ADVERTISEMENT

IND vs ENG | ಕುತೂಹಲದ ಘಟ್ಟದಲ್ಲಿ ಲಾರ್ಡ್ಸ್‌ ಟೆಸ್ಟ್‌

ನಾಲ್ಕನೇ ದಿನ 193 ರನ್ ಗುರಿ ಎದುರಿಸಿದ ಭಾರತಕ್ಕೆ ಆರಂಭಿಕ ಆಘಾತ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 0:30 IST
Last Updated 14 ಜುಲೈ 2025, 0:30 IST
<div class="paragraphs"><p>ನಾಲ್ಕು ವಿಕೆಟ್‌ ಪಡೆದ ವಾಷಿಂಗ್ಟನ್‌ ಸುಂದರ್ (ಮಧ್ಯ) ಅವರನ್ನು ಭಾರತ ತಂಡದ ಸಹ ಆಟಗಾರರು ಅಭಿನಂದಿಸಿದರು &nbsp;</p></div>

ನಾಲ್ಕು ವಿಕೆಟ್‌ ಪಡೆದ ವಾಷಿಂಗ್ಟನ್‌ ಸುಂದರ್ (ಮಧ್ಯ) ಅವರನ್ನು ಭಾರತ ತಂಡದ ಸಹ ಆಟಗಾರರು ಅಭಿನಂದಿಸಿದರು  

   

ಪಿಟಿಐ ಚಿತ್ರ

ಲಂಡನ್‌: ಶನಿವಾರ ಸಂಜೆಯೇ ಹೊತ್ತಿಸಿದ್ದ ಕಿಡಿ ಭಾನುವಾರ ಪ್ರಖರ ರೂಪ ತಳೆಯಿತು. ಯುವ ಉತ್ಸಾಹಿ ಭಾರತ ತಂಡ ಲಾರ್ಡ್ಸ್‌ ಟೆಸ್ಟ್‌ನಲ್ಲಿ  ಅಕ್ರಮಣಕಾರಿಯಾಗಿ ಆಡಿ ದಿನದ ಎರಡು ಅವಧಿಗಳಲ್ಲಿ ಇಂಗ್ಲೆಂಡ್‌ ತಂಡದ ಒತ್ತಡ ಹೇರಿತು. ಆದರೆ ಕೊನೆಯ ಒಂದು ಗಂಟೆಯ ಆಟದಲ್ಲಿ ಇಂಗ್ಲೆಂಡ್‌ ಕೂಡ ಎದಿರೇಟು ನೀಡಿದೆ. ಮೂರನೇ ಟೆಸ್ಟ್‌ ಪಂದ್ಯ ಈಗ ರೋಚಕ ಸ್ಥಿತಿಗೆ ತಲುಪಿದೆ.

ADVERTISEMENT

ಭಾರತ ತಂಡಕ್ಕೆ ಮೂರನೇ ದಿನವಾದ ಶನಿವಾರ ಆರು ನಿಮಿಷ ಬೌಲಿಂಗ್ ಮಾಡುವ ಅವಕಾಶ ದೊರಕಿತ್ತು. ಆದರೆ ಆಗಲೇ ನಾಟಕೀಯ ಬೆಳವಣಿಗೆ ನಡೆಯಿತು. ಇಂಗ್ಲೆಂಡ್ ಆರಂಭ ಆಟಗಾರ ಜಾಕ್‌ ಕ್ರಾಲಿ ಕಾಲಹರಣ ತಂತ್ರಕ್ಕೆ ಮುಂದಾದರು. ಭಾರತ ಇನ್ನೊಂದು ಓವರ್ ಮಾಡುವುದನ್ನು ತಡೆಯುವ ಉದ್ದೇಶ ಅದರ ಹಿಂದಿತ್ತು. ನಾಯಕ ಶುಭಮನ್ ಗಿಲ್ ‘ಬಹಿರಂಗ’ವಾಗಿಯೇ ಅಸಮಾಧಾನ ಪ್ರದರ್ಶಿಸಿದರು. ಡಕೆಟ್‌ ಮಧ್ಯಪ್ರವೇಶಿಸಿದರು. ಭಾರತದ ಆಟಗಾರರೂ ಒಗ್ಗಟ್ಟಾದಾಗ ಅಂಪೈರ್‌ಗಳು ಕಾವೇರುತ್ತಿದ್ದ ಪರಿಸ್ಥಿತಿ ತಿಳಿಗೊಳಿಸಿದರು. ಹೀಗಾಗಿ ‘ಕ್ರಿಕೆಟ್‌ನ ತವರು’ ಲಾರ್ಡ್ಸ್‌ನಲ್ಲಿ ‘ಸೂಪರ್‌ ಸಂಡೇ’ ನಿರೀಕ್ಷಿಸಲಾಗಿತ್ತು. ಅದಕ್ಕೆ ತಕ್ಕಂತೆ ಪ್ರೇಕ್ಷಕರೂ ಕಿಕ್ಕಿರಿದಿದ್ದು ಅವರಿಗೆ ‘ಕಾಸಿಗೆ ತಕ್ಕ ಕಜ್ಜಾಯ’ ದೊರೆಯಿತು.

