ADVERTISEMENT

ಭಾರತ ಎ – ದಕ್ಷಿಣ ಆಫ್ರಿಕಾ ಎ ಹಣಾಹಣಿ: ಪಂತ್ ಪಡೆಗೆ ಬವುಮಾ ಬಳಗ ಮುಖಾಮುಖಿ

ಪಿಟಿಐ
Published 5 ನವೆಂಬರ್ 2025, 23:30 IST
Last Updated 5 ನವೆಂಬರ್ 2025, 23:30 IST
ದಕ್ಷಿಣ ಆಫ್ರಿಕಾ ಎ ತಂಡದ ನಾಯಕ ತೆಂಬಾ ಬವುಮಾ 
ದಕ್ಷಿಣ ಆಫ್ರಿಕಾ ಎ ತಂಡದ ನಾಯಕ ತೆಂಬಾ ಬವುಮಾ    

ಬೆಂಗಳೂರು: ರಿಷಭ್ ಪಂತ್ ನಾಯಕತ್ವದ ಭಾರತ ಎ ತಂಡವು ಗುರುವಾರ ಇಲ್ಲಿ ಆರಂಭವಾಗಲಿರುವ ‘ಟೆಸ್ಟ್’  ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎ ವಿರುದ್ಧ ಕಣಕ್ಕಿಳಿಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ ದಕ್ಷಿಣ ಆಫ್ತಿಕಾ ತಂಡದ ನಾಯಕ ತೆಂಬಾ ಇಲ್ಲಿ ಎ ತಂಡವನ್ನೂ ಮುನ್ನಡೆಸಲಿದ್ದಾರೆ. 

ಈಚೆಗೆ ಇಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಎ ತಂಡವು ದಕ್ಷಿಣ ಆಫ್ರಿಕಾ ಎ ಬಳಗದ ಎದುರು ಜಯಿಸಿತ್ತು. ಎರಡನೇ ಪಂದ್ಯದಲ್ಲಿಯೂ ಗೆದ್ದು ಸರಣಿಯನ್ನು ಕೈವಶ ಮಾಡಿಕೊಳ್ಳುವತ್ತ ಚಿತ್ತ ನೆಟ್ಟಿದೆ. ನಗರದ ಹೊರವಲಯದಲ್ಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಕರ್ನಾಟಕದ ಕೆ.ಎಲ್. ರಾಹುಲ್, ವೇಗಿ ಪ್ರಸಿದ್ಧ ಕೃಷ್ಣ ಹಾಗೂ ದೇವದತ್ತ ಪಡಿಕ್ಕಲ್ ಕೂಡ ಆಡಲಿದ್ದಾರೆ. 

ಭಾರತ ಟೆಸ್ಟ್ ತಂಡದಲ್ಲಿ ಈ ಮೂವರೂ ಸ್ಥಾನ ಪಡೆದಿದ್ದಾರೆ. ವೇಗಿ ಸಿರಾಜ್ ಅಹಮದ್ ಮತ್ತು ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರೂ ಇಲ್ಲಿ ಕಣಕ್ಕಿಳಿಯಲಿದ್ದಾರೆ. ವೇಗಿ ಆಕಾಶ್ ದೀಪ್ ಕೂಡ ಗಾಯದಿಂದ ಚೇತರಿಸಿಕೊಂಡಿದ್ದು ಈ ಪಂದ್ಯದಲ್ಲಿ ತಮ್ಮ ಸಾಮರ್ಥ್ಯವನ್ನು ಪರೀಕ್ಷೆಗೊಡ್ಡಲಿದ್ದಾರೆ. 

ADVERTISEMENT

 ಮೊದಲ ಪಂದ್ಯದಲ್ಲಿ ರಿಷಭ್ ಅವರು ಎರಡನೇ ಇನಿಂಗ್ಸ್‌ನಲ್ಲಿ 90 ರನ್ ಗಳಿಸಿದ್ದರು. ತನುಷ್ ಕೋಟ್ಯಾನ್ ಎರಡೂ ಇನಿಂಗ್ಸ್‌ಗಳಲ್ಲಿಯೂ ಅಮೋಘ ಬೌಲಿಂಗ್ ಮಾಡಿ ಗೆಲುವಿನ ರೂವಾರಿಯಾಗಿದ್ದರು. ಸಾಯಿ ಸುದರ್ಶನ್, ದೇವದತ್ತ ಪಡಿಕ್ಕಲ್ ಅವರು ಆ ಪಂದ್ಯದಲ್ಲಿ ದೀರ್ಘ ಇನಿಂಗ್ಸ್ ಆಡಿರಲಿಲ್ಲ. ಆದ್ದರಿಂದ ಈ ಪಂದ್ಯದಲ್ಲಿ ತಮ್ಮ ಲಯ ಕಂಡುಕೊಳ್ಳುವ ಸವಾಲು ಅವರ ಮುಂದಿದೆ. 

