ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ‘ಪಟೌಡಿ’ ಟ್ರೋಫಿ ಎಂದೇ ಮುಂದುವರಿಸಲಾಗುತ್ತದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ(ಇಸಿಬಿ) ತಿಳಿಸಿದೆ.
ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸರಣಿಯನ್ನು ‘ಪಟೌಡಿ’ ಟ್ರೋಫಿ ಎಂದು ಕರೆಯಲಾಗುತ್ತಿತ್ತು. ಈ ಬಾರಿಯಿಂದ ಅದನ್ನು ತೆಂಡಲ್ಕೂರ್–ಆ್ಯಂಡರ್ಸನ್ ಟ್ರೋಫಿ ಎಂದು ಮರುನಾಮಕರಣ ಮಾಡಲು ಯೋಚಿಸಲಾಗಿತ್ತು. ಆದರೆ, ಅಹಮದಾಬಾದ್ ವಿಮಾನ ದುರಂತದ ಹಿನ್ನಲೆಯಲ್ಲಿ ಈ ನಿರ್ಧಾರವನ್ನು ಮುಂದೂಡಲಾಗಿತ್ತು.
ಟೆಸ್ಟ್ ಸರಣಿಗೆ ಬೇರೆ ಹೆಸರು ಕೊಡುವುದಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಸೇರಿದಂತೆ ಹಲವರಿಂದ ವಿರೋಧ ವ್ಯಕ್ತವಾಗಿತ್ತು.
ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಕೂಡ ಪಟೌಡಿ ಹೆಸರು ಉಳಿಸಿಕೊಳ್ಳುವಂತೆ ಇಸಿಬಿಗೆ ಮನವಿ ಮಾಡಿದ್ದರು.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿರುವ ಹೆಗ್ಗಳಿಕೆ ಸಚಿನ್ ತೆಂಡೂಲ್ಕರ್ ಅವರದ್ದಾಗಿದ್ದರೆ, ಆ್ಯಂಡರ್ಸನ್ ಅವರು ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್ ಆಗಿದ್ದಾರೆ. ಹಾಗಾಗಿ ಇವರಿಬ್ಬರ ಹೆಸರನ್ನು ಸರಣಿಗೆ ಇಡಲು ಇಸಿಬಿ ಯೋಚಿಸಿತ್ತು.
‘ಪಟೌಡಿ’ ಕುಟುಂಬದ ಇಫ್ತಿಕಾರ್ ಅಲಿ ಖಾನ್ ಪಟೌಡಿ ಹಾಗೂ ಅವರ ಮಗ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ಭಾರತ ಕ್ರಿಕೆಟ್ ತಂಡವನ್ನು ಮುನ್ನಡೆಸಿದ್ದರು. ಅವರಿಬ್ಬರೂ ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ನಲ್ಲೂ ಆಡಿದ್ದರು. ಭಾರತ ಮತ್ತು ಇಂಗ್ಲೆಂಡ್ ನಡುವೆ ಕ್ರಿಕೆಟ್ ಬಾಂಧವ್ಯ ವೃದ್ಧಿಸುವಲ್ಲಿ ಇವರ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಟೆಸ್ಟ್ ಸರಣಿಗೆ ‘ಪಟೌಡಿ’ಸರಣಿ ಎಂದು ಕರೆಯಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.