ಶನಿವಾರ ಸಂಜೆಯ ‘ಆಕ್ರಮಣ’ವನ್ನು ಭಾರತ ಭಾನುವಾರವೂ ಮುಂದುವರಿಸಿತು. ಅಮೋಘ ಬೌಲಿಂಗ್‌ ಜೊತೆ ಆಕ್ರಮಣದ ಮನೋಭಾವವನ್ನೂ ಪ್ರದರ್ಶಿಸಿದ್ದು ಬೌಲರ್‌ಗಳ ಮುಖಗಳಲ್ಲಿ ವ್ಯಕ್ತವಾಗುತಿತ್ತು. ಬೂಮ್ರಾ ಬೆಂಕಿಯುಂಡೆಗಳನ್ನು ಎಸೆದರು. ಅವರ ದಾಳಿಯಿಂದ ಕ್ರಾಲಿ ತಡಕಾಡಿದರು. 2–3 ಸಲ ಚೆಂಡು ಅವರ ಗ್ಲೋವ್ಸ್‌ಗೆ ಬಡಿಯಿತು. ಮೊಹಮ್ಮದ್‌ ಸಿರಾಜ್ (31ಕ್ಕೆ2) ತಾವೇನೂ ಕಡಿಮೆಯಿಲ್ಲ ಎನ್ನುವಂತೆ ಕಾವೇರಿಸಿದರು. ಇನ್ನೊಬ್ಬ ವೇಗಿ  ನಿತೀಶ್‌ ಕುಮಾರ್ ಅವರೂ ಸೇರಿಕೊಂಡರು. ಇಂಗ್ಲೆಂಡ್‌ ಇದರಿಂದ ಚೇತರಿಸಿಕೊಳ್ಳುವ ಸೂಚನೆ ತೋರುತ್ತಿದ್ದಂತೆ ಸ್ಪಿನ್ನರ್ ವಾಷಿಂಗ್ಟನ್‌ ಸುಂದರ್ (22ಕ್ಕೆ4) ಅವರೂ ಅಮೋಘ ಸ್ಪೆಲ್‌ ಮೂಲಕ ಹೊಡೆತ ನೀಡಿದರು. ಟೆಸ್ಟ್‌ ಕ್ರಿಕೆಟ್‌ ರೋಚಕತೆಗೆ ಈ ಪಂದ್ಯ ಕನ್ನಡಿಯಾಯಿತು.

ಭಾರತ ತಂಡದ ಆಕ್ರಮಣದ ಸೂಚನೆಯರಿತ ಆತಿಥೇಯರು ಹೋರಾಟಕ್ಕೆ ಅಣಿಯಾಯಿತು. ಆದರೆ ಭಾರತ ನಿಯಮಿತವಾಗಿ ನೀಡಿದ ಹೊಡೆತಗಳನ್ನು ಸುಧಾರಿಸಿಕೊಳ್ಳಲು ಆತಿಥೇಯರು ತಡಕಾಡಿದರು. ಲಂಚ್‌ ವೇಳೆಗೆ ತಂಡ 98 ರನ್‌ಗಳಾಗುವಷ್ಟರಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ನಾಯಕ ಬೆನ್‌ ಸ್ಟೋಕ್ಸ್ (33) ಮತ್ತು ಜೋ ರೂಟ್‌ (40) ಅವರು ಪ್ರತಿಹೋರಾಟಕ್ಕೆ ಯತ್ನಿಸಿದರು. ಆದರೆ ಚಹಾ ವಿರಾಮ ಕಳೆದು 10 ಓವರುಗಳ ನಂತರ ಇಂಗ್ಲೆಂಡ್‌ 192 ರನ್‌ಗಳಿಗೆ ಆಲೌಟ್‌ ಆಯಿತು.

ಆದರೆ ಇಂಗ್ಲೆಂಡ್‌ ಕೂಡ ಪ್ರತಿಹೋರಾಟ ನಡೆಸಿ ಬೆನ್ನಟ್ಟುವ ಕೆಲಸ ಸುಲಭವಾಗದಂತೆ ನೋಡಿಕೊಂಡಿದೆ. ಆತಿಥೇಯ ತಂಡದ ವೇಗದ ಬೌಲರ್‌ಗಳೂ ಕೊನೆಯ ಎಸೆತದ ತನಕ ಆಕ್ರಮಣಕಾರಿಯಾಗಿಯೇ ಬೌಲಿಂಗ್ ಮಾಡಿದರು. ಯಶಸ್ವಿ ಜೈಸ್ವಾಲ್ ಅವರ ವಿಕೆಟ್‌ಅನ್ನು ಎರಡನೇ ಓವರಿನಲ್ಲೇ ಜೋಫ್ರಾ ಆರ್ಚರ್ ಪಡೆದರು. ಮೊದಲ ಇನಿಂಗ್ಸ್‌ನ ಶತಕ ವೀರ ಕೆ.ಎಲ್.ರಾಹುಲ್ (ಔಟಾಗದೇ 33) ಮತ್ತು ಅವರ ಬಾಲ್ಯ ಸ್ನೇಹಿತ ಕರುಣ್ ನಾಯರ್ (14) ಎರಡನೇ ವಿಕೆಟ್‌ಗೆ 36 ರನ್ ಸೇರಿಸಿ ಕುಸಿತ ತಡೆಗಟ್ಟಲು ತೊಡಗಿದರು. ಆದರೆ ಬ್ರೈಡನ್ ಕಾರ್ಸ್ (11ಕ್ಕೆ 2) ಅವರ ಉರಿದಾಳಿಯಲ್ಲಿ ಭಾರತ ಮತ್ತೆರಡು ವಿಕೆಟ್‌ ಕಳೆದುಕೊಂಡಿತು. ದಿನದಾಟ ಮುಗಿದಾಗ ಭಾರತದ ಮೊತ್ತ 58ಕ್ಕೆ4. ಸರಣಿಯಲ್ಲಿ 2–1 ಮುನ್ನಡೆ ಪಡೆಯಲು  ಇನ್ನೂ 135 ರನ್ ಗಳಿಸಬೇಕಾಗಿದೆ.

ಬೂಮ್ರಾ ಅವರ ಎಸೆತಗಳನ್ನು ನಿಭಾಯಿಸಲು ಇಂಗ್ಲೆಂಡ್ ಆಟಗಾರರಿಗೆ ಸಾಧ್ಯವಾಗಲಿಲ್ಲ. ಸಿರಾಜ್‌ ಸಹ ಅಷ್ಟೇ ಆಕ್ರಮಣಕಾರಿಯಾಗಿದ್ದರು. ಕೊನೆಗೂ ದಾಳಿಗೆ ಪ್ರತಿದಾಳಿಯೇ ಉತ್ತಮ ತಂತ್ರ ಎಂದು ಜಾಕ್ ಕ್ರಾಲಿ ಮತ್ತು ಬೆನ್ ಡಕೆಟ್ ಅರಿತರು. ಆದರೆ ಇದು ಇಬ್ಬರ ಪತನಕ್ಕೆ ಕಾರಣವಾಯಿತು. ಭಾರತಕ್ಕೆ ಅಗತ್ಯವಿದ್ದ ಆರಂಭ ದೊರೆಯಿತು. ಸಿರಾಜ್ ಅವರು ನಂತರ ಓಲಿ ಪೋಪ್ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಆಕ್ರಮಣಕಾರಿಯಾಗಿದ್ದ ಹ್ಯಾರಿ ಬ್ರೂಕ್‌ ಅವರನ್ನು ಲಂಚ್‌ಗೆ ಕೆಲವೇ ನಿಮಿಷ ಮೊದಲು ಆಕಾಶ್‌ ದೀಪ್ ಪೆವಿಲಿಯನ್‌ಗೆ ಮರಳಿಸಿದರು. 

ತಮ್ಮ ಬ್ಯಾಟಿಂಗ್ ಸಾಮರ್ಥ್ಯದಿಂದಾಗಿಯೇ, ಕುಲದೀಪ್‌ ಅವರನ್ನು ಹಿಂದೆ ಹಾಕಿ ತಂಡದಲ್ಲಿ ಅವಕಾಶ ಪಡೆದ ಆಫ್‌ ಸ್ಪಿನ್ನರ್ ಸುಂದರ್ ಇಂಥ ನಿಧಾಗತಿಯ ಪಿಚ್‌ನಲ್ಲಿ ತಾವು ಅಪಾಯಕಾರಿ ಎಂಬುದನ್ನು ತೋರಿದರು. ಲೆಂಗ್ತ್‌ಗಳಲ್ಲಿ ಕೊಂಚ ವೈವಿಧ್ಯ ತೋರಿದರು. ಸ್ವೀಪ್‌ ಮಾಡಲು ಯತ್ನಿಸಿದ ರೂಟ್‌ ಬೌಲ್ಡ್‌ ಆದರು. ನಂತರ ಅಪಾಯಕಾರಿ ಆಟಗಾರ ಜೇಮಿ ಸ್ಮಿತ್‌ ಅವರು ಸ್ವಲ್ಪ ಕೆಳಮಟ್ಟದಲ್ಲಿ ಹೊರಳಿದ ಎಸೆತಕ್ಕೆ ಬೌಲ್ಡ್ ಆದರು. ಇಂಗ್ಲೆಂಡ್ ಒತ್ತಡಕ್ಕೆ ಸಿಲುಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.