ADVERTISEMENT

ಭಾರತ ‘ಎ’–ದಕ್ಷಿಣ ಆಫ್ರಿಕಾ ‘ಎ’ ಹಣಾಹಣಿ: ರಿಷಭ್ ಪಂತ್‌ ಬಳಗಕ್ಕೆ ‘ಟೆಸ್ಟ್’

ಗಿರೀಶ ದೊಡ್ಡಮನಿ
Published 29 ಅಕ್ಟೋಬರ್ 2025, 23:30 IST
Last Updated 29 ಅಕ್ಟೋಬರ್ 2025, 23:30 IST
<div class="paragraphs"><p>ಭಾರತ ಎ ತಂಡದ ನಾಯಕ ರಿಷಭ್ ಪಂತ್&nbsp; </p></div>

ಭಾರತ ಎ ತಂಡದ ನಾಯಕ ರಿಷಭ್ ಪಂತ್ 

   

 –ಪಿಟಿಐ ಚಿತ್ರ 

ಬೆಂಗಳೂರು: ವಿಕೆಟ್‌ಕೀಪರ್–ಬ್ಯಾಟರ್ ರಿಷಭ್ ಪಂತ್ ಅವರು ಕ್ರೀಸ್‌ನಲ್ಲಿದ್ದಾಗ ವೈವಿಧ್ಯಮಯ ಹೊಡೆತಗಳನ್ನು ಕಣ್ತುಂಬಿಕೊಳ್ಳುವುದೇ ಹಬ್ಬವಿದ್ದಂತೆ. ವಿಕೆಟ್‌ಕೀಪಿಂಗ್ ಮಾಡುವಾಗಲೂ ತಮ್ಮ ಹಾಸ್ಯ ಚಟಾಕಿಗಳ ಮೂಲಕ ಬ್ಯಾಟರ್‌ಗಳನ್ನು ಕಿಚಾಯಿಸುತ್ತ, ಸಹಪಾಠಿಗಳನ್ನು ನಗಿಸುವುದು ಅವರ ಹವ್ಯಾಸ. 

ADVERTISEMENT

ಪಂದ್ಯದಲ್ಲಿ ಅವರು ಎಷ್ಟು ರನ್‌ ಗಳಿಸುತ್ತಾರೆ ಅಥವಾ ಎಷ್ಟು ಕ್ಯಾಚ್ ಪಡೆಯುತ್ತಾರೆ ಎಂಬುದಕ್ಕಿಂತಲೂ ಐದು ಅಥವಾ ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ತಂಡವನ್ನು ಸಂಕಷ್ಟದಿಂದ ಪಾರು ಮಾಡುವ ರೀತಿ ಅನನ್ಯ. ಆದರೆ ಸುಮಾರು ಮೂರು ತಿಂಗಳುಗಳಿಂದ ಅವರ ‘ಆಟ– ಹುಡುಗಾಟ’ವನ್ನು ನೋಡುವ ಅವಕಾಶ ಕ್ರಿಕೆಟ್‌ಪ್ರಿಯರಿಗೆ ಲಭಿಸಿರಲಿಲ್ಲ.  ಮ್ಯಾಂಚೆಸ್ಟರ್‌ನಲ್ಲಿ ಜುಲೈನಲ್ಲಿ ನಡೆದಿದ್ದ ಇಂಗ್ಲೆಂಡ್ ಎದುರಿನ ಟೆಸ್ಟ್‌ನಲ್ಲಿ ಬ್ಯಾಟಿಂಗ್‌ ಮಾಡುವಾಗ ಕಾಲಿಗೆ ಚೆಂಡು ಬಡಿದು ಗಾಯಗೊಂಡಿದ್ದ ಅವರು ಇದೀಗ ಚೇತರಿಸಿಕೊಂಡಿದ್ದಾರೆ. ಗಾಯದಿಂದಾಗಿ ಅವರಿಗೆ ಈಚೆಗೆ ನಡೆದಿದ್ದ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್ ಸರಣಿಯಲ್ಲಿ ಆಡಲು ಅವಕಾಶ ಲಭಿಸಿರಲಿಲ್ಲ. 

ನಗರದ ಹೊರವಲಯದಲ್ಲಿರುವ ಬಿಸಿಸಿಐ ಶ್ರೇಷ್ಠತಾ ಕೇಂದ್ರದ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ‘ಎ‘ ಎದುರಿನ ‘ಟೆಸ್ಟ್‌’ನಲ್ಲಿ  28 ವರ್ಷದ ಪಂತ್ ಭಾರತ ‘ಎ‘ ತಂಡದ ನಾಯಕರಾಗಿ ಕಣಕ್ಕಿಳಿಯಲಿದ್ದಾರೆ. 

ನವೆಂಬರ್ 14ರಿಂದ ದಕ್ಷಿಣ ಆಫ್ರಿಕಾ ತಂಡವು ಭಾರತದಲ್ಲಿ ಟೆಸ್ಟ್ ಸರಣಿ ಆಡಲಿದೆ.  ಆ ಸರಣಿಯಲ್ಲಿ ಆಡುವ ಭಾರತ ತಂಡಕ್ಕೆ ಮರಳಲು ರಿಷಭ್‌  ಅವರಿಗೆ ದಕ್ಷಿಣ ಆಫ್ರಿಕಾ ಎ ಎದುರಿನ ಎರಡು ಪಂದ್ಯಗಳು ಪೂರ್ವಾಭ್ಯಾಸದ ಕಣಗಳಾಗಿವೆ.  

