ADVERTISEMENT

T20WC: ಭಾರತ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡ: ಸ್ಮಿತ್

ಪಿಟಿಐ
Published 21 ಅಕ್ಟೋಬರ್ 2021, 10:10 IST
Last Updated 21 ಅಕ್ಟೋಬರ್ 2021, 10:10 IST
ಸ್ಟೀವ್ ಸ್ಮಿತ್
ಸ್ಟೀವ್ ಸ್ಮಿತ್   

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಕೆಲವು ಅದ್ಭುತ ಮ್ಯಾಚ್ ವಿನ್ನರ್‌ಗಳನ್ನು ಒಳಗೊಂಡಿರುವ ಟೀಮ್ ಇಂಡಿಯಾ, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದೆನಿಸಿದೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಅಭಿಪ್ರಾಯಪಟ್ಟಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಅಭ್ಯಾಸ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿತ್ತು. ರೋಹಿತ್ ಶರ್ಮಾ (60), ಕೆ.ಎಲ್. ರಾಹುಲ್ (39) ಹಾಗೂ ಸೂರ್ಯಕುಮಾರ್ ಯಾದವ್ (38) ಉಪಯುಕ್ತ ಬ್ಯಾಟಿಂಗ್ ಪ್ರದರ್ಶಿಸಿದರು. ಆರ್. ಅಶ್ವಿನ್ ಎರಡು ವಿಕೆಟ್ ಕಿತ್ತು ಮಿಂಚಿದರು.

ಈ ಕುರಿತು 'ಸಿಡ್ನಿ ಮಾರ್ನಿಂಗ್ ಹೆರಾಲ್ಡ್' ಪತ್ರಿಕೆಗೆ ಪ್ರತಿಕ್ರಿಯೆ ನೀಡಿರುವ ಸ್ಮಿತ್, 'ಭಾರತವು ಅತ್ಯುತ್ತಮ ತಂಡವಾಗಿದ್ದು, ಎಲ್ಲ ವಿಭಾಗದಲ್ಲೂ ಬಲಿಷ್ಠವೆನಿಸಿದೆ. ಕೆಲವು ಅದ್ಭುತ ಮ್ಯಾಚ್ ವಿನ್ನರ್‌ಗಳು ತಂಡದಲ್ಲಿದ್ದಾರೆ' ಎಂದು ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಐಪಿಎಲ್‌ ಆಡಿರುವುದು ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಟೀಮ್ ಇಂಡಿಯಾಗೆ ನೆರವಾಗಿದೆ ಎಂದು ಸ್ಮಿತ್ ಹೇಳಿದ್ದಾರೆ.

ಭಾರತದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಸ್ಮಿತ್ ಆಕರ್ಷಕ ಅರ್