ದಕ್ಷಿಣ ಆಫ್ರಿಕಾ ಎ ತಂಡದ ಸ್ಪಿನ್ನರ್ ಪ್ರೆನೆಲನ್ ಸುಬ್ರಾಯನ್ ಮತ್ತು ವೇಗಿ ವ್ಯಾನ್ ವುರನ್ ಅವರು ಕಳೆದ ಪಂದ್ಯದಲ್ಲಿ ಉತ್ತಮವಾಗಿ ಆಡಿದ್ದರು. ಈ ಪಂದ್ಯದಲ್ಲಿಯೂ ತಮ್ಮ ಕೈಚಳಕ ಮೆರೆಯಲು ಸಿದ್ಧರಾಗಿದ್ದಾರೆ. ತೆಂಬಾ ತಂಡಕ್ಕೆ ಮರಳಿರುವುದರಿಂದ ಬ್ಯಾಟಿಂಗ್ ವಿಭಾಗ ಬಲಗೊಂಡಿದೆ.  ಇದೇ 14ರಿಂದ ಭಾರತದ ಎದುರು ದಕ್ಷಿಣ ಆಫ್ರಿಕಾ ತಂಡವು ಟೆಸ್ಟ್ ಸರಣಿ ಆಡಲಿದೆ. ಅದಕ್ಕೂ ಮುನ್ನ ತೆಂಬಾ ಅವರಿಗೆ ಈ ಪಂದ್ಯವು ‘ಪೂರ್ವಾಭ್ಯಾಸ’ದ ವೇದಿಕೆಯಾಗಲಿದೆ.

ತಂಡಗಳು: 

ಭಾರತ ಎ: ರಿಷಭ್ ಪಂತ್ (ನಾಯಕ–ವಿಕೆಟ್‌ಕೀಪರ್), ಕೆ.ಎಲ್. ರಾಹುಲ್, ಅಭಿಮನ್ಯು ಈಶ್ವರನ್, ಸಾಯಿ ಸುದರ್ಶನ್, ಋತುರಾಜ್ ಗಾಯಕವಾಡ, ಧ್ರುವ ಜುರೇಲ್, ಹರ್ಷ ದುಬೆ, ತನುಷ್ ಕೋಟ್ಯಾನ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ಖಲೀಲ್ ಅಹಮದ್, ಆಕಾಶ್ ದೀಪ್, ಗುರನೂರ್‌ ಬ್ರಾರ್, ಮಾನವ್ ಸುತಾರ್, ದೇವದತ್ತ ಪಡಿಕ್ಕಲ್.

ದಕ್ಷಿಣ ಆಫ್ರಿಕಾ ಎ: ತೆಂಬಾ ಬವುಮಾ (ನಾಯಕ), ಜೋರ್ಡನ್ ಹರ್ಮನ್, ಲೆಸೆಗೊ ಸೆಂಕೊವಾನೆ, ಜುಬೇರ್ ಹಮ್ಜಾ, ಮಾರ್ಕೆಸ್ ಏಕರ್ಮನ್, ರುಬಿನ್ ಹೆರ್ಮನ್, ರಿವಾಲ್ಡೊ ಮೂನಸಾಮಿ (ವಿಕೆಟ್‌ಕೀಪರ್), ಟಿಯಾನ್ ವ್ಯಾನ್ ವುರೆನ್, ಪ್ರೆನೆಲನ್ ಸುಬ್ರಾಯನ್, ಟಿಶೆಪೊ ಮೊರೆಕಿ, ಲುಥೊ ಸಿಪಾಮ್ಲಾ, ಒಕುಲೆ ಸಿಲೆ, ಜೇಸನ್ ಸ್ಮಿತ್, ಕೈಲ್ ಸೈಮಂಡ್ಸ್, ಟಿಸೆಪೊ ಎನ್‌ವಾಂದ್ವಾ, ಮಿಹಲಾಲಿ ಎಂಪಾಂಗವನಾ, ಕೊಡಿ ಯೂಸುಫ್. 

ಪಂದ್ಯ ಆರಂಭ: ಬೆಳಿಗ್ಗೆ 9.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.