ADVERTISEMENT

IND vs WI: ರೋಹಿತ್–ಇಶಾನ್ ಕಿಶನ್ ಅಬ್ಬರ; ಭಾರತಕ್ಕೆ ಭರ್ಜರಿ ಗೆಲುವು

ವೆಸ್ಟ್ ಇಂಡೀಸ್‌ ಎದುರಿನ ಟ್ವೆಂಟಿ20 ಸರಣಿ: ಮುಂಬೈ ಜೋಡಿ ರೋಹಿತ್–ಇಶಾನ್ ಕಿಶನ್ ಅಬ್ಬರ

ಏಜೆನ್ಸೀಸ್
Published 16 ಫೆಬ್ರುವರಿ 2022, 18:07 IST
Last Updated 16 ಫೆಬ್ರುವರಿ 2022, 18:07 IST
ನಿಕೋಲಸ್ ಪೂರನ್ ಅವರ ಬ್ಯಾಟಿಂಗ್ ಸೊಗಸು –ಪಿಟಿಐ ಚಿತ್ರ
ನಿಕೋಲಸ್ ಪೂರನ್ ಅವರ ಬ್ಯಾಟಿಂಗ್ ಸೊಗಸು –ಪಿಟಿಐ ಚಿತ್ರ   

ಕೋಲ್ಕತ್ತ: ಮುಂಬೈ ಜೋಡಿ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಅವರ ಅಬ್ಬರದ ನಂತರ ಕೆಲಕಾಲ ಎದುರಾಳಿ ಬೌಲರ್‌ಗಳು ಆತಂಕ ಸೃಷ್ಟಿಸಿದರು. ಆದರೆ ಮುಂಬೈನ ಸೂರ್ಯಕುಮಾರ್ ಯಾದವ್ ಮತ್ತು ತಮಿಳುನಾಡಿನ ವೆಂಕಟೇಶ್ ಅಯ್ಯರ್ ಅವರ ಸಮಯೋಚಿತ ಆಟದಿಂದ ಭಾರತ ತಂಡ ಅಮೋಘ ಜಯ ಸಾಧಿಸಿತು.

ಈಡನ್ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ಬುಧವಾರ ನಡೆದ ವೆಸ್ಟ್ ಇಂಡೀಸ್ ಎದುರಿನ ಟ್ವೆಂಟಿ20 ಸರಣಿಯ ಮೊದಲ ಪಂದ್ಯದಲ್ಲಿ ಇನ್ನೂ ಏಳು ಎಸೆತಗಳು ಬಾಕಿ ಇರುವಾಗ ಭಾರತ ಆರು ವಿಕೆಟ್‌ಗಳ ಗೆಲುವು ದಾಖಲಿಸಿತು.

158 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಮತ್ತು ವಿಕೆಟ್ ಕೀಪರ್ ಇಶಾನ್ ಕಿಶನ್ ಉತ್ತಮ ಆರಂಭ ಒದಗಿಸಿದರು. ಇಬ್ಬರೂ 64 ರನ್‌ಗಳ ಜೊತೆಯಾಟ ಆಡಿದರು. ರೋಹಿತ್ ಔಟಾದ ನಂತರ ಇಶಾನ್ ಮತ್ತು ವಿರಾಟ್ ಕೊಹ್ಲಿ ಕೂಡ ಉತ್ತಮ ಆಟ ಆಡಿದರು. ಆದರೆ 21 ರನ್‌ಗಳ ಅಂತದಲ್ಲಿ ಇಶಾನ್‌, ಕೊಹ್ಲಿ ಮತ್ತು ರಿಷಭ್ ಪಂಥ್ ಔಟಾದಾಗ ಆತಂಕ ಮೂಡಿತು.

ADVERTISEMENT

ಈ ಸಂದರ್ಭದಲ್ಲಿ ಮೇಲುಗೈ ಸಾಧಿಲು ವೆಸ್ಟ್ ಇಂಡೀಸ್ ಪ್ರಯತ್ನಿಸಿತು. ಆದರೆ 48 ರನ್‌ಗಳ ಜೊತೆಯಾಟವಾಡಿ ಸೂರ್ಯಕುಮಾರ್ ಮತ್ತು ವೆಂಕಟೇಶ್‌ ಅಯ್ಯರ್ ತಂಡವನ್ನು ದಡ ಸೇರಿಸಿದರು.

ಕೈ ಹಿಡಿದ ನಿಕೋಲಸ್ ಮಿಂಚಿನ ಆಟ

ಟಾಸ್ ಗೆದ್ದ ಭಾರತ ಪ್ರವಾಸಿ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ವೇಗಿ ಭುವನೇಶ್ವರ್ ಕುಮಾರ್ ಮತ್ತು ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಆರಂಭದಲ್ಲಿ ಪೆಟ್ಟುಕೊಟ್ಟರು. ಚೊಚ್ಚಲ ಟಿ20 ಅಂತರರಾಷ್ಟ್ರೀಯ ಪಂದ್ಯ ಆಡಿದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಎರಡು ವಿಕೆಟ್ ತಂಡವನ್ನು ಕಾಡಿದರು.

ವಿಕೆಟ್‌ಗಳು ಪತನಗೊಳ್ಳುತ್ತಿದ್ದರೂ ಪೂರನ್ ರನ್ ಕಲೆ ಹಾಕುತ್ತ ಸಾಗಿದರು. ಅರನೇ ವಿಕೆಟ್‌ಗೆ ನಾಯಕ ಕೀರನ್ ಪೊಲಾರ್ಡ್ ಜೊತೆ 45 ರನ್ ಸೇರಿಸಿದ ಅವರು ತಂಡ ಗೌರವಾರ್ಹ ಮೊತ್ತ ಗಳಿಸಲು ನೆರವಾದರು.

ಮೊದಲ ಓವರ್‌ನ ಐದನೇ ಎಸೆತದಲ್ಲಿ ಆರಂಭಿಕ ಬ್ಯಾಟರ್ ಬ್ರೆಂಡನ್ ಕಿಂಗ್ ವಿಕೆಟ್ ಕಬಳಿಸಿ ಭುವನೇಶ್ವರ್ ಮೊದಲು ಮೊದಲ ಪೆಟ್ಟು ನೀಡಿದರು. ನಂತರ ಕೈಲ್ ಮೇಯರ್ಸ್ ಮತ್ತು ಪೂರನ್ 43 ರನ್‌ಗಳನ್ನು ಸೇರಿಸಿದರು. ಈ ಜೊತೆಯಾಟವನ್ನು ಚಾಹಲ್ ಮುರಿದರು. ರಾಸ್ಟನ್ ಚೇಸ್ ವಿಕೆಟ್ ಗಳಿಸುವ ಮೂಲಕ 21 ವರ್ಷದ ಬಿಷ್ಣೋಯ್ ಚೊಚ್ಚಲ ವಿಕೆಟ್ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.