ADVERTISEMENT

‘ಒತ್ತಡ ಮೀರಿ ನಿಂತು ಆಡುವ ಕಲೆ ಕರಗತ ಮಾಡಿಕೊಳ್ಳಬೇಕು’

ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅನಿಸಿಕೆ

ಪಿಟಿಐ
Published 3 ಸೆಪ್ಟೆಂಬರ್ 2018, 19:30 IST
Last Updated 3 ಸೆಪ್ಟೆಂಬರ್ 2018, 19:30 IST
ವಿರಾಟ್‌ ಕೊಹ್ಲಿ
ವಿರಾಟ್‌ ಕೊಹ್ಲಿ   

ಸೌಥಾಂಪ್ಟನ್‌: ‘ವಿದೇಶಗಳಲ್ಲಿ ನಡೆಯುವ ಪಂದ್ಯಗಳಲ್ಲಿ ನಮ್ಮವರು ಒತ್ತಡ ಮೀರಿ ನಿಂತು ಆಡುವ ಕಲೆ ಕರಗತ ಮಾಡಿಕೊಳ್ಳಬೇಕು. ಆಗ ಮಾತ್ರ ಸರಣಿ ಗೆಲ್ಲಲು ಸಾಧ್ಯ’ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ತಿಳಿಸಿದ್ದಾರೆ.

ಭಾನುವಾರ ಕೊನೆಗೊಂಡ ನಾಲ್ಕನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ 60 ರನ್‌ಗಳಿಂದ ಇಂಗ್ಲೆಂಡ್‌ ಎದುರು ಸೋತಿತ್ತು. 245ರನ್‌ಗಳ ಗುರಿ ಬೆನ್ನಟ್ಟಿದ ಕೊಹ್ಲಿ ಪಡೆ 184ರನ್‌ಗಳಿಗೆ ಆಲೌಟ್‌ ಆಗಿತ್ತು. ಇದರೊಂದಿಗೆ 1–3ರಿಂದ ಸರಣಿ ಕೈಚೆಲ್ಲಿತ್ತು.‌

‘ತಂಡದಲ್ಲಿ ಪ್ರತಿಭಾವಂತ ಆಟಗಾರರಿದ್ದಾರೆ. ಎಲ್ಲರೂ ಶ್ರೇಷ್ಠ ಆಟ ಆಡುವವರೇ. ಆದರೆ ಒತ್ತಡದ ಪರಿಸ್ಥಿತಿಯಲ್ಲಿ ಹೇಗೆ ಹೋರಾಡಬೇಕು ಎಂಬುದನ್ನು ಕಲಿತಿಲ್ಲ. ಹೀಗಾಗಿ ಪ್ರತಿ ಬಾರಿಯೂ ಗೆಲುವಿನ ಸನಿಹ ಬಂದು ಎಡವುತ್ತಿದ್ದೇವೆ’ ಎಂದರು.

ADVERTISEMENT

‘ವಿದೇಶಗಳಲ್ಲಿ ನಾವು ನಿರ್ಭೀತಿಯಿಂದ ಆಡಬೇಕು. ಎಂತಹುದೇ ಪರಿಸ್ಥಿತಿಯಲ್ಲೂ ಎದೆಗುಂದದೆ ಹೋರಾಡಬೇಕು. ನಾಟಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಮೂರನೇ ಟೆಸ್ಟ್‌ನ ಆರಂಭದ ಮೂರು ದಿನ ನಾವು ಮೇಲುಗೈ ಸಾಧಿಸಿದ್ದೆವು. ಕೊನೆಯ ಎರಡು ದಿನವೂ ಆಧಿ‍ಪತ್ಯ ಸಾಧಿಸಿ ಗೆದ್ದೆವು’ ಎಂದು ತಿಳಿಸಿದರು.

‘ಮೊದಲ ಇನಿಂಗ್ಸ್‌ನಲ್ಲಿ ನಾನು ಬೇಗ ಔಟಾದೆ. ಹೆಚ್ಚು ಸಮಯ ಕ್ರೀಸ್‌ನಲ್ಲಿ ಇದ್ದಿದ್ದರೆ ದೊಡ್ಡ ಅಂತರದ ಮುನ್ನಡೆ ಗಳಿಸಬಹುದಿತ್ತು. ತಂಡ ಸಂಕಷ್ಟದಲ್ಲಿದ್ದಾಗ ಚೇತೇಶ್ವರ್‌ ಪೂಜಾರ ಕೆಚ್ಚೆದೆಯಿಂದ ಆಡಿದರು. ಹೀಗಾಗಿ ಮುನ್ನಡೆ ಪಡೆಯಲು ಸಾಧ್ಯವಾಯಿತು’ ಎಂದು ನುಡಿದರು.

