ADVERTISEMENT

Ind vs WI Test: ದೆಹಲಿಯಲ್ಲಿ ಯಶಸ್ವಿ ಜೈಸ್ವಾಲ್ ದರ್ಬಾರ್

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2025, 20:17 IST
Last Updated 10 ಅಕ್ಟೋಬರ್ 2025, 20:17 IST
<div class="paragraphs"><p>ಭಾರತ ತಂಡದ ಸಾಯಿ ಸುದರ್ಶನ್ ಮತ್ತು ಯಶಸ್ವಿ ಜೈಸ್ವಾಲ್&nbsp;</p></div>

ಭಾರತ ತಂಡದ ಸಾಯಿ ಸುದರ್ಶನ್ ಮತ್ತು ಯಶಸ್ವಿ ಜೈಸ್ವಾಲ್ 

   

–ಪಿಟಿಐ ಚಿತ್ರ

ನವದೆಹಲಿ: ಭಾರತದ ಬ್ಯಾಟರ್‌ಗಳಿಗೆಂದೇ ಸಿದ್ಧಗೊಂಡಿದ್ದ ‘ವೇದಿಕೆ’ಯ ಮೇಲೆ ಯಶಸ್ವಿ ಜೈಸ್ವಾಲ್ ಮತ್ತು ಸಾಯಿ ಸುದರ್ಶನ್ ಸೊಗಸಾದ ಆಟ ಪ್ರದರ್ಶಿಸಿದರು.  

ADVERTISEMENT

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ಆತಿಥೇಯ ತಂಡದ ನಾಯಕ ಶುಭಮನ್ ಗಿಲ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ನಾಯಕರಾದ ನಂತರ ಇದೇ ಮೊದಲ ಬಾರಿ ಅವರು ಟಾಸ್ ಜಯಿಸಿದರು. ಕಳೆದ ಆರು ಪಂದ್ಯಗಳಲ್ಲಿಯೂ ಸೋತಿದ್ದರು.  ‘ಭವಿಷ್ಯದ ತಾರೆ’ಗಳಾದ ಯಶಸ್ವಿ (ಅಜೇಯ 173; 253ಎಸೆತ, 4X22) ಮತ್ತು ಸಾಯಿ (87; 165ಎ, 4X12) ಅವರ ಚೆಂದದ ಬ್ಯಾಟಿಂಗ್‌ನಿಂದ ಆತಿಥೇಯ ತಂಡವು ಮೊದಲ ದಿನದಾಟದ ಮುಕ್ತಾಯಕ್ಕೆ 90 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 318 ರನ್ ಗಳಿಸಿತು. 

ವಿಂಡೀಸ್ ಬೌಲರ್‌ಗಳು ದಿನದ ಮೊದಲ ಒಂದು ಗಂಟೆಯ ಆಟದಲ್ಲಿ ಪರಿಣಾಮಕಾರಿಯಾಗಿ ಕಂಡರು. ವೇಗಿಗಳಾದ ಜೈಡನ್ ಸೀಲ್ಸ್ ಮತ್ತು ಆ್ಯಂಡರ್ಸನ್ ಫಿಲಿಪ್ ಅವರು ಶಿಸ್ತುಬದ್ಧವಾಗಿ ಲೈನ್ ಮತ್ತು ಲೆಂಗ್ತ್‌ ನಿರ್ವಹಿಸಿದರು. ಆರಂಭಿಕ ಬ್ಯಾಟರ್‌ಗಳಾದ  ಯಶಸ್ವಿ ಮತ್ತು ಕೆ.ಎಲ್. ರಾಹುಲ್ ಅವರು ಕೆಲವು ಬಾರಿ ಬೀಟ್ ಕೂಡ ಆದರು. ಇಬ್ಬರೂ ಬೌಲರ್‌ಗಳ ಉತ್ತಮ ಎಸೆತಗಳಿಗೆ ಬ್ಯಾಟರ್‌ಗಳು ತಲೆಬಾಗಿ ಆಡಿದರು.

ನಿಧಾನವಾಗಿ ಆಟಕ್ಕೆ ಕುದುರಿಕೊಂಡ ರಾಹುಲ್ (38; 54ಎ, 4X5, 6X1) ಬ್ಯಾಟ್ ಬೀಸತೊಡಗಿದರು. ಅವರ ಆಟದಲ್ಲಿ ತುಂಬು ಆತ್ಮವಿಶ್ವಾಸವಿತ್ತು. ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ಅವರು ಪೂರ್ಣ ಲಯದಲ್ಲಿದ್ದರು. ಆದರೆ, 18ನೇ ಓವರ್‌ನಲ್ಲಿ ಜೊಮೆಲ್ ವಾರಿಕನ್ ಎಸೆತದಲ್ಲಿ ವಿಕೆಟ್‌ಕೀಪರ್ ಟೆವಿನ್ ಇಮ್ಲಾಚ್ ಮಾಡಿದ ಸ್ಟಂಪಿಂಗ್‌ಗೆ ರಾಹುಲ್ ಇನಿಂಗ್ಸ್‌ಗೆ ತೆರೆಬಿತ್ತು. 

