ADVERTISEMENT

ಟಿ20 ಕ್ರಿಕೆಟ್‌: ರಾಹುಲ್‌ ಆಟಕ್ಕೆ ಇಂಗ್ಲೆಂಡ್‌ ಮೌನ

T20, Team india

ಏಜೆನ್ಸೀಸ್
Published 4 ಜುಲೈ 2018, 3:47 IST
Last Updated 4 ಜುಲೈ 2018, 3:47 IST
ಶತಕ ಗಳಿಸಿದ ಕರ್ನಾಟಕದ ಕೆ.ಎಲ್‌.ರಾಹುಲ್‌
ಶತಕ ಗಳಿಸಿದ ಕರ್ನಾಟಕದ ಕೆ.ಎಲ್‌.ರಾಹುಲ್‌   

ಮ್ಯಾಂಚೆಸ್ಟರ್‌: ಕೇವಲ 54 ಎಸೆತಗಳಲ್ಲಿ ಆಕರ್ಷಕ ಶತಕ ಸಿಡಿಸಿದ ಕರ್ನಾಟಕದ ಕೆ.ಎಲ್‌.ರಾಹುಲ್‌, ಇಂಗ್ಲೆಂಡ್‌ ವಿರುದ್ಧದ ಮೊದಲ ಟ್ವೆಂಟಿ–20 ಪಂದ್ಯದಲ್ಲಿ ಭಾರತದ ಭರ್ಜರಿ ಗೆಲುವಿಗೆ ಕಾರಣರಾದರು.

ಮಂಗಳವಾರ ಬ್ಯಾಟ್ಸ್‌ಮನ್‌ಗಳ ಪಾಲಿನ ‘ಸ್ವರ್ಗ’ ಎನಿಸಿರುವ ಓಲ್ಡ್‌ ಟ್ರಾಫರ್‌ ಅಂಗಳದಲ್ಲಿ ನಡೆದ ಪಂದ್ಯದಲ್ಲಿ 10 ಎಸೆತಗಳು ಬಾಕಿ ಇರುವಂತೆಯೇ ಭಾರತ ಎಂಟು ವಿಕೆಟ್‌ಗಳ ಜಯ ಸಾಧಿಸಿ ಶುಭಾರಂಭ ಮಾಡಿತು. ಐದು ಸಿಕ್ಸರ್‌ ಮತ್ತು 10 ಬೌಂಡರಿಯೊಂದಿಗೆ ರಾಹುಲ್‌ ಇಂಗ್ಲೆಂಡ್‌ ಬೌಲರ್‌ಗಳನ್ನು ಕೊನೆಯವರೆಗೂ ಕಾಡಿದರು.

ಮೊದಲು ಬ್ಯಾಟಿಂಗ್‌ ಮಾಡಿದ ಇಂಗ್ಲೆಂಡ್‌ ತಂಡದ ರನ್‌ ಹೊಳೆಗೆ ಎಡಗೈ ಸ್ಪಿನ್ನರ್‌ ಕುಲದೀಪ್‌ ಯಾದವ್‌ ತಡೆ ಗೋಡೆಯಾದರು. ಒಂದೇ ಓವರ್‌ನಲ್ಲಿ 3 ವಿಕೆಟ್‌ ಉರುಳಿಸುವ ಜತೆಗೆ ಒಟ್ಟು 5 ವಿಕೆಟ್‌ಗಳನ್ನು ಪಡೆದರು. ಇದರಿಂದಾಗಿ ಇಂಗ್ಲೆಂಡ್‌ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 159 ರನ್‌ ಗಳಿಸಲಷ್ಟೇ ಶಕ್ತವಾಯಿತು.

