ADVERTISEMENT

ಮಹಿಳಾ ಏಕದಿನ ಕ್ರಿಕೆಟ್‌ | ಭಾರತ–ಇಂಗ್ಲೆಂಡ್‌ ಪಂದ್ಯ ಇಂದು; ಸರಣಿ ಯಾರ ಮಡಿಲಿಗೆ?

ಪಿಟಿಐ
Published 22 ಜುಲೈ 2025, 0:35 IST
Last Updated 22 ಜುಲೈ 2025, 0:35 IST
ಹರ್ಮನ್‌ಪ್ರೀತ್‌ ಕೌರ್‌
ಹರ್ಮನ್‌ಪ್ರೀತ್‌ ಕೌರ್‌   

ಚೆಸ್ಟರ್‌ ಲಿ ಸ್ಟ್ರೀಟ್ (ಯು.ಕೆ): ಇಂಗ್ಲೆಂಡ್‌ ವಿರುದ್ಧ ಏಕದಿನ ಕ್ರಿಕೆಟ್‌ ಸರಣಿಯಲ್ಲಿ ಸಮಬಲ ಸಾಧಿಸಿರುವ ಭಾರತದ ವನಿತೆಯರು, ಮಂಗಳವಾರ ನಡೆಯುವ ನಿರ್ಣಾಯಕ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರುವ ಛಲದಲ್ಲಿದ್ದಾರೆ.

ಸರಣಿಯ ಮೊದಲ ಪಂದ್ಯವನ್ನು (ಸೌತಾಂಪ್ಟನ್) ಹರ್ಮನ್‌ಪ್ರೀತ್‌ ಕೌರ್‌ ಬಳಗವು ನಾಲ್ಕು ವಿಕೆಟ್‌ಗಳಿಂದ ಗೆದ್ದು ಶುಭಾರಂಭ ಮಾಡಿತ್ತು. ಆದರೆ, ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಪಂದ್ಯವನ್ನು ಆತಿಥೇಯ ತಂಡವು ಡಿಎಲ್‌ಎಸ್ ಆಧಾರದಲ್ಲಿ ಎಂಟು ವಿಕೆಟ್‌ಗಳಿಂದ ಜಯಿಸಿತ್ತು. ಇದರಿಂದ ಮೂರು ಪಂದ್ಯಗಳ ಸರಣಿಯು 1–1 ಸಮಬಲಗೊಂಡಿದೆ.

ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ಏಕದಿನ ವಿಶ್ವಕಪ್‌ ಟೂರ್ನಿ ಸೆ.25ರಿಂದ ಆರಂಭವಾಗಲಿದ್ದು, ಈ ನಿಟ್ಟಿನಲ್ಲಿ ಉಭಯ ತಂಡಗಳಿಗೆ ಈ ಸರಣಿಯ ಗೆಲುವು ಮಹತ್ವದ್ದಾಗಿದೆ. 

ADVERTISEMENT

ಉತ್ತಮ ಲಯದಲ್ಲಿದ್ದ ಭಾರತ ತಂಡವು ಎರಡನೇ ಪಂದ್ಯವನ್ನು ಗೆದ್ದು, ಸರಣಿ ವಶಮಾಡಿಕೊಳ್ಳುವ ನಿರೀಕ್ಷೆಯಿತ್ತು. ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿದ್ದರಿಂದ ಓವರ್‌ಗಳನ್ನು ಕಡಿತಗೊಳಿಸಲಾಗಿತ್ತು. ವಿವೇಚನಾರಹಿತ ಶಾಟ್ ಆಯ್ಕೆಯಿಂದಾಗಿ ಭಾರತದ ಬ್ಯಾಟರ್‌ಗಳು ಎಡವಿದರು. ಹೀಗಾಗಿ, ನಿಗದಿತ 29 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 143 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇಂಗ್ಲೆಂಡ್‌ನ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಸುಲಭವಾಗಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.

ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಬಲಿಷ್ಠವಾಗಿರುವ ಭಾರತ ತಂಡವು ಇದೀಗ ನಿರ್ಣಾಯಕ ಪಂದ್ಯದಲ್ಲಿ ಹಿಂದಿನ ತಪ್ಪುಗಳು ತಿದ್ದಿಕೊಂಡು, ಸರಣಿ ವಶಪಡಿಸಿಕೊಳ್ಳುವತ್ತ ಚಿತ್ತ ಹರಿಸಿದೆ. ಈ ಸರಣಿಗೂ ಮುನ್ನ ಭಾರತದ ಮಹಿಳೆಯರು ಇಂಗ್ಲೆಂಡ್‌ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು 3–2ರಿಂದ ಗೆದ್ದು ಚಾರಿತ್ರಿಕ ಸಾಧನೆ ಮಾಡಿದ್ದರು.

ಪಂದ್ಯ ಆರಂಭ: ಸಂಜೆ 5.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.