ADVERTISEMENT

ಕಿವೀಸ್ ವಿರುದ್ಧದ ಟಿ20 ಸರಣಿ ಕ್ಲೀನ್‌ಸ್ವೀಪ್ ಮಾಡಿದ ಭಾರತ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2021, 18:00 IST
Last Updated 21 ನವೆಂಬರ್ 2021, 18:00 IST
ಟೀಮ್ ಇಂಡಿಯಾ
ಟೀಮ್ ಇಂಡಿಯಾ   

ಕೋಲ್ಕತ್ತ : ಈಡನ್ ಗಾರ್ಡನ್‌ನಲ್ಲಿ ಭಾನುವಾರ ರಾತ್ರಿ ಸೇರಿದ್ದ ಕ್ರಿಕೆಟ್‌ಪ್ರಿಯರನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ನಿರಾಶೆಗೊಳಿಸಲಿಲ್ಲ.

‘ಹಿಟ್‌ಮ್ಯಾನ್‌’ ಖ್ಯಾತಿಗೆ ತಕ್ಕಂತೆ ಬ್ಯಾಟ್‌ ಬೀಸಿದ ರೋಹಿತ್‌(56; 31ಎಸೆತ, 5ಬೌಂಡರಿ, 3ಸಿಕ್ಸರ್) ಮುಂದೆ ಕಿವೀಸ್ ಬೌಲರ್‌ಗಳು ಬಸವಳಿದರು. ನ್ಯೂಜಿಲೆಂಡ್ ಎದುರಿನ ಮೂರನೇ ಟಿ20 ಪಂದ್ಯದಲ್ಲಿ 73 ರನ್‌ಗಳಿಂದ ಗೆದ್ದಿತು. ಆತಿಥೇಯ ತಂಡವು ಸರಣಿಯಲ್ಲಿ 3–0ಯಿಂದ ಕ್ಲೀನ್‌ಸ್ವೀಪ್ ಮಾಡಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡಕ್ಕೆ ರೋಹಿತ್ ಮತ್ತು ಇಶಾನ್ ಕಿಶನ್ (29; 21ಎ, 6ಬೌಂಡರಿ) ಅವರ ಅಬ್ಬರದ ಆಟ ರಂಗೇರಿತು. ಇದರಿಂದಾಗಿ ಭಾರತ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 184 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಕಿವೀಸ್ ತಂಡವು 17.2 ಓವರ್‌ಗಳಲ್ಲಿ 111 ರನ್‌ ಗಳಿಸಿ ಆಲೌಟ್ ಆಯಿತು. ಅಕ್ಷರ್ ಪಟೇಲ್ (9ಕ್ಕೆ3) ಸ್ಪಿನ್ ಮೋಡಿಗೆ ಶರಣಾಯಿತು. ಮಾರ್ಟಿನ್ ಗಪ್ಟಿಲ್ (51 ರನ್) ಅರ್ಧಶತಕ ವ್ಯರ್ಥವಾಯಿತು.

ADVERTISEMENT

ನಾಯಕತ್ವದ ಚೊಚ್ಚಲ ಸರಣಿಯಲ್ಲಿ ಸಾಧನೆ: ಟಿ20 ತಂಡದ ನಾಯಕತ್ವ ವಹಿಸಿಕೊಂಡ ಮೊದಲ ಸರಣಿಯಲ್ಲಿಯೇ ರೋಹಿತ್ ಬ್ಯಾಟಿಂಗ್ ಮತ್ತು ತಂತ್ರಗಾರಿಕೆಯಲ್ಲಿ ಮೇಲುಗೈ ಸಾಧಿಸಿದರು. ಬೌಂಡರಿಯೊಂದಿಗೆ ಖಾತೆ ತೆರೆದ ರೋಹಿತ್ ಅವರ ಆಟದ ಅಬ್ಬರ ಮೇರೆ ಮೀರಿತು. ಇದರಿಂದಾಗಿ ಮೊದಲ ಆರು ಓವರ್‌ಗಳಲ್ಲಿಯೇ ತಂಡವು 69 ರನ್ ಗಳಿಸಿತು.

