಂತದಲ್ಲಿ ದಾಳಿಗಿಳಿದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಎಲ್‌ಬಿಡಬ್ಲ್ಯು ಬಲೆಗೆ ಸಿಲುಕಿಸುವಲ್ಲಿ ಯಶಸ್ವಿಯಾದರು.

ಮನವಿ ಪುರಸ್ಕರಿಸಿದ ಫೀಲ್ಡ್ ಅಂಪೈರ್ ಮರಾಯಿಸ್‌ ಎರಾಸ್ಮಸ್ ಔಟ್ ಎಂದು ಘೋಷಿಸಿದರು. ಈ ಸಂದರ್ಭದಲ್ಲಿ ಸಹ ಬ್ಯಾಟರ್ ಕೀಗನ್ ಪೀಟರ್ಸನ್ ಜತೆ ಸಮಾಲೋಚಿಸಿದ ಎಲ್ಗರ್, ಡಿಆರ್‌ಎಸ್ ಮೊರೆ ಹೋಗಲು ನಿರ್ಧರಿಸಿದರು.

ಆದರೆ ಡಿಆರ್‌ಎಸ್‌ನಲ್ಲಿ ಕಂಡುಬಂದ ಚಿತ್ರಣ ನಿಜಕ್ಕೂ ಅಚ್ಚರಿ ಮೂಡಿಸಿತ್ತು. ಚೆಂಡು ಬ್ಯಾಟ್‌ಗೆ ತಗುಲಿರಲಿಲ್ಲ. ನೇರವಾಗಿ ಎಲ್ಗರ್ ಕಾಲಿಗೆ ಅಪ್ಪಳಿಸಿತ್ತು. ಮೊದಲ ನೋಟದಲ್ಲೇ ಔಟ್ ಎಂಬುದು ಸ್ಪಷ್ಟವಾಗಿತ್ತು. ಇನ್ನೇನು ಥರ್ಡ್ ಅಂಪೈರ್ ಔಟ್ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.

ಆದರೆ ಡಿಆರ್‌ಎಸ್‌ನಲ್ಲಿ ಮೂಡಿ ಬಂದ ಚಿತ್ರಣವೇ ಬೇರೆಯಾಗಿತ್ತು. ಚೆಂಡು ಲೆಕ್ಕಕ್ಕೂ ಮೀರಿ ಪುಟಿದೇಳುವ ಮೂಲಕ ವಿಕೆಟ್‌ನ ಮೇಲಿಂದ ಹಾರಿ ಹೋಯಿತು. ಬಳಿಕ ಥರ್ಡ್ ಅಂಪೈರ್ ನಾಟೌಟ್ ಎಂದು ಘೋಷಿಸಿದರು.

ಇದರ ಸಂಪೂರ್ಣ ಪ್ರಯೋಜನ ಪಡೆದ ಎಲ್ಗರ್, ಎರಡನೇ ವಿಕೆಟ್‌ಗೆ ಕೀಗನ್ ಪೀಟರ್ಸನ್ ಜತೆ 88 ರನ್‌ಗಳ ಅಮೂಲ್ಯ ಜೊತೆಯಾಟವನ್ನು ಕಟ್ಟಿದರು. ದಿನದಂತ್ಯದ ವೇಳೆ ಜಸ್‌ಪ್ರೀತ್ ಬೂಮ್ರಾ ದಾಳಿಯಲ್ಲಿ ಔಟ್ ಆದ ಎಲ್ಗರ್ 96 ಎಸೆತಗಳಲ್ಲಿ 30 ರನ್‌ಗಳ ಅಮೂಲ್ಯ ಕೊಡುಗೆ ನೀಡಿದ್ದಾರೆ.

ಕೊಹ್ಲಿ, ಅಶ್ವಿನ್ ಕೆಂಡಾಮಂಡಲ, ಅಂಪೈರ್‌ಗೂ ಶಾಕ್!
ಥರ್ಡ್ ಅಂಪೈರ್ ನಿರ್ಣಯ ಸ್ಟೇಡಿಯಂನ ದೊಡ್ಡ ಪರದೆಯಲ್ಲಿ ಮೂಡಿ ಬರುತ್ತಿದ್ದಂತೆಯೇ ಕುಪಿತಗೊಂಡ ನಾಯಕ ವಿರಾಟ್ ಕೊಹ್ಲಿ, ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ಇಲ್ಲಿಗೆ ವಿರಾಟ್ ಕೋಪ ತಣ್ಣಗಾಗಲಿಲ್ಲ. ಅಶ್ವಿನ್ ಓವರ್ ಮುಗಿದ ಬೆನ್ನಲ್ಲೇ ಸ್ಟಂಪ್ ಮೈಕ್ ಸಮೀಪಕ್ಕೆ ಹೋಗಿ ತಮ್ಮ ಅಸಮಾಧಾನವನ್ನು ಮಾತುಗಳಲ್ಲೇ ಹೊರ ಹಾಕಿದರು.

ರವಿಚಂದ್ರನ್ ಅಶ್ವಿನ್ ಕೂಡ ಡಿಆರ್‌ಎಸ್ ವಿರುದ್ಧ ಹರಿಹಾಯ್ದರು. ಅತ್ತ ಅಂಪೈರ್ ಎರಾಸ್ಮಸ್ ಸಹ 'ಅವಿಶ್ವಸನೀಯ' ಎಂದು ಹೇಳಿಕೊಂಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿವೆ.

ಒಟ್ಟಾರೆಯಾಗಿ ಡಿಆರ್‌ಎಸ್ವಿಶ್ವಾಸಾರ್ಹತೆ, ನಿಖರತೆ ಹಾಗೂ ತಾಂತ್ರಿಕ ದೋಷದ ಕುರಿತು ಕ್ರಿಕೆಟ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಏತನ್ಮಧ್ಯೆ ಕೇಪ್‌ಟೌನ್ ಟೆಸ್ಟ್ ನಿರ್ಣಾಯಕ ಹಂತವನ್ನು ತಲುಪಿದ್ದು, ಎಂಟು ವಿಕೆಟ್ ಬಾಕಿ ಉಳಿದಿರುವಂತೆ ದಕ್ಷಿಣ ಆಫ್ರಿಕಾ ಗೆಲುವಿಗೆ ಇನ್ನು 111 ರನ್ ಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.