ಈ ತಂಡಕ್ಕೆ ಉಪನಾಯಕರಾಗಿರುವ ಸಾಯಿ ಸುದರ್ಶನ್ ಅವರಿಗೂ ತಮ್ಮ ಬ್ಯಾಟಿಂಗ್‌ ಕೌಶಲಕ್ಕೆ ಸಾಣೆ ಹಿಡಿಯುವ ಅವಕಾಶ ಇದಾಗಿದೆ. ತಮಿಳುನಾಡಿನ 24 ವರ್ಷದ ಸಾಯಿ ಅವರು ಈಚೆಗೆ ದೆಹಲಿಯಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ಎದುರಿನ ಟೆಸ್ಟ್‌ನಲ್ಲಿ ಆಡಿದ್ದರು. ರಾಷ್ಟ್ರೀಯ ತಂಡದಲ್ಲಿ ಮೂರನೇ ಕ್ರಮಾಂಕದ ಸ್ಥಾನವನ್ನು ತುಂಬುವ ಭರವಸೆ ಮೂಡಿಸಿದ್ದಾರೆ. ಅವರಿಗೆ ಈ ಪಂದ್ಯದಲ್ಲಿ ಕನ್ನಡಿಗ, ಎಡಗೈ ಬ್ಯಾಟರ್ ದೇವದತ್ತ ಪಡಿಕ್ಕಲ್ ಹಾಗೂ ರಜತ್ ಪಾಟೀದಾರ್ ಅವರ ಪೈಪೋಟಿಯೂ ಇದೆ. 

ತಂಡದಲ್ಲಿ ಆಲ್‌ರೌಂಡರ್‌ಗಳಾದ ತನುಷ್ ಕೋಟ್ಯಾನ್, ಹರ್ಷ ದುಬೆ ಕೂಡ ಇದ್ದಾರೆ. ಇವರಲ್ಲದೇ ಆಯುಷ್ ಮ್ಹಾತ್ರೆ, ಎನ್. ಜಗದೀಶನ್ ಮತ್ತು ಆಯುಷ್ ಬಡೋಣಿ ಕೂಡ ಬಳಗದಲ್ಲಿದ್ದಾರೆ. ವೇಗದ ವಿಭಾಗದ ಹೊಣೆಯು ಖಲೀಲ್ ಅಹಮದ್, ಅನ್ಷುಲ್ ಕಂಬೋಜ್ ಅವರ ಮೇಲೆ ಬೀಳಲಿದೆ. ಸ್ಪಿನ್ನರ್ ಸಾರಾಂಶ್ ಜೈನ್ ಅವರು ಈಚೆಗೆ ಇದೇ ಮೈದಾನದಲ್ಲಿ ನಡೆದಿದ್ದ ದುಲೀಪ್ ಟ್ರೋಫಿ ಪಂದ್ಯದಲ್ಲಿ ಅಮೋಘವಾಗಿ ಬೌಲಿಂಗ್ ಮಾಡಿದ್ದರು. ಆದ್ದರಿಂದ ಅವರಿಗೂ 11ರ ಬಳಗದಲ್ಲಿ ಆಡುವ ಅವಕಾಶ ಸಿಗಬಹುದು. 

ಪ್ರವಾಸಿ ಬಳಗದಲ್ಲಿ ಖ್ಯಾತನಾಮ ಆಟಗಾರರು ಇಲ್ಲ. ಜುಬೇರ್ ಹಮ್ಜಾ ಅವರು ಲಯಕ್ಕೆ ಮರಳುವ ನಿರೀಕ್ಷೆಯಲ್ಲಿದ್ದಾರೆ. ತಂಡದಲ್ಲಿರುವ  ಯುವ ಆಟಗಾರರು ತಮ್ಮ ದೇಶದ ಕ್ರಿಕೆಟ್ ಮಂಡಳಿಯ ಆಯ್ಕೆಗಾರರ ಗಮನ ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಟೆಸ್ಟ್ ವಿಶ್ವಕಪ್ ವಿಜೇತ ನಾಯಕ ತೆಂಬಾ ಬವುಮಾ ಅವರು ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರು ನ.6ರಿಂದ ಶುರುವಾಗುವ ಎರಡನೇ ಪಂದ್ಯದಲ್ಲಿ ಆಡಲಿದ್ದಾರೆ. ಇದರಿಂದಾಗಿ ದಕ್ಷಿಣ ಆಫ್ರಿಕಾ ಎ ತಂಡಕ್ಕಿಂತಲೂ ಭಾರತ ಎ ತಂಡವೇ ಹೆಚ್ಚು ಬಲಾಢ್ಯವಾಗಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. 

ಪಂದ್ಯ ಆರಂಭ: ಬೆಳಿಗ್ಗೆ 9.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.