ಆದರೆ ಏಳನೇ ಓವರ್‌ನಲ್ಲಿ ಸ್ಪಿನ್ನರ್‌ ಮಿಚೆಲ್ ಸ್ಯಾಂಟನರ್ ಭಾರತದ ಜೋಡಿಯ ಭರಾಟೆಗೆ ಕಡಿವಾಣ ಹಾಕಿದರು. ಎರಡನೇ ಎಸೆತದಲ್ಲಿ ಇಶಾನ್ ಕಿಶನ್ ವಿಕೆಟ್ ಪಡೆದ ಅವರು ಜೊತೆಯಾಟ ಮುರಿದರು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ವಿಕೆಟ್ ಕೂಡ ಕಬಳಿಸಿದರು. ತಮ್ಮ ಇನ್ನೊಂದು ಓವರ್‌ನಲ್ಲಿ ಸ್ಯಾಂಟನರ್ ಅವರು ರಿಷಭ್ ಪಂತ್ (4 ರನ್) ವಿಕೆಟ್ ಕೂಡ ಗಳಿಸಿದರು. ಈ ಹಂತದಲ್ಲಿ ರೋಹಿತ್ ತಮ್ಮ ಆಟ ಮುಂದುವರಿಸಿದ್ದರು. ಅರ್ಧಶತಕ ಪೂರೈಸಿದರು. ಅವರು ಇನ್ನಷ್ಟು ಪ್ರಹಾರ ನಡೆಸುವ ಸಿದ್ಧತೆಯಲ್ಲಿದ್ದಾಗಲೇ ಸ್ಪಿನ್ನರ್ ಈಶ ಸೋಧಿ ಎಸೆತದಲ್ಲಿ ಅವರಿಗೇ ಕ್ಯಾಚ್ ಕೊಟ್ಟು ಔಟಾದರು.

ಕ್ರೀಸ್‌ನಲ್ಲಿ ಜೊತೆಗೂಡಿದ ಶ್ರೇಯಸ್ ಅಯ್ಯರ್ (25,20ಎ) ಮತ್ತು ವೆಂಕಟೇಶ್ ಅಯ್ಯರ್ (20; 15ಎ) ಮೊತ್ತವನ್ನು ಹಿಗ್ಗಿಸುವ ಪ್ರಯತ್ನ ಮಾಡಿದರು. ಆದರೆ ಇನಿಂಗ್ಸ್‌ನಲ್ಲಿ ಇನ್ನೂ ನಾಲ್ಕು ಓವರ್‌ಗಳು ಬಾಕಿ ಇದ್ದಾಗಲೇ ಇಬ್ಬರೂ ಔಟಾದರು.

ದೀಪಕ್ – ಹರ್ಷಲ್ ಮಿಂಚು: ಇನಿಂಗ್ಸ್‌ನ ಕೊನೆಯ ಹಂತದಲ್ಲಿ ಹರ್ಷಲ್ ಪಟೇಲ್ ಮತ್ತು ದೀಪಕ್ ಚಾಹರ್ ಕೂಡ ತಮ್ಮ ಬ್ಯಾಟಿಂಗ್ ಪ್ರತಿಭೆಯನ್ನು ಅನಾವರಣಗೊಳಿಸಿದರು. ಹರ್ಷಲ್ ಹಿಟ್‌ವಿಕೆಟ್ ಆಗುವ ಮುನ್ನ 11 ಎಸೆತಗಳಲ್ಲಿ 18 ರನ್ ಗಳಿಸಿದರು. ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿದರು. ಅವರಿಗೆ ಪೈಪೋಟಿಯೆಂಬಂತೆ ದೀಪಕ್ ಚಾಹರ್ (ಔಟಾಗದೇ 21, 8ಎಸೆತ) ಕೂಡ ಬ್ಯಾಟ್ ಬೀಸಿದರು. ಅವರು ಕೂಡ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಹೊಡೆದರು.

ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.