‘ಸಪಾಟಾದ ಪಿಚ್‌ಗಳು ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುತ್ತವೆ. ಇದರಲ್ಲಿ ಆರ್‌.ಅಶ್ವಿನ್‌ ಉತ್ತಮ ದಾಳಿ ನಡೆಸಿದರು. ಆದರೆ ವಿಕೆಟ್‌ ಪಡೆಯಲು ಸಾಧ್ಯವಾಗಲಿಲ್ಲ. ಇಂಗ್ಲೆಂಡ್‌ನ ಮೊಯಿನ್‌ ಅಲಿ ಅಮೋಘ ಬೌಲಿಂಗ್‌ ಮಾಡಿದರು. ಅವರ ಎಸೆತಗಳನ್ನು ಎದುರಿಸಲು ನಮ್ಮ ಬ್ಯಾಟ್ಸ್‌ಮನ್‌ಗಳು ಪರದಾಡಿದರು’ ಎಂದು ವಿರಾಟ್‌ ಹೇಳಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನ ಜನಪ್ರಿಯತೆ ಕುಗ್ಗಿಲ್ಲ: ‘ಟೆಸ್ಟ್‌ ಕ್ರಿಕೆಟ್‌ನ ಜನಪ್ರಿಯತೆ ಕಡಿಮೆಯಾಗಿಲ್ಲ ಎಂಬುದಕ್ಕೆ ಭಾರತದ ಎದುರಿನ ಟೆಸ್ಟ್‌ ಸರಣಿಯೇ ಸಾಕ್ಷಿ’ ಎಂದು ಇಂಗ್ಲೆಂಡ್‌ ತಂಡದ ನಾಯಕ ಜೋ ರೂಟ್‌ ತಿಳಿಸಿದ್ದಾರೆ.

‘ಟೆಸ್ಟ್‌ ‍ಪಂದ್ಯಗಳನ್ನು ನೋಡಲು ಜನ ಕ್ರೀಡಾಂಗಣಕ್ಕೆ ಬರುವುದು ಕಡಿಮೆ ಎಂಬ ಮಾತಿದೆ. ಭಾರತ ಮತ್ತು ಇಂಗ್ಲೆಂಡ್‌ ನಡುವಣ ಸರಣಿ ಇದಕ್ಕೆ ಅಪವಾದದಂತಿತ್ತು. ಸಾವಿರಾರು ಮಂದಿ ಕ್ರೀಡಾಂಗಣಗಳಲ್ಲಿ ಕುಳಿತು ಪಂದ್ಯ ನೋಡಿದ್ದಾರೆ. ಟಿ.ವಿ.ಯಲ್ಲಿ ಪಂದ್ಯ ವೀಕ್ಷಿಸಿದವರ ಸಂಖ್ಯೆಯೂ ಹೆಚ್ಚಿತ್ತು’ ಎಂದಿದ್ದಾರೆ.

‘ಎದುರಾಳಿಗಳು 245ರನ್‌ಗಳ ಗುರಿ ಬೆನ್ನಟ್ಟುವುದು ಕಷ್ಟ ಎಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ಚೆಂಡು ಹೆಚ್ಚು ತಿರುವು ಪಡೆಯುತ್ತಿತ್ತು. ನಮ್ಮ ಬೌಲರ್‌ಗಳು ಇದನ್ನು ಸದು‍ಪಯೋಗಪಡಿಸಿಕೊಂಡು ಗೆಲುವು ಸುಲಭ ಮಾಡಿದರು’ ಎಂದು ರೂಟ್‌ ಹೇಳಿದರು.

ರ‍್ಯಾಂಕಿಂಗ್‌: ಕೊಹ್ಲಿ ಶ್ರೇಷ್ಠ ಸಾಧನೆ
ದುಬೈ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ಸೋಮವಾರ ಬಿಡುಗಡೆಯಾಗಿ ರುವ ಐಸಿಸಿ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಪಾಡಿಕೊಂಡಿದ್ದಾರೆ.