ಇದರ ನಂತರ ಜೈಸ್ವಾಲ್ ಮತ್ತು ಸಾಯಿ ಇನಿಂಗ್ಸ್‌ ಕಟ್ಟುವ ಹೊಣೆ ಹೊತ್ತುಕೊಂಡರು. ನಿರಾತಂಕ ಮನಸ್ಥಿತಿಯ ಆಟವಾಡಿದರು. ಈಚೆಗೆ ಇಂಗ್ಲೆಂಡ್ ಪ್ರವಾಸದಲ್ಲಿ ತೋರಿದ್ದ ಮಾದರಿಯ ಆಟವೇ ಇಲ್ಲಿಯೂ ಅವರಿಂದ ಹೊರಹೊಮ್ಮಿತು. ದೊಡ್ಡ ಹೊಡೆತಗಳಿಗಿಂತ ತಾಳ್ಮೆಯ ಆಟಕ್ಕೆ ಹೆಚ್ಚು ಒತ್ತುಕೊಟ್ಟರು. ಕಟ್ಸ್, ಪಂಚ್ ಮತ್ತು ಡ್ರೈವ್‌ಗಳನ್ನು ಲೀಲಾಜಾಲವಾಗಿ ಪ್ರಯೋಗಿಸಿದರು. ಶಾಸ್ತ್ರಬದ್ಧ ಬ್ಯಾಟಿಂಗ್ ಅವರಿಗೆ ರನ್‌ಗಳನ್ನು ತಂದುಕೊಟ್ಟವು. 

ಚಹಾ ವಿರಾಮಕ್ಕೂ ಮುನ್ನ ಶತಕ ಪೂರ್ಣಗೊಳಿಸಿದ ಎಡಗೈ ಬ್ಯಾಟರ್ ಯಶಸ್ವಿ ದಾಖಲೆಯ ಪುಟ ಸೇರಿದರು. 24 ವರ್ಷ ವಯಸ್ಸಿನೊಳಗೇ ಏಳು ಟೆಸ್ಟ್ ಶತಕಗಳನ್ನು ದಾಖಲಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡರು. ಈ ಸಾಧನೆ ಮಾಡಿದ ನಾಲ್ಕನೇ ಬ್ಯಾಟರ್ ಅವರಾದರು. 

ಇನ್ನೊಂದೆಡೆ ಎಡಗೈ ಬ್ಯಾಟರ್, 23 ವರ್ಷದ ಸಾಯಿ ತುಸು ಒತ್ತಡದಲ್ಲಿದ್ದರು. ಮೂರನೇ ಕ್ರಮಾಂಕದ ಸ್ಥಾನವನ್ನು ತುಂಬಲು ಇದುವರೆಗೆ ಲಭಿಸಿದ ಅವಕಾಶಗಳಲ್ಲಿ ಅವರು ಹೆಚ್ಚು ರನ್ ಗಳಿಸಿರಲಿಲ್ಲ. ಆದ್ದರಿಂದ ಈ ಪಂದ್ಯವು ಅವರಿಗೆ ಮಹತ್ವದ್ದಾಗಿತ್ತು. ಆಯ್ಕೆಗಾರರ ವಿಶ್ವಾಸ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಬಹುತೇಕ ಸಫಲರಾದರು. 

ಸಾಯಿ 58 ರನ್ ಗಳಿಸಿದ್ದ ಸಂದರ್ಭದಲ್ಲಿ ಜೊಮೆಲ್ ವಾರಿಕನ್ ಅವರು ಮಿಡ್‌ವಿಕೆಟ್‌ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದರು. ಇದರಿಂದಾಗಿ ತಮಿಳುನಾಡು ಬ್ಯಾಟರ್‌ ಸಾಯಿ, ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ  ಶತಕ ಗಳಿಸುವ ಭರವಸೆ ಮೂಡಿಸಿದ್ದರು. ಆದರೆ ವಾರಿಕನ್ ತಮ್ಮ ತಪ್ಪು ತಿದ್ದಿಕೊಂಡರು. ಸಾಯಿ ಸುದರ್ಶನ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಸಾಯಿ ನಿರಾಶೆಯಿಂದ ಮರಳಿದರು. 

ಯಶಸ್ವಿಯೊಂದಿಗೆ ಸೇರಿದ ಗಿಲ್ (ಬ್ಯಾಟಿಂಗ್ 20; 68ಎ) ಕೂಡ ಉತ್ತಮ ಲಯದಲ್ಲಿದ್ದಂತೆ ಕಾಣುತ್ತಿದ್ದಾರೆ. ಅವರಿಬ್ಬರೂ ಶನಿವಾರಕ್ಕೆ ತಮ್ಮ ಆಟ ಕಾಯ್ದಿಟ್ಟುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.