ADVERTISEMENT

ಐಪಿಎಲ್ ಆಯೋಜನೆ: ಭಾರತಕ್ಕೆ ಆದ್ಯತೆ ನೀಡಲಾಗುವುದೆಂದ ಸೌರವ್ ಗಂಗೂಲಿ

ಪಿಟಿಐ
Published 8 ಜುಲೈ 2020, 11:28 IST
Last Updated 8 ಜುಲೈ 2020, 11:28 IST
ಸೌರವ್ ಗಂಗೂಲಿ
ಸೌರವ್ ಗಂಗೂಲಿ   

ನವದೆಹಲಿ : ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಲು ಭಾರತಕ್ಕೆ ಮೊದಲ ಆದ್ಯತೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಮಾರ್ಚ್‌ 29ರಂದು ಆರಂಭವಾಗಬೇಕಿದ್ದ ಐಪಿಎಲ್ ಟೂರ್ನಿಯನ್ನು ಕೊರೊನಾ ವೈರಸ್‌ ಪ್ರಸರಣ ತಡೆಗೆ ಲಾಕ್‌ಡೌನ್ ವಿಧಿಸಿದ ಕಾರಣ ಮುಂದೂಡಲಾಯಿತು. ಸೆಪ್ಟೆಂಬರ್ –ಅಕ್ಟೋಬರ್‌ನಲ್ಲಿ ಐಪಿಎಲ್ ಟೂರ್ನಿ ನಡೆಸುವ ಇಂಗಿತವನ್ನು ಈಚೆಗೆ ಬಿಸಿಸಿಐ ಅಧಿಕಾರಿಗಳು ವ್ಯಕ್ತಪಡಿಸಿದ್ದರು. ಆದರೆ ಭಾರತದಲ್ಲಿ ಕೋವಿಡ್–19 ಪ್ರಕರಣಗಳ ಸಂಖ್ಯೆಯಲ್ಲಿ ಏರುಗತಿ ಇರುವುದರಿಂದ ಟೂರ್ನಿಯನ್ನು ವಿದೇಶಗಳಲ್ಲಿ ಆಡಿಸಲಾಗುವುದು ಎಂಬ ಮಾತುಗಳೂ ಕೇಳಿಬಂದಿದ್ದವು.

ಈ ಕುರಿತು ಗಂಗೂಲಿ ಬುಧವಾರ, ಇಂಡಿಯಾ ಟುಡೆ ಸಂದರ್ಶನದಲ್ಲಿ ಮಾತನಾಡಿರುವ ಅವರು,’2020ನೇ ಇಸವಿಯು ಐಪಿಎಲ್ ಟೂರ್ನಿ ಇಲ್ಲದೇ ಮುಗಿಯಬಾರದು. ಆದರೆ ಟೂರ್ನಿಯ ಆಯೋಜನೆಗೆ ಭಾರತಕ್ಕೇ ಆದ್ಯತೆ

ADVERTISEMENT

ಇದೆ. 35–40 ದಿನಗಳ ಅವಧಿ ಸಿಕ್ಕರೂ ಸಾಕು, ನಾವು ಆಯೋಜಿಸಲು ಸಿದ್ಧರಾಗಿದ್ದೇವೆ‘ ಎಂದರು.

’ಟೂರ್ನಿಯನ್ನು ಎಲ್ಲಿ ನಡೆಸಬೇಕು ಎಂಬುದರ ಕುರಿತು ನಿರ್ಧಾರ ಕೈಗೊಳ್ಳಲು ಕೆಲವು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಮೊದಲನೇಯದಾಗಿ ನಾವು ಅಂದುಕೊಂಡಿರುವ ಅವಧಿಯಲ್ಲಿ ಟೂರ್ನಿಯನ್ನು ನಡೆಸುವುದು ಸಾಧ್ಯವೇ? ಎರಡನೇಯದಾಗಿ ಭಾರತದಲ್ಲಿಯೇ ಆಯೋಜನೆ ಸಾಧ್ಯವಾಗುವುದಾದರೆ ವಿದೇಶಕ್ಕೆ ಹೋಗುವ ಪ್ರಮೇಯವೇ ಇಲ್ಲ. ಒಂದೊಮ್ಮೆ ವಿದೇಶದಲ್ಲಿ ಆಯೋಜಿಸುವುದೇ ಆದರೆ ಅದು ಐಪಿಎಲ್‌ ಸಮಿತಿ, ಫ್ರ್ಯಾಂಚೈಸ್‌ಗಳಿಗೆಲ್ಲ ಆರ್ಥಿಕ ಹೊರೆಯಾಗುತ್ತದೆ. ಹಣ ವಿನಿಮಯ ಮೌಲ್ಯ ಈಗ ದುಬಾರಿಯಾಗಿದೆ. ಅದರಿಂದಾಗಿ ಸ್ವದೇಶದಲ್ಲಿಯೇ ಟೂರ್ನಿ ನಡೆಸುವಂತಹ ವಾತಾವರಣ ಬೇಗನೆ ನಿರ್ಮಾಣವಾಗಲಿ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೇವೆ. ವಿದೇಶದಲ್ಲಿ ಆಯೋಜನೇ ಏನಿದ್ದರೂ ಎರಡನೇ ಆಯ್ಕೆ ಅಷ್ಟೇ‘ ಎಂದು ಗಂಗೂಲಿ ಸ್ಪಷ್ಟಪಡಿಸಿದರು.

’ಆದರೆ ಸದ್ಯದ ಪರಿಸ್ಥಿತಿಯಲ್ಲಿ ಭಾರತದಲ್ಲಿ ಐಪಿಎಲ್ ಆಯೋಜನೆ ಮಾಡಿಯೇ ಮಾಡುತ್ಥೇವೆ ಎಂದು ಖಚಿತವಾಗಿ ಹೇಳುವುದು ಸಾಧ್ಯವಿಲ್ಲ. ಮುಂಬೈ, ದೆಹಲಿ, ಕೋಲ್ಕತ್ತ ಮತ್ತು ಚೆನ್ನೈ ಮಹಾನಗರಗಳ ಪರಿಸ್ಥಿತಿ ಏನಿದೆ ಎಂಬುದು ನಿಮಗೆ ಗೊತ್ತಿದೆ. ಅಹಮದಾಬಾದ್ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸುವ ಆಸೆಯೂ ನಮಗೆ ಇದೆ. ಆದರೆ ಅದೂ ಕೂಡ ಸುಲಭವಲ್ಲ‘ ಎಂದರು.

’ ಟಿ20 ವಿಶ್ವಕಪ್ ಟೂ್ರ್ನಿಯ ಅನಿಶ್ಚಿತತೆ ಈಗಲೂ ಮುಂದುವರಿದಿದೆ. ಐಸಿಸಿಯ ನಿರ್ಧಾರದ ನಿರೀಕ್ಷೆಯಲ್ಲಿದ್ದೇವೆ. ಮಾಧ್ಯಮಗಳಲ್ಲಿ ಈ ಬಗ್ಗೆ ಬಹಳಷ್ಟು ವಿಷಯಗಳು ಬರುತ್ತಿವೆ. ಆದರೆ ಅಧಿಕೃತವಾಗಿ ಯಾವುದೇ ಬೆಳವಣಿಗೆ ಇಲ್ಲ‘ ಎಂದು ಭಾರತ ತಂಡದ ಮಾಜಿ ನಾಯಕ ಗಂಗೂಲಿ ಹೇಳಿದರು.

’ಐಪಿಎಲ್ ನಮ್ಮ ದೇಶಿ ಟೂರ್ನಿಗಳಲ್ಲಿ ಮಹತ್ವದ್ದು. ಸಾಧ್ಯವಾದಷ್ಟೂ ಟೂರ್ನಿಯನ್ನು ಆಯೋಜಿಸುವ ಛಲ ನಮ್ಮದು. ಏಕೆಂದರೆ, ಕ್ರಿಕೆಟ್ ಮತ್ತು ಜನಜೀವನ ಮೊದಲಿನಂತೆ ಸಹಜ ಹಾದಿಗೆ ಮರಳಬೇಕು. ಅದಕ್ಕೆ ಐಪಿಎಲ್ ಪ್ರೇರಣೆಯಾಗಬೇಕು‘ ಎಂದರು.‌‌

48ನೇ ವಸಂತಕ್ಕೆ ಕಾಲಿಟ್ಟ ದಾದಾ

ಭಾರತದ ಕ್ರಿಕೆಟ್‌ನಲ್ಲಿ ’ದಾದಾ‘ ಎಂದೇ ಕರೆಸಿಕೊಳ್ಳುವ ಸೌರವ್ ಗಂಗೂಲಿ ಬುಧವಾರ 48ನೇ ಜನ್ಮದಿನ ಆಚರಿಸಿಕೊಂಡರು.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ವಿವಿಎಸ್ ಲಕ್ಷ್ಮಣ್ ಸೇರಿದಂತೆ ಹಲವು ಕ್ರಿಕೆಟಿಗರು, ಅಭಿಮಾನಿಗಳು ಶುಭಾಶಯ ಕೋರಿದ್ದಾರೆ.

’ಬೌಲರ್‌ನ ಎಸೆತವನ್ನು ಕ್ರೀಸ್‌ನಿಂದ ಮುನ್ನುಗ್ಗಿ ಸಿಕ್ಸರ್‌ಗೆ ಎತ್ತುವ ಸಂದರ್ಭದಲ್ಲಿ ಮಾತ್ರ ದಾದಾ ಕಣ್ಣು ಪಿಳುಕಿಸುತ್ತಿದ್ದರು. ಉಳಿದಂತೆ ನೇರದೃಷ್ಟಿ, ನೇರ ನುಡಿ. ಹ್ಯಾಪಿ ಬರ್ತಡೆ ದಾದಾ‘ ಎಂದು ಸೆಹ್ವಾಗ್ ಮಾಡಿರುವ ಟ್ವೀಟ್‌ಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.