ಅಡಿಲೇಡ್: ಶುಭಮನ್ ಗಿಲ್ ನಾಯಕರಾದ ನಂತರ ಭಾರತ ತಂಡವು ಇದೇ ಮೊದಲ ಬಾರಿ ಆಸ್ಟ್ರೇಲಿಯಾದಲ್ಲಿ ಏಕದಿನ ಕ್ರಿಕೆಟ್ ಸರಣಿ ಆಡುತ್ತಿದೆ. ಆದರೆ ಈ ಸರಣಿಯ ಮೊದಲ ಪಂದ್ಯದಲ್ಲಿಯೇ ದಯನೀಯ ಸೋಲು ಅನುಭವಿಸಿದೆ.
ತಂಡದ ‘ಸೂಪರ್‌ಸ್ಟಾರ್’ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ವೈಫಲ್ಯವೂ ಮೊದಲ ಪಂದ್ಯದಲ್ಲಿ ಕಾಡಿತ್ತು. ಗುರುವಾರ ನಡೆಯಲಿರುವ ಎರಡನೇ ಪಂದ್ಯದಲ್ಲಿ ಈ ಇಬ್ಬರೂ ಆಟಗಾರರು ಲಯಕ್ಕೆ ಮರಳುವ ಜೊತೆಗೆ ತಂಡವು ಪಂದ್ಯವನ್ನೂ ಜಯಿಸಬೇಕಿದೆ. ಇಲ್ಲದಿದ್ದರೆ ಮೂರು ಪಂದ್ಯಗಳ ಸರಣಿ ಜಯದ ಕನಸು ಕೈಜಾರಬಹುದು.
ಪರ್ತ್‌ನಲ್ಲಿ ನಡೆದಿದ್ದ ಮೊದಲ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಆದರೆ ಸಿಕ್ಕ ಅವಕಾಶದಲ್ಲಿ ಭಾರತದ ಬ್ಯಾಟರ್‌ಗಳು ತಮ್ಮ ಸಾಮರ್ಥ್ಯ ಮೆರೆಯುವಲ್ಲಿ ವಿಫಲರಾಗಿದ್ದರು. 26 ಓವರ್‌ಗಳಲ್ಲಿ 136 ರನ್‌ಗಳನ್ನು ಮಾತ್ರ ಗಳಿಸಲು ತಂಡಕ್ಕೆ ಸಾಧ್ಯವಾಗಿತ್ತು.
ಈಗಾಗಲೇ ಟೆಸ್ಟ್ ಮತ್ತು ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿರುವ ರೋಹಿತ್ ಮತ್ತು ಕೊಹ್ಲಿ ಅವರು ಏಕದಿನ ಮಾದರಿಯಲ್ಲಿ ಮಾತ್ರ ಆಡುತ್ತಿದ್ದಾರೆ. ಇನ್ನೆರಡು ವರ್ಷಗಳ ನಂತರ ನಡೆಯಲಿರುವ ವಿಶ್ವಕಪ್ ಟೂರ್ನಿಯಲ್ಲಿ ಆಡುವ ಇರಾದೆ ಅವರದ್ದು. ಆದರೆ ಈ ಸರಣಿಯಲ್ಲಿ ಅವರು ತೋರುವ ಆಟವೇ ನಿರ್ಣಾಯಕವಾಗುವ ಸಾಧ್ಯತೆ ಇದೆ. ಪರ್ತ್ ಪಂದ್ಯದಲ್ಲಿ ರೋಹಿತ್ 8 ರನ್ ಗಳಿಸಿದರು. ಕೊಹ್ಲಿ ಖಾತೆಯನ್ನೇ ತೆರೆಯಲಿಲ್ಲ. ಅವರು ಮತ್ತೆ ಆಫ್‌ಸ್ಟಂಪ್ ಹೊರಗಿನ ಎಸೆತಕ್ಕೆ ವಿಕೆಟ್ ಒಪ್ಪಿಸಿದರು.
ನಾಯಕ ಶುಭಮನ್, ಶ್ರೇಯಸ್ ಅಯ್ಯರ್, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್ ಅವರು ಬ್ಯಾಟಿಂಗ್‌ನಲ್ಲಿ ಎಡವಿದರು. ಅಕ್ಷರ್ ಪಟೇಲ್ (31ರನ್) ಮತ್ತು ಕೆ.ಎಲ್. ರಾಹುಲ್ (38 ರನ್) ಒಂದಿಷ್ಟು ಹೊತ್ತು ಕ್ರೀಸ್‌ನಲ್ಲಿ ಇದ್ದರು. ಆಸ್ಟ್ರೇಲಿಯಾದ ಅನುಭವಿ ವೇಗಿಗಳಾದ ಮಿಚೆಲ್ ಸ್ಟಾರ್ಕ್, ಹೇಜಲ್‌ವುಡ್, ನೇಥನ್ ಎಲಿಸ್ ಅವರ ಬೌಲಿಂಗ್ ಮುಂದೆ ಪ್ರವಾಸಿ ಬ್ಯಾಟರ್‌ಗಳು ಪರದಾಡಿದ್ದರು.
ಭಾರತದ ಬೌಲಿಂಗ್ ವಿಭಾಗಕ್ಕೆ ಜಸ್‌ಪ್ರೀತ್ ಬೂಮ್ರಾ ಶಕ್ತಿ ಇಲ್ಲ. ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣಾ ಅವರೇ ವೇಗದ ವಿಭಾಗದ ನಿಭಾಯಿಸಬೇಕಿದೆ. ಈ ಪಂದ್ಯದಲ್ಲಿ ಪ್ರಸಿದ್ಧಕೃಷ್ಣ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.
ಆದರೆ; ಮಿಚೆಲ್ ಮಾರ್ಷ್, ಟ್ರಾವಿಸ್ ಹೆಡ್, ಮ್ಯಾಥ್ಯೂ ಶಾರ್ಟ್, ಜೋಶ್ ಫಿಲಿಪ್ ಅವರನ್ನು ಕಟ್ಟಿಹಾಕಲು ವಿಶೇಷ ತಂತ್ರಗಾರಿಕೆ ಹೆಣೆಯುವ ಸವಾಲು ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಗಿಲ್ ಅವರ ಮುಂದಿದೆ.
ಪಂದ್ಯ ಆರಂಭ: ಬೆಳಿಗ್ಗೆ 9
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.