ADVERTISEMENT

ಭಾರತ– ಇಂಗ್ಲೆಂಡ್ ಟೆಸ್ಟ್‌ ಸರಣಿಗೆ ತೆಂಡೂಲ್ಕರ್‌– ಆ್ಯಂಡರ್ಸನ್‌ ಟ್ರೋಫಿ

ಪಿಟಿಐ
Published 6 ಜೂನ್ 2025, 12:55 IST
Last Updated 6 ಜೂನ್ 2025, 12:55 IST
   

ಲಂಡನ್‌: ಭಾರತ ಮತ್ತು ಇಂಗ್ಲೆಂಡ್‌ ನಡುವಣ ಈ ತಿಂಗಳ ಮಧ್ಯದಲ್ಲಿ ಆರಂಭವಾಗುವ ಟೆಸ್ಟ್‌ ಸರಣಿಗೆ ಹೊಸ ಟ್ರೋಫಿ ನೀಡಲಾಗುತ್ತಿದ್ದು, ಇದಕ್ಕೆ ಸಚಿನ್ ತೆಂಡೂಲ್ಕರ್‌– ಜೇಮ್ಸ್‌ ಆ್ಯಂಡರ್ಸನ್‌ ಟ್ರೋಫಿ ಎಂದು ಹೆಸರಿಡಲಾಗಿದೆ.

ಜೂನ್‌ 20ರಂದು ಹೆಡಿಂಗ್ಲೆಯಲ್ಲಿ ಮೊದಲ ಟೆಸ್ಟ್‌ ಆರಂಭವಾಗುತ್ತಿದ್ದು, ಅದಕ್ಕೆ ಮೊದಲು ಟ್ರೋಫಿಯ ಅನಾವರಣ ನಡೆಯಲಿದೆ ಎಂದು ಬಿಬಿಸಿ ವರದಿ ಮಾಡಿದೆ. ಆದರೆ ಈ ಬಗ್ಗೆ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಬೋರ್ಡ್‌ (ಇಸಿಬಿ) ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ ಎಂದೂ ವರದಿ ಮಾಡಿದೆ.

ಈ ಮೊದಲು ಭಾರತ ಮತ್ತು ಇಂಗ್ಲೆಂಡ್ ನಡುವಣ ಇಂಗ್ಲೆಂಡ್‌ನಲ್ಲಿ ನಡೆಯುತ್ತಿದ್ದ ಟೆಸ್ಟ್‌ ಸರಣಿಗೆ ಪಟೌಡಿ ಟ್ರೋಫಿ ಎಂಬ ಹೆಸರಿತ್ತು. ಭಾರತ ತಂಡಕ್ಕೆ ಆಡಿದ್ದ ಇಫ್ತಿಕಾರ್ ಅಲಿ ಖಾನ್ ಪಟೌಡಿ ಮತ್ತು ಅವರ ಪುತ್ರ ಮನ್ಸೂರ್ ಅಲಿ ಖಾನ್ ಪಟೌಡಿ ನೆನಪಿನಲ್ಲಿ ಈ ಹೆಸರು ಇಡಲಾಗಿತ್ತು.

ADVERTISEMENT

ಈ ಟ್ರೋಫಿಗೆ ‘ನಿವೃತ್ತಿ’ ನೀಡಲು ಬಯಸುವುದಾಗಿ ಇಸಿಬಿ ಕಳೆದ ಮಾರ್ಚ್‌ನಲ್ಲಿ ಪಟೌಡಿ ಕುಟುಂಬಕ್ಕೆ ಪತ್ರ ಬರೆದಿತ್ತು.

ಕ್ರಿಕೆಟ್‌ ದಿಗ್ಗಜರಾದ 52 ವರ್ಷ ವಯಸ್ಸಿನ ಸಚಿನ್ ತೆಂಡೂಲ್ಕರ್ 1989 ರಿಂದ 2013ರ ನಡುವೆ 200 ಟೆಸ್ಟ್‌ಗಳನ್ನು ಆಡಿದ್ದು, 15921 ರನ್ ಕಲೆಹಾಕಿದ್ದಾರೆ. ಜಿಮ್ಮಿ ಆ್ಯಂಡರ್ಸನ್‌ ಟೆಸ್ಟ್‌ನಲ್ಲಿ ಅತಿ ಹೆಚ್ಚು (704) ವಿಕೆಟ್‌ಗಳನ್ನು ಪಡೆದ ವೇಗದ ಬೌಲರ್ ಎನಿಸಿದ್ದಾರೆ. 42 ವರ್ಷ ವಯಸ್ಸಿನ ಅವರು ವೇಗದ ಬೌಲಿಂಗ್‌ ಕನ್ಸಲ್ಟೆಂಟ್ ಆಗಿದ್ದಾರೆ.

14 ಟೆಸ್ಟ್‌ಗಳಲ್ಲಿ ಇವರಿಬ್ಬರು ಮುಖಾಮುಖಿ ಆಗಿದ್ದು, ಆ್ಯಂಡರ್ಸನ್ 9 ಸಲ ತೆಂಡೂಲ್ಕರ್ ಅವರ ವಿಕೆಟ್‌ ಪಡೆದಿದ್ದಾರೆ. ಬೇರಾವುದೇ ಬೌಲರ್ ಇಷ್ಟೊಂದು ಸಲ ಅವರ ವಿಕೆಟ್‌ ಪಡೆದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.