ADVERTISEMENT

IND vs BAN | ಮೈದಾನದಲ್ಲಿ ಅಪರೂಪದ ಪ್ರಸಂಗ; ಬಾಂಗ್ಲಾದೇಶಕ್ಕೆ 5 ರನ್ ದಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2022, 10:31 IST
Last Updated 15 ಡಿಸೆಂಬರ್ 2022, 10:31 IST
   

ಚಿತ್ತಗಾಂಗ್:ಭಾರತ ವಿರುದ್ಧದ ಟೆಸ್ಟ್‌ ಪಂದ್ಯವ ವೇಳೆ ಮೈದಾನದಲ್ಲಿ ನಡೆದ ಅಪರೂಪದ ಪ್ರಸಂಗದಿಂದಾಗಿ ಬಾಂಗ್ಲಾದೇಶ ತಂಡಕ್ಕೆ 5 ರನ್‌ ದಂಡ ವಿಧಿಸಲಾಗಿದೆ.

ಭಾರತದ ಬ್ಯಾಟಿಂಗ್‌ ವೇಳೆ ಫೀಲ್ಡರ್‌ ಎಸೆದ ಚೆಂಡು,ವಿಕೆಟ್‌ಕೀಪರ್‌ ನೂರುಲ್‌ ಹಸನ್‌ ಅವರು ಇಟ್ಟಿದ್ದ ಹೆಲ್ಮೆಟ್‌ಗೆ ಬಡಿದಿತ್ತು. ಇದರಿಂದಾಗಿ ಆಟದ ನಿಯಮದಂತೆ ಬಾಂಗ್ಲಾ ಬಳಗಕ್ಕೆ ದಂಡ ಹಾಕಲಾಗಿದೆ.

ಇನಿಂಗ್ಸ್‌ನ 112ನೇ ಓವರ್‌ ವೇಳೆ ಈ ಘಟನೆ ನಡೆದಿದೆ. ಆರ್‌.ಅಶ್ವಿನ್‌ ಮತ್ತು ಕುಲದೀಪ್‌ ಯಾದವ್‌ ಈ ವೇಳೆ ಕ್ರೀಸ್‌ನಲ್ಲಿದ್ದರು.ತೈಜುಲ್‌ ಇಸ್ಲಾಂ ಎಸೆದ ಎರಡನೇ ಎಸೆತವನ್ನು ಅಶ್ವಿನ್‌ ರಕ್ಷಣಾತ್ಮಕವಾಗಿ ಆಡಿದರು. ಆದರೆ, ಬ್ಯಾಟ್‌ನ ಅಂಚಿಗೆ ತಾಗಿದ ಚೆಂಡು ಥರ್ಡ್‌ ಮ್ಯಾನ್‌ನತ್ತ ಸಾಗಿತು. ಸ್ಲಿಪ್‌ನಲ್ಲಿದ್ದ ಫೀಲ್ಡರ್‌ ಬೌಂಡರಿ ಕಡೆಗೆ ಸಾಗಿದ್ದ ಚೆಂಡನ್ನು ತಡೆದು ವಿಕೆಟ್‌ ಕೀಪರ್‌ಗೆ ಎಸೆದರು. ಆದರೆ, ಚೆಂಡು ಮೈದಾನದಲ್ಲಿದ್ದ ಹೆಲ್ಮೆಟ್‌ಗೆ ಬಡಿಯಿತು.

ADVERTISEMENT

ಇದರಿಂದಾಗಿ ಬಾಂಗ್ಲಾ ತಂಡಕ್ಕೆ ದಂಡ ವಿಧಿಸಿ,ಭಾರತದ ಖಾತೆಗೆ 5 ಹೆಚ್ಚುವರಿ ರನ್ ಸೇರಿಸಲಾಯಿತು.

ಸಂಕಷ್ಟದಲ್ಲಿ ಬಾಂಗ್ಲಾ
‌ಬುಧವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಅನುಭವಿ ಚೇತೇಶ್ವರ ಪೂಜಾರ (90), ಯುವ ಆಟಗಾರ ಶ್ರೇಯಸ್‌ ಅಯ್ಯರ್‌ (86), ಆಲ್ರೌಂಡರ್‌ ಆರ್.ಅಶ್ವಿನ್‌ (58) ಗಳಿಸಿದ ಅರ್ಧಶತಕ ಹಾಗೂ ಸ್ಪಿನ್ನರ್‌ ಕುಲದೀಪ್‌ ಯಾದವ್‌ (40) ಅವರ ಉಪಯಕ್ತ ಬ್ಯಾಟಿಂಗ್‌ ಬಲದಿಂದ ಮೊದಲ ಇನಿಂಗ್ಸ್‌ನಲ್ಲಿ 404 ರನ್ ಪೇರಿಸಿದೆ.

ಈ ಗುರಿ ಬೆನ್ನತ್ತಿರುವ ಬಾಂಗ್ಲಾ ಪಡೆ ಎಂಟುವಿಕೆಟ್‌ಗಳನ್ನು ಕಳೆದುಕೊಂಡಿದೆ. ಕುಲದೀಪ್‌ ಯಾದವ್‌ 4, ಮೊಹಮ್ಮದ್‌ ಸಿರಾಜ್‌ 3 ಹಾಗೂ ಉಮೇಶ್‌ ಯಾದವ್‌ ಒಂದು ವಿಕೆಟ್‌ ಪಡೆದಿದ್ದಾರೆ. ಸದ್ಯ ಆತಿಥೇಯ ತಂಡದ ಮೊತ್ತ 113 ರನ್ ಆಗಿದೆ. ಇನಿಂಗ್ಸ್‌ ಹಿನ್ನಡೆ ತಪ್ಪಿಸಿಕೊಳ್ಳಲು ಉಳಿದಿರುವ 2 ವಿಕೆಟ್‌ಗಳಿಂದ 291ರನ್ ಗಳಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.