ADVERTISEMENT

ಆಸ್ಟ್ರೇಲಿಯಾ 'ಎ' ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಮುಗ್ಗರಿಸಿದ ಭಾರತ 'ಎ'

ಏಜೆನ್ಸೀಸ್
Published 8 ಡಿಸೆಂಬರ್ 2020, 7:05 IST
Last Updated 8 ಡಿಸೆಂಬರ್ 2020, 7:05 IST
ವೃದ್ಧಿಮಾನ್ ಸಹಾ
ವೃದ್ಧಿಮಾನ್ ಸಹಾ   

ಸಿಡ್ನಿ: ಇದೇ ತಿಂಗಳು ಆರಂಭವಾಗಲಿರುವ ಬಹುನಿರೀಕ್ಷಿತ ಟೆಸ್ಟ್ ಸರಣಿಯ ಪೂರ್ವ ಸಿದ್ಧತೆಗಾಗಿ ಆಸ್ಟ್ರೇಲಿಯಾ 'ಎ' ವಿರುದ್ಧ ನಡೆಯುತ್ತಿರುವ ಅಭ್ಯಾಸ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮುಗ್ಗರಿಸಿರುವ ಭಾರತ 'ಎ' ತಂಡವು ಮೂರನೇ ದಿನದಾಟದಲ್ಲಿ 61 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿ ಡಿಕ್ಲೇರ್ ಘೋಘಿಸಿದೆ.

ಬಳಿಕ ಉತ್ತರ ನೀಡಿದ ಆಸ್ಟ್ರೇಲಿಯಾ 'ಎ' ತಂಡವು ಒಂದು ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿತ್ತು. ಈ ಸಂದರ್ಭದಲ್ಲಿಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಲು ನಿರ್ಧರಿಸಲಾಯಿತು.

ಕೆಳ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅರ್ಧಶತಕ ದಾಖಲಿಸಿರುವುದನ್ನು ಹೊರತುಪಡಿಸಿದರೆ ಇತರೆಲ್ಲ ಬ್ಯಾಟ್ಸ್‌ಮನ್‌ಗಳು ಪ್ರಭಾವಿ ಎನಿಸಿಕೊಳ್ಳುವಲ್ಲಿ ವಿಫಲವಾದರು.

ADVERTISEMENT

ಆರಂಭಿಕರಾದ ಪೃಥ್ವಿ ಶಾ (19) ಹಾಗೂ ಶುಭಮನ್ ಗಿಲ್ (29) ಹೆಚ್ಚು ಹೊತ್ತು ನಿಲ್ಲಲಿಲ್ಲ. ಚೇತೇಶ್ವರ ಪೂಜಾರ ಖಾತೆ ತೆರೆಯುವಲ್ಲಿ ವಿಫಲವಾದರು. ಮೊದಲ ಇನ್ನಿಂಗ್ಸ್‌ನ ಶತಕವೀರ ನಾಯಕ ಅಜಿಂಕ್ಯ ರಹಾನೆ ಮತ್ತು ಹನುಮ ವಿಹಾರಿ ತಲಾ 28 ರನ್ ಗಳಿಸಿದರು.

ಬಳಿಕ ಕ್ರೀಸಿಗಿಳಿದ ವೃದ್ಧಿಮಾನ್ ಸಹಾ ಕ್ರೀಸಿನಲ್ಲಿ ನೆಲೆಯೂರುವ ಮೂಲಕ ಉತ್ತಮ ಅಭ್ಯಾಸ ಮಾಡಿಕೊಂಡರು. 100 ಎಸೆತಗಳನ್ನು ಎದುರಿಸಿದ ಸಹಾ ಏಳು ಬೌಂಡರಿಗಳ ನೆರವಿನಿಂದ ಅಜೇಯ 54 ರನ್ ಗಳಿಸಿದರು.

ಇನ್ನುಳಿದಂತೆ ರವಿಚಂದ್ರನ್ ಅಶ್ವಿನ್ (8), ಕುಲ್‌ದೀಪ್ ಯಾದವ್ (0), ಉಮೇಶ್ ಯಾದವ್ (11), ಮೊಹಮ್ಮದ್ ಸಿರಾಜ್ (0) ಹಾಗೂ ಕಾರ್ತಿಕ್ ತ್ಯಾಗಿ (2*) ರನ್ ಗಳಿಸಿದರು. ಆಸೀಸ್ ಪರ ಪರಿಣಾಮಕಾರಿ ದಾಳಿ ಸಂಘಟಿಸಿದ ಮಾರ್ಕ್ ಸ್ಟೆಕೆಟೀ 37 ರನ್ ತೆತ್ತು ಐದು ವಿಕೆಟ್ ಕಿತ್ತು ಮಿಂಚಿದರು.

ಈ ಮೊದಲು ಅಜಿಂಕ್ಯ ರಹಾನೆ ಆಕರ್ಷಕ ಶತಕ (117*) ಹಾಗೂ ಚೇತೇಶ್ವರ ಪೂಜಾರ (54) ಅರ್ಧಶತಕದ ನೆರವಿನಿಂದ ಭಾರತ 'ಎ' ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು.

ಇದಕ್ಕುತ್ತರವಾಗಿ ಕ್ಯಾಮರೂನ್ ಗ್ರೀನ್ ಶತಕದ (125*) ಬಲದಿಂದ ಆಸ್ಟ್ರೇಲಿಯಾ 'ಎ' ತಂಡವು ಪ್ರಥಮ ಇನ್ನಿಂಗ್ಸ್‌ನಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 306 ರನ್ ಗಳಿಸಿ ಡಿಕ್ಲೇರ್ ಘೋಷಿಸಿತು. ಭಾರತದ ಪರ ಉಮೇಶ್ ಯಾದವ್ ಹಾಗೂ ಮೊಹಮ್ಮದ್ ಸಿರಾಜ್ ತಲಾ ಮೂರು ಮತ್ತು ರವಿಚಂದ್ರನ್ ಅಶ್ವಿನ್ ಎರಡು ವಿಕೆಟ್‌ಗಳನ್ನು ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.