ಇಂಗ್ಲೆಂಡ್‌ ಎದುರಿನ ನಾಲ್ಕನೇ ಟೆಸ್ಟ್‌ನಲ್ಲಿ ವಿರಾಟ್‌ ಒಟ್ಟು 104ರನ್ ಗಳಿಸಿದ್ದರು. ಇದರೊಂದಿಗೆ ಒಟ್ಟು ರ‍್ಯಾಂಕಿಂಗ್‌ ಪಾಯಿಂಟ್ಸ್‌ ಅನ್ನು 937ಕ್ಕೆ ಹೆಚ್ಚಿಸಿಕೊಂಡಿದ್ದಾರೆ. ಇದು ಕೊಹ್ಲಿ, ವೃತ್ತಿಬದುಕಿನ ಶ್ರೇಷ್ಠ ಸಾಧನೆಯಾಗಿದೆ. ಟೆಸ್ಟ್‌ ಮಾದರಿಯಲ್ಲಿ ಅತಿ ಹೆಚ್ಚು ರೇಟಿಂಗ್‌ ಪಾಯಿಂಟ್ಸ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ವಿರಾಟ್‌ 11ನೇ ಸ್ಥಾನ ಗಳಿಸಿದ್ದಾರೆ.

ಗ್ಯಾರಿ ಸೋಬರ್ಸ್‌, ಕ್ಲೈಡ್‌ ವಾಲ್‌ಕಾಟ್‌, ವಿವಿಯನ್‌ ರಿಚರ್ಡ್ಸ್‌ ಮತ್ತು ಕುಮಾರ ಸಂಗಕ್ಕಾರ ಅವರೂ ಈ ಪಟ್ಟಿಯಲ್ಲಿದ್ದಾರೆ.

ಭಾರತದ ಚೇತೇಶ್ವರ್‌ ಪೂಜಾರ ಆರನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ. ಅವರು ಇಂಗ್ಲೆಂಡ್‌ ವಿರುದ್ಧದ ನಾಲ್ಕನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 132ರನ್‌ ಗಳಿಸಿ ಅಜೇಯವಾಗುಳಿದಿದ್ದರು.

ಬೌಲರ್‌ಗಳ ಪಟ್ಟಿಯಲ್ಲಿ ಮೊಹಮ್ಮದ್‌ ಶಮಿ ಅವರು 19ನೇ ಸ್ಥಾನಕ್ಕೆ ಏರಿದ್ದಾರೆ. ಜಸ್‌ಪ್ರೀತ್‌ ಬೂಮ್ರಾ 37ನೇ ಸ್ಥಾನದಲ್ಲಿದ್ದಾರೆ.

ಸರಣಿ ಸೋಲಿಗೆ ಏಳು ಕಾರಣಗಳು...

*ಆರಂಭಿಕರ ವೈಫಲ್ಯ
ಆರಂಭಿಕರಾದ ಶಿಖರ್‌ ಧವನ್‌, ಕೆ.ಎಲ್‌.ರಾಹುಲ್‌ ಮತ್ತು ಮುರಳಿ ವಿಜಯ್‌ ಅವರ ವೈಫಲ್ಯ ಭಾರತದ ಸರಣಿ ಸೋಲಿಗೆ ಪ್ರಮುಖ ಕಾರಣ. ಸರಣಿಯಲ್ಲಿ ಈ ಮೂವರ ಪೈಕಿ ಯಾರೊಬ್ಬರೂ ಅರ್ಧಶತಕ ಗಳಿಸಲಿಲ್ಲ ಎಂಬುದು ಗಮನಿಸಬೇಕಾದ ಅಂಶ.

*ಬ್ಯಾಟ್ಸ್‌ಮನ್‌ಗಳ ಬೇಜವಾಬ್ದಾರಿ
ನಾಯಕ ವಿರಾಟ್‌ ಕೊಹ್ಲಿ (554ರನ್‌) ಮತ್ತು ಚೇತೇಶ್ವರ್‌ ಪೂಜಾರ ಅವರನ್ನು ಬಿಟ್ಟು ಉಳಿದೆಲ್ಲರೂ ವೈಫಲ್ಯ ಕಂಡಿದ್ದು ತಂಡಕ್ಕೆ ಮುಳುವಾಗಿ ಪರಿಣಮಿಸಿತು.

*ಮಂಕಾದ ಮಧ್ಯಮ ಕ್ರಮಾಂಕ
ಇಂಗ್ಲೆಂಡ್‌ ತಂಡ ಆರಂಭಿಕ ಆಘಾತ ಕಂಡಾಗ ಸ್ಯಾಮ್‌ ಕರನ್‌ ಮತ್ತು ಕ್ರಿಸ್‌ ವೋಕ್ಸ್‌ ಅವರು ಅಮೋಘ ಆಟ ಆಡಿ ತಂಡಕ್ಕೆ ಆಸರೆಯಾಗಿದ್ದರು. ಆದರೆ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸರಣಿಯ ನಾಲ್ಕು ಪಂದ್ಯಗಳಲ್ಲೂ ಮಂಕಾದರು.

