ADVERTISEMENT

ನಾಯಕತ್ವ, ಪ್ರಬುದ್ಧ ಬ್ಯಾಟಿಂಗ್: ಆ ಒಂದು ಸಿಕ್ಸರ್‌ಗೆ ರಾಹುಲ್ ಅಭಿಮಾನಿಗಳು ಫಿದಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಡಿಸೆಂಬರ್ 2025, 12:50 IST
Last Updated 1 ಡಿಸೆಂಬರ್ 2025, 12:50 IST
<div class="paragraphs"><p>ಕೆ.ಎಲ್ ರಾಹುಲ್</p></div>

ಕೆ.ಎಲ್ ರಾಹುಲ್

   

ಚಿತ್ರ: @pragadees20O6

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಮೊದಲ ಪಂದ್ಯ ಗೆದ್ದು 1–0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗೆ ಪ್ರಶಂಸೆಗಳ ಸುರಿಮಳೆ ಬಂದಿದೆ. ಇದರ ಜೊತೆಗೆ ನಾಯಕನಾಗಿ ಹಾಗೂ ಆಟಗಾರನಾಗಿ ಕೆ.ಎಲ್. ರಾಹುಲ್ ಕೂಡ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ADVERTISEMENT

ನಾಯಕತ್ವದ ಜವಾಬ್ದಾರಿ

ಶುಭಮನ್ ಗಿಲ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸಿಕೊಂಡ ಕೆ.ಎಲ್. ರಾಹುಲ್ ಅವರು ತಂಡವನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ. ಮಾತ್ರವಲ್ಲ, ವಿಕೆಟ್ ಕೀಪಿಂಗ್ ಜೊತೆಗೆ ಬ್ಯಾಟರ್ ಆಗಿಯೂ ಉತ್ತಮ ಪ್ರದರ್ಶನ ತೋರಿದ್ದಾರೆ. 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ಅವರು, ಆರಂಭದಲ್ಲಿ ನಿಧಾನವಾಗಿ ಇನಿಂಗ್ಸ್ ಆರಂಭಿಸಿ ಅಂತಿಮವಾಗಿ ಉತ್ತಮ ಫಿನಿಶಿಂಗ್ ನೀಡಿದರು. ಆ ಮೂಲಕ ತಂಡದ ಮೊತ್ತವನ್ನು 350ರ ಸಮೀಪಕ್ಕೆ ತಂದು ನಿಲ್ಲಿಸಿದರು.

ಕೆ.ಎಲ್. ರಾಹುಲ್ ತಮ್ಮ ಅಮೋಘ ಇನಿಂಗ್ಸ್‌ನಲ್ಲಿ 2 ಬೌಂಡರಿ, 3 ಸಿಕ್ಸರ್ ಸಹಿತ 56 ಎಸೆತಗಳಲ್ಲಿ 60 ರನ್ ಸಿಡಿಸಿದರು.

ಇನ್ನೂ 49 ಓವರ್‌ನಲ್ಲಿ ಅವರು ಬಾರಿಸಿದ ರಿವರ್ಸ್ ಸ್ವೀಪ್‌ ಹೊಡೆತಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ವೇಗಿ ಮಾರ್ಕೊ ಜಾನ್ಸನ್ ಎಸೆದ ವಿಕೆಟ್ ಮೇಲಿದ್ದ ಬಾಲ್‌ಗೆ ರಿವರ್ಸ್ ಸ್ವೀಪ್ ಮಾಡಿದ ರಾಹುಲ್ ಬಾಲ್ ಅನ್ನು ಸಿಕ್ಸರ್‌ಗೆ ಅಟ್ಟಿದರು. ಸದ್ಯ, ಈ ಶಾಟ್ ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಮಾತ್ರವಲ್ಲ, ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಪಟ್ಟೆ ಹರಿದಾಡುತ್ತಿದೆ.

ಜಾನ್ಸನ್‌ ಅವರ 141.6 ಕಿ.ಮೀ. ವೇಗದಲ್ಲಿ ನುಗ್ಗಿದ ಚೆಂಡು ವಿಕೆಟ್‌ ನೇರವಾಗಿಯೇ ಸಿಡಿದಿತ್ತು. ಆದರೆ ಆ ವೇಗವನ್ನೂ ಗ್ರಹಿಸಿದ ರಾಹುಲ್, ಬಲಬದಿಯಿಂದ, ಎಡಕ್ಕೆ ತಿರುಗಿದರು. ನುಗ್ಗಿ ಬರುತ್ತಿದ್ದ ಚೆಂಡಿಗೆ ಬ್ಯಾಟ್‌ ಮೂಲಕ ಬೌಂಡರಿಯ ದಾರಿ ತೋರಿಸಿದರು.

ರಾಹುಲ್‌ರ ಈ ಶೈಲಿಯ ಹೊಡೆತಕ್ಕೆ ಇಡೀ ಕ್ರೀಡಾಂಗಣವೇ ಹರ್ಷೋದ್ಘಾರ ಮೊಳಗಿಸಿತು. ಇಡೀ ಕ್ರೀಡಾಂಗಣವೇ ಸಂಭ್ರಮದಲ್ಲಿ ತೇಲಾಡಿತು. ನಾಯಕನ ಆಟದ ವೈಖರಿಗೆ ಜಡೇಜಾ ಕೂಡಾ ಫಿದಾ ಆಗಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಚ್ಚರಿ ಮತ್ತು ಆಘಾತದ ಸರದಿ ದಕ್ಷಿಣ ಆಫ್ರಿಕಾ ತಂಡದವರ ಪಾಲಾಯಿತು.

ನಾಯಕನಾಗಿಯೂ ಯಶಸ್ಸು:

350 ರನ್‌ಗಳ ಬೃಹತ್ ಟಾರ್ಗೆಟ್ ನೀಡಿದ ಹೊರತಾಗಿಯೂ ದಕ್ಷಿಣ ಆಫ್ರಿಕಾದ ಕೆಳ ಕ್ರಮಾಂಕದ ಬ್ಯಾಟರ್‌ಗಳು ಉತ್ತಮವಾಗಿ ಬ್ಯಾಟಿಂಗ್ ನಡೆಸುತ್ತಿದ್ದಾಗಲೂ ತಾಳ್ಮೆ ಕಳೆದುಕೊಳ್ಳದೆ, ಸಮಯಕ್ಕೆ ಸರಿಯಾದ ಬೌಲರ್‌ಗಳನ್ನು ಬಳಸಿಕೊಂಡು ತಂಡವನ್ನು ಗೆಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.