ADVERTISEMENT

ಜೋ ಕಾರ್ಟರ್‌ ಬ್ಯಾಟಿಂಗ್ ಸೊಬಗು

ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಗಳಿಸಿದ ಕಿವೀಸ್: ಅಭಿಮನ್ಯು ಈಶ್ವರನ್ ತಿರುಗೇಟು

ಗಿರೀಶದೊಡ್ಡಮನಿ
Published 2 ಸೆಪ್ಟೆಂಬರ್ 2022, 19:30 IST
Last Updated 2 ಸೆಪ್ಟೆಂಬರ್ 2022, 19:30 IST
ನ್ಯೂಜಿಲೆಂಡ್ ಎ ತಂಡದ ಜೋ ಕಾರ್ಟರ್ ಬ್ಯಾಟಿಂಗ್ ಸೊಬಗು  –ಪ್ರಜಾವಾಣಿ ಚಿತ್ರ/ವಿ. ಪುಷ್ಕರ್ 
ನ್ಯೂಜಿಲೆಂಡ್ ಎ ತಂಡದ ಜೋ ಕಾರ್ಟರ್ ಬ್ಯಾಟಿಂಗ್ ಸೊಬಗು  –ಪ್ರಜಾವಾಣಿ ಚಿತ್ರ/ವಿ. ಪುಷ್ಕರ್    

ಬೆಂಗಳೂರು: ಶುಕ್ರವಾರ ಮಳೆ ಬರಲಿಲ್ಲ. ಆದರೆ, ನ್ಯೂಜಿಲೆಂಡ್ ಎ ತಂಡದ ಜೋ ಕಾರ್ಟರ್‌ ಹಾಗೂ ಭಾರತ ಎ ತಂಡದ ಅಭಿಮನ್ಯು ಈಶ್ವರನ್ ಅವರು ರನ್‌ಗಳ ಹೊಳೆ ಹರಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ‘ಟೆಸ್ಟ್‌’ ಪಂದ್ಯದ ಎರಡನೇ ದಿನದಾಟದಲ್ಲಿ ಕಿವೀಸ್ ಬಳಗದ ಕಾರ್ಟರ್ (197; 305ಎ, 4X26, 6X3) ಮೂರು ರನ್‌ಗಳ ಅಂತರದಿಂದ ದ್ವಿಶತಕ ತಪ್ಪಿಸಿಕೊಂಡರು. ತಂಡವು 110.5 ಓವರ್‌ಗಳಲ್ಲಿ 400 ರನ್‌ ಗಳಿಸಿ ಆಲೌಟ್ ಆಯಿತು. ಗುರುವಾರ ಕಾರ್ಟರ್‌ 73 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದರು. ಶುಕ್ರವಾರ ತಮ್ಮ ಮೊತ್ತಕ್ಕೆ ಮತ್ತೆ 124 ರನ್‌ಗಳನ್ನು ಸೇರಿಸಿದರು. 29 ವರ್ಷದ ಬಲಗೈ ಬ್ಯಾಟರ್ ಆತಿಥೇಯ ತಂಡದ ದಾಳಿಯನ್ನು ಆತ್ಮವಿಶ್ವಾಸದಿಂದ ಎದುರಿಸಿದರು. ಇನ್ನೊಂದು ಬದಿಯಲ್ಲಿ ಬ್ಯಾಟರ್‌ಗಳು ರನ್‌ ಗಳಿಸಲು ಪರದಾಡುತ್ತಿದ್ದರೆ ಕಾರ್ಟರ್‌ ಮಾತ್ರ ಲೀಲಾಜಾಲವಾಗಿ ಬ್ಯಾಟ್ ಬೀಸಿದರು.

ಮೊದಲ ದಿನ ಮೂರು ವಿಕೆಟ್ ಗಳಿಸಿದ್ದ ಮಧ್ಯಮವೇಗಿ ಮುಕೇಶ್ ಕುಮಾರ್ ಮತ್ತೆರಡು ವಿಕೆಟ್ ಕಬಳಿಸಿ ಐದರ ಗೊಂಚಲು ಗಳಿಸಿದರು.

ADVERTISEMENT

ನಂತರ ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ನಾಯಕ ಪ್ರಿಯಾಂಕ್ ಪಾಂಚಾಲ್ (47; 83ಎ, 4X4) ಹಾಗೂ ಅಭಿಮನ್ಯು (ಬ್ಯಾಟಿಂಗ್ 87; 120ಎ, 4X10, 6X1) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 123 ರನ್‌ಗಳನ್ನು ಸೇರಿಸಿದರು.

29ನೇ ಓವರ್‌ನಲ್ಲಿ ಪ್ರಿಯಾಂಕ್‌ ಔಟಾದ ನಂತರವೂ ಅಭಿಮನ್ಯು ಆಟ ಮುಂದುವರಿಯಿತು. ಅವರಿಗೆ ಋತುರಾಜ್ (ಬ್ಯಾಟಿಂಗ್ 20; 19ಎ) ಜೊತೆ ನೀಡಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ನ್ಯೂಜಿಲೆಂಡ್ ಎ: 110.5 ಓವರ್‌ಗಳಲ್ಲಿ 400 (ಜೋ ಕಾರ್ಟರ್ 197, ಜೋ ವಾಕರ್ 22, ಜೇಕಪ್ ಡಫಿ ಔಟಾಗದೆ 17, ಮುಕೇಶ್ ಕುಮಾರ್ 86ಕ್ಕೆ5, ಸರ್ಫರಾಜ್ ಖಾನ್ 32ಕ್ಕೆ2) ಭಾರತ ಎ: 37 ಓವರ್‌ಗಳಲ್ಲಿ 1 ವಿಕೆಟ್‌ಗೆ 156 (ಪ್ರಿಯಾಂಕ್ ಪಾಂಚಾಲ್ 47, ಅಭಿಮನ್ಯು ಈಶ್ವರನ್ ಬ್ಯಾಟಿಂಗ್ 87, ಋತುರಾಜ್ ಗಾಯಕವಾಡ್ ಬ್ಯಾಟಿಂಗ್ 20, ರಚಿನ್ ರವೀಂದ್ರ 22ಕ್ಕೆ1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.