ADVERTISEMENT

ಮಹಿಳಾ ಕ್ರಿಕೆಟ್‌: ಆಸ್ಟ್ರೇಲಿಯಾ ಜಯದ ಓಟಕ್ಕೆ ಭಾರತದ ತಡೆ

ಕೊನೆಯ ಏಕದಿನ ಪಂದ್ಯದಲ್ಲಿ ಮಿಥಾಲಿ ಪಡೆಗೆ ಗೆಲುವು

ಪಿಟಿಐ
Published 26 ಸೆಪ್ಟೆಂಬರ್ 2021, 12:23 IST
Last Updated 26 ಸೆಪ್ಟೆಂಬರ್ 2021, 12:23 IST
ಜೂಲನ್ ಗೋಸ್ವಾಮಿ– ಎಎಎಫ್‌ಪಿ ಸಂಗ್ರಹ ಚಿತ್ರ
ಜೂಲನ್ ಗೋಸ್ವಾಮಿ– ಎಎಎಫ್‌ಪಿ ಸಂಗ್ರಹ ಚಿತ್ರ   

ಮಕಾಯ್‌, ಆಸ್ಟ್ರೇಲಿಯಾ:ಯುವ ಬ್ಯಾಟರ್‌ಗಳಾದ ಯಾಸ್ತಿಕಾ ಭಾಟಿಯಾ (64) ಮತ್ತು ಶೆಫಾಲಿ ವರ್ಮಾ (56) ಅವರ ಅಮೋಘ ಅರ್ಧಶತಕಗಳು ಹಾಗೂ ಅನುಭವಿ ಜೂಲನ್ ಗೋಸ್ವಾಮಿ (37ಕ್ಕೆ3) ಅವರ ಬೌಲಿಂಗ್‌ ಭಾರತಕ್ಕೆ ಭಾನುವಾರ ಜಯ ತಂದುಕೊಟ್ಟವು.

ಆಸ್ಟ್ರೇಲಿಯಾ ಎದುರಿನ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಮಿಥಾಲಿ ರಾಜ್‌ ನಾಯಕತ್ವದ ಭಾರತ ಎರಡು ವಿಕೆಟ್‌ಗಳಿಂದ ಗೆದ್ದಿತು. ಇದರೊಂದಿಗೆ ಆತಿಥೇಯ ತಂಡದ 26 ಪಂದ್ಯಗಳ ಅಜೇಯ ಓಟಕ್ಕೆ ತಡೆಯೊಡ್ಡಿತು. ಆದರೆ ಮೊದಲೆರಡು ಪಂದ್ಯಗಳನ್ನು ತನ್ನದಾಗಿಸಿಕೊಂಡಿರುವ ಆಸ್ಟ್ರೇಲಿಯಾ ಸರಣಿಯನ್ನು 2–1ರಿಂದ ವಶಪಡಿಸಿಕೊಂಡಿದೆ.

ಭಾರತ 265 ರನ್‌ಗಳ ಗುರಿ ಬೆನ್ನಟ್ಟಿ ಗೆಲುವು ಸಾಧಿಸಿರುವುದು ಇದೇ ಮೊದಲ ಬಾರಿ.

ADVERTISEMENT

ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಆಸ್ಟ್ರೇಲಿಯಾ ನಿಗದಿತ ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗೆ 264 ರನ್‌ ಕಲೆಹಾಕಿತು. ಭಾರತದ ಮಹಿಳೆಯರು 8 ವಿಕೆಟ್‌ ಕಳೆದುಕೊಂಡು, ಕೊನೆಯ ಓವರ್‌ನಲ್ಲಿ ಜಯ ಸಾಧಿಸಿದರು.

ಸವಾಲಿನ ಗುರಿ ಬೆನ್ನತ್ತಿದ ಪ್ರವಾಸಿ ತಂಡಕ್ಕೆ ಮೊದಲ ವಿಕೆಟ್‌ ಜೊತೆಯಾಟದಲ್ಲಿ ಶೆಫಾಲಿ ಹಾಗೂ ಸ್ಮೃತಿ ಮಂದಾನ (22) ಅವರು 59 ರನ್‌ ಗಳಿಸಿಕೊಟ್ಟರು. ಮಂದಾನ ಔಟಾದ ಬಳಿಕ ಶೆಫಾಲಿ ಜೊತೆಗೂಡಿದ ಯಾಸ್ತಿಕಾ ಆಸ್ಟ್ರೇಲಿಯಾ ಬೌಲರ್‌ಗಳನ್ನು ದಂಡಿಸಿದರು.

ಏಕದಿನ ಮಾದರಿಯಲ್ಲಿ ಮೊದಲ ಅರ್ಧಶತಕ ಸಿಡಿಸಿದ 17 ವರ್ಷದ ಶೆಫಾಲಿ, ಯಾಸ್ತಿಕಾ ಜೊತೆಗೂಡಿ 101 ರನ್‌ ಪೇರಿಸಿದರು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ವಿಫಲರಾದರೂ ಆಲ್‌ರೌಂಡರ್‌ ದೀಪ್ತಿ ಶರ್ಮಾ (31) ಹಾಗೂ ಸ್ನೇಹ್‌ ರಾಣಾ (30) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಇತರೆ ರೂಪದಲ್ಲೇ 34 ರನ್‌ಗಳು (ವೈಡ್‌ 31) ಹರಿದುಬಂದಿದ್ದು ಭಾರತದ ಗೆಲುವಿಗೆ ಕಾಣಿಕೆಯಾಯಿತು.

ಆಸ್ಟ್ರೇಲಿಯಾ ಪರ ಆ್ಯಶ್ಲೆ ಗಾರ್ಡನರ್‌ (64), ಬೆಥ್ ಮೂನಿ (52) ಮತ್ತು ತಾಹಿಲಾ ಮೆಕ್‌ಗ್ರಾ (47) ಉತ್ತಮ ಬ್ಯಾಟಿಂಗ್ ಮಾಡಿದರು. ಭಾರತದ ಬೌಲಿಂಗ್‌ ಜೂಲನ್ ಅಲ್ಲದೆ ಪೂಜಾ ವಸ್ತ್ರಕಾರ್ (46ಕ್ಕೆ 3) ಕೂಡ ಮಿಂಚಿದರು.

ಸಂಕ್ಷಿಪ್ತ ಸ್ಕೋರು:

ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 9ಕ್ಕೆ 264 (ಆ್ಯಶ್ಲೆ ಗಾರ್ಡನರ್‌ 64,ಬೆಥ್ ಮೂನಿ 52, ತಾಹಿಲಾ ಮೆಕ್‌ಗ್ರಾ 47, ಅಲಿಸಾ ಹೀಲಿ 35; ಜೂಲನ್ ಗೋಸ್ವಾಮಿ 37ಕ್ಕೆ 3, ಪೂಜಾ ವಸ್ತ್ರಕಾರ್‌ 46ಕ್ಕೆ 3, ಸ್ನೇಹ ರಾಣಾ 56ಕ್ಕೆ 1)

ಭಾರತ: 49.3 ಓವರ್‌ಗಳಲ್ಲಿ 8ಕ್ಕೆ 266 (ಯಾಸ್ತಿಕಾ ಭಾಟಿಯಾ 64, ಶೆಫಾಲಿ ವರ್ಮಾ 56, ದೀಪ್ತಿ ಶರ್ಮಾ 31, ಸ್ನೇಹ್ ರಾಣಾ 30; ಅನ್ನಾಬೆಲ್‌ ಸುದರ್ಲೆಂಡ್‌ 30ಕ್ಕೆ 3, ಆ್ಯಶ್ಲೆ ಗಾರ್ಡನರ್‌ 30ಕ್ಕೆ 1, ಸ್ಟೆಲ್ಲಾ ಕ್ಯಾಂಪ್‌ಬೆಲ್‌ 41ಕ್ಕೆ 1). ಫಲಿತಾಂಶ: ಭಾರತಕ್ಕೆ ಎರಡು ವಿಕೆಟ್‌ಗಳ ಜಯ, ಆಸ್ಟ್ರೇಲಿಯಾಕ್ಕೆ 2–1ರಿಂದ ಸರಣಿ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.