ADVERTISEMENT

ಕುಲದೀಪ್‌ ಯಾದವ್‌ 24 ರನ್‌ ನೀಡಿ 5 ವಿಕೆಟ್‌ ಗಳಿಸಿದರು. ದಿಟ್ಟ ಆಟ ಪ್ರದರ್ಶಿಸಿದ ಇಂಗ್ಲೆಂಡ್‌ನ ಜಾಸ್ ಬಟ್ಲರ್‌, 46 ಎಸೆತಗಳಲ್ಲಿ 69 ರನ್‌ ಪೇರಿಸಿದರು.

160 ರನ್‌ಗಳ ಗುರಿ ಬೆನ್ನುಹತ್ತಿದ ಭಾರತ, ಪ್ರಾರಂಭದಲ್ಲಿಯೇ ಶಿಖರ್‌ ಧವನ್‌ ವಿಕೆಟ್‌ ಕಳೆದುಕೊಂಡಿತು.ರಾಹುಲ್‌ ಮತ್ತು ರೋಹಿತ್ ಶರ್ಮಾ ಎರಡನೇ ವಿಕೆಟ್‌ ಜತೆಯಾಟದಲ್ಲಿ 123 ರನ್‌ ಗಳಿಸಿದರು. ಈ ಮೂಲಕ ಭಾರತ ಸುಲಭ ಗೆಲುವು ಪಡೆಯಿತು.

ಮೂರು ಪಂದ್ಯಗಳ ಸಿರೀಸ್‌ನಲ್ಲಿ ಭಾರತ 1–0 ಮುನ್ನಡೆ ಸಾಧಿಸಿದೆ. ಶುಕ್ರವಾರ ಕಾರ್ಡಿಫ್‌ನಲ್ಲಿ ಎರಡನೇ ಪಂದ್ಯ ನಡೆಯಲಿದೆ.

* ತಂಡದ ಉತ್ತಮ ರನ್‌ ಕಲೆಹಾಕಲು ರಾಹುಲ್‌ನಂತಹ ಆಟಗಾರರ ಅಗತ್ಯವಿದೆ. ಆತನ ರನ್‌ ಹಸಿವು ಭಾರತೀಯ ಕ್ರಿಕೆಟ್‌ಗೆ ಮಹತ್ತರದ್ದಾಗಿದೆ. ಕುಲದೀಪ್‌ ಯಾದವ್‌ ಯಾವುದೇ ಪಿಚ್‌ನಲ್ಲೂ ಪರಿಣಾಮಕಾರಿಯಾಗಬಲ್ಲರು. ಸ್ಪಿನ್‌ಗೆ ಪಿಚ್‌ ಸಹಕಾರಿಯಾದರಂತೂ ಅವರು ಅಸಾಧ್ಯವೆನಿಸುತ್ತಾರೆ.

– ವಿರಾಟ್‌ ಕೊಹ್ಲಿ, ನಾಯಕ

ಸ್ಕೋರ್‌:

ಇಂಗ್ಲೆಂಡ್‌: 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 159

ಜೆಸಿ ಬಟ್ಲರ್ – 69 ರನ್‌ (46 ಎಸೆತ; 8 ಬೌಂಡರಿ, 2 ಸಿಕ್ಸರ್‌)

ಜೆಜೆ ರಾಯ್‌– 30 ರನ್‌

ಡಿಕೆ ವಿಲ್ಲೆ– 29 ರನ್‌

ಭಾರತ: 18.2 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 163

ಕೆ.ಎಲ್‌.ರಾಹುಲ್‌–101* ರನ್‌ (54 ಎಸೆತ; 5 ಸಿಕ್ಸರ್‌, 10 ಬೌಂಡರಿ)

ರೋಹಿತ್‌ ಶರ್ಮಾ– 32 ರನ್‌

ಶಿಖರ್‌ ಧವನ್‌– 4 ರನ್‌

ವಿರಾಟ್‌ ಕೊಹ್ಲಿ– 20* ರನ್‌

ಬೌಲಿಂಗ್‌:

ಕುಲ್‌ದೀಪ್‌ ಯಾದವ್‌– 5/24

ಉಮೇಶ್‌ ಯಾದವ್‌– 2/21

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.