ADVERTISEMENT

IND vs WI 1st ODI: ವಿಂಡೀಸ್ ವಿರುದ್ಧ ಭಾರತಕ್ಕೆ 3 ರನ್‌ಗಳ ರೋಚಕ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜುಲೈ 2022, 1:44 IST
Last Updated 23 ಜುಲೈ 2022, 1:44 IST
ವಿಕೆಟ್‌ ಪಡೆದ ಶಾರ್ದೂಲ್‌ ಠಾಕೂರ್‌ ಅವರನ್ನು ನಾಯಕ ಶಿಖರ್‌ ಧವನ್‌ (ಮಧ್ಯ) ಹಾಗೂ ಸೂರ್ಯಕುಮಾರ್‌ ಯಾದವ್‌ (ಬಲ) ಅಭಿನಂದಿಸಿದರು. (ಚಿತ್ರ ಕೃಪೆ: @BCCI ಟ್ವಿಟರ್‌ ಖಾತೆ)
ವಿಕೆಟ್‌ ಪಡೆದ ಶಾರ್ದೂಲ್‌ ಠಾಕೂರ್‌ ಅವರನ್ನು ನಾಯಕ ಶಿಖರ್‌ ಧವನ್‌ (ಮಧ್ಯ) ಹಾಗೂ ಸೂರ್ಯಕುಮಾರ್‌ ಯಾದವ್‌ (ಬಲ) ಅಭಿನಂದಿಸಿದರು. (ಚಿತ್ರ ಕೃಪೆ: @BCCI ಟ್ವಿಟರ್‌ ಖಾತೆ)   

ಪೋರ್ಟ್ ಆಫ್ ಸ್ಪೇನ್, ಟ್ರಿನಿಡಾಡ್:ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 3 ರನ್‌ ಅಂತರದಗೆಲುವು ಸಾಧಿಸಿದೆ.

ಟ್ರೆನಿಡಾಡ್‌ನಕ್ವೀನ್ಸ್‌ ಪಾರ್ಕ್‌ ಓವಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ವಿಂಡೀಸ್‌ ತಂಡದ ನಾಯಕ ನಿಕೋಲಸ್‌ ಪೂರನ್‌, ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು.

ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ನಾಯಕತ್ವದ ಹೊಣೆ ಹೊತ್ತಿರುವ ಶಿಖರ್‌ ಧವನ್‌ ಹಾಗೂ ಶುಭಮನ್‌ ಗಿಲ್‌ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಈ ಜೋಡಿ, ಮೊದಲ ವಿಕೆಟ್‌ಗೆ 119 ರನ್‌ ಕೂಡಿಸಿದರು. 64 ರನ್ ಗಳಿಸಿ ಚೆನ್ನಾಗಿ ಆಡುತ್ತಿದ್ದ ಗಿಲ್‌ 18ನೇ ಓವರ್‌ನಲ್ಲಿ ರನೌಟ್‌ ಆದರು. ಬಳಿಕ ಬಂದ ಶ್ರೇಯಸ್‌ ಅಯ್ಯರ್‌ ಜೊತೆಗೂಡಿದ ಧವನ್‌, ಮತ್ತೊಂದು ಚೆಂದದ ಜೊತೆಯಾಟದಲ್ಲಿ (94 ರನ್‌) ಭಾಗಿಯಾದರು.

ADVERTISEMENT

99 ಎಸೆತಗಳಲ್ಲಿ 97 ರನ್‌ (10 ಬೌಂಡರಿ ಹಾಗೂ 3 ಸಿಕ್ಸರ್‌) ಗಳಿಸಿ ಔಟಾದ ಧವನ್‌, ಕೇವಲ ಮೂರು ರನ್‌ಗಳಿಂದ ಶತಕ ತಪ್ಪಿಸಿಕೊಂಡರು. ಅಯ್ಯರ್‌ ಆಟ 54 ರನ್‌ಗೆ ಕೊನೆಗೊಂಡಿತು.

ಅಂತಿಮವಾಗಿ ಭಾರತ ತಂಡನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 308 ರನ್‌ ಗಳಿಸಿತು.

ಈ ಗುರಿ ಬೆನ್ನತ್ತಿದ ವಿಂಡೀಸ್‌ ಭರವಸೆಯ ಬ್ಯಾಟರ್‌ ಶಾಯ್‌ ಹೋಪ್‌ (7) ವಿಕೆಟ್‌ ಅನ್ನು ಬೇಗನೆ ಕಳೆದುಕೊಂಡಿತು. ಆದರೆ, ಕೈಲ್ ಮೇಯರ್ಸ್, ಶಾಮ್ರಾ ಬ್ರೂಕ್ಸ್ ಮತ್ತು ಬ್ರೆಂಡನ್‌ ಕಿಂಗ್‌ ಇನಿಂಗ್ಸ್‌ಗೆ ಚೇತರಿಕೆ ನೀಡಿದರು. ಮೇಯರ್ಸ್ (75) ಮತ್ತು ಕಿಂಗ್‌ (54) ಅರ್ಧಶತಕ ಗಳಿಸಿದರೆ,ಬ್ರೂಕ್ಸ್ 46 ರನ್‌ ಗಳಿಸಿದರು.

ಹೀಗಾಗಿ ಆತಿಥೇಯ ತಂಡ ಕೊನೇ ಓವರ್‌ ವರೆಗೂ ಹೋರಾಟ ನಡೆಸಿತು.

ವಿಂಡೀಸ್‌ ಗೆಲುವಿಗೆ ಅಂತಿಮ ಓವರ್‌ನಲ್ಲಿ 15 ರನ್‌ ಬೇಕಿತ್ತು. ಮೊಹಮ್ಮದ್‌ ಸಿರಾಜ್‌ ಎಸೆದ ಈ ಓವರ್‌ನಲ್ಲಿ ಅಕೀಲ್ ಹುಸೇನ್ (32) ಹಾಗೂ ರೊಮಾರಿಯೊ ಶೆಫರ್ಡ್‌(39) ಜೋಡಿ 11 ರನ್‌ ಗಳಿಸಲಷ್ಟೇ ಶಕ್ತವಾಯಿತು.ಹೀಗಾಗಿಎಲ್ಲ ಓವರ್‌ಗಳ ಅಂತ್ಯಕ್ಕೆ 6 ವಿಕೆಟ್‌ಗಳನ್ನು ಕಳೆದುಕೊಂಡು 305 ರನ್‌ ಕಲೆಹಾಕಿದಪೂರನ್‌ ಪಡೆ 3 ರನ್‌ಗಳ ಅಲ್ಪ ಅಂತರದ ಸೋಲೊಪ್ಪಿಕೊಳ್ಳಬೇಕಾಯಿತು.

ಭಾರತ ಪರ ಸಿರಾಜ್‌, ಯಜುವೇಂದ್ರ ಚಾಹಲ್ ಹಾಗೂಶಾರ್ದೂಲ್ ಠಾಕೂರ್ ತಲಾ ಮೂರು ವಿಕೆಟ್‌ ಕಿತ್ತರು.

ಮುಂದಿನ ಪಂದ್ಯ ಇದೇ ಕ್ರೀಡಾಂಗಣದಲ್ಲಿ ಭಾನುವಾರ (ಜು.24) ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.