*ಆಯ್ಕೆಯಲ್ಲಿ ಎಡವಿದ್ದು
ಪೂಜಾರ ‘ಟೆಸ್ಟ್‌ ಪರಿಣತ’ ಬ್ಯಾಟ್ಸ್‌ಮನ್‌ ಎಂಬುದು ಗೊತ್ತಿದ್ದರೂ ಅವರನ್ನು ಮೊದಲ ಪಂದ್ಯದಲ್ಲಿ ಕಣಕ್ಕಿಳಿಸಿರಲಿಲ್ಲ. ಲಾರ್ಡ್ಸ್‌ ಅಂಗಳದ ಪಿಚ್‌ (ಎರಡನೇ ಟೆಸ್ಟ್‌) ವೇಗಿಗಳಿಗೆ ಹೆಚ್ಚು ನೆರವು ನೀಡುತ್ತಿತ್ತು. ಹೀಗಿದ್ದರೂ ಕುಲದೀಪ್‌ ಯಾದವ್‌ ಅವರನ್ನು ಹೆಚ್ಚುವರಿ ಸ್ಪಿನ್ನರ್‌ ಆಗಿ ಆಡಿಸಲಾಗಿತ್ತು. ತಂಡದ ಆಡಳಿತ ಮಂಡಳಿಯ ಈ ನಿರ್ಧಾರಗಳು ಮುಳುವಾಗಿ ಪರಿಣಮಿಸಿದವು.

*ಪಂದ್ಯದ ಮೇಲಿನ ಹಿಡಿತ ಸಡಿಲಗೊಳಿಸಿದ್ದು
ಮೊದಲ ಮತ್ತು ನಾಲ್ಕನೇ ಟೆಸ್ಟ್‌ ಪಂದ್ಯಗಳಲ್ಲಿ ಭಾರತಕ್ಕೆ ಗೆಲುವಿನ ಅವಕಾಶ ಹೆಚ್ಚಿತ್ತು. ಮೊದಲ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್‌ 87ರನ್‌ಗಳಿಗೆ ಏಳು ವಿಕೆಟ್‌ ಕಳೆದುಕೊಂಡು ಸಂಕಷ್ಟ ಎದುರಿಸಿತ್ತು. ಈ ಹಂತದಲ್ಲಿ ಶಿಖರ್‌ ಧವನ್‌ ಅವರು ಆದಿಲ್‌ ರಶೀದ್‌ ಕ್ಯಾಚ್‌ ಕೈಚೆಲ್ಲಿದ್ದರಿಂದ ಎದುರಾಳಿಗಳ ಕೈ ಮೇಲಾಗಿತ್ತು. ನಾಲ್ಕನೇ ಟೆಸ್ಟ್‌ನಲ್ಲಿ ಆತಿಥೇಯರು 86ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡಿದ್ದರು. ಈ ಹಂತದಲ್ಲಿ ಬೌಲರ್‌ಗಳು ಬಿಗುವಿನ ದಾಳಿ ನಡೆಸಲು ವಿಫಲರಾದರು.

* ವಿಕೆಟ್‌ ಕೀಪರ್‌ ವೈಫಲ್ಯ
ಭಾರತ ತಂಡದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ಗಳಾದ ದಿನೇಶ್‌ ಕಾರ್ತಿಕ್‌ ಮತ್ತು ರಿಷಭ್ ಪಂತ್‌ ರನ್‌ ಗಳಿಸಲು ಪರದಾಡಿದ್ದು ಕೂಡಾ ತಂಡದ ಸೋಲಿಗೆ ಕಾರಣವಾಯಿತು.

*ನಡೆಯದ ಅಶ್ವಿನ್‌ ಆಟ
ನಾಲ್ಕನೇ ಟೆಸ್ಟ್‌ ಪಂದ್ಯ ನಡೆದ ರೋಸ್‌ ಬೌಲ್ ಪಿಚ್‌ ಸ್ಪಿನ್ನರ್‌ಗಳಿಗೆ ಹೆಚ್ಚು ನೆರವು ನೀಡುತ್ತಿತ್ತು. ಸಪಾಟಾದ ಈ ಪಿಚ್‌ನಲ್ಲಿ ಇಂಗ್ಲೆಂಡ್‌ನ ಮೊಯಿನ್‌ ಅಲಿ ಎರಡೂ ಇನಿಂಗ್ಸ್‌ಗಳಿಂದ 9 ವಿಕೆಟ್‌ ಉರುಳಿಸಿದರು. ಭಾರತದ ಅಶ್ವಿನ್‌ ಗಳಿಸಿದ್ದು ಮೂರು ವಿಕೆಟ್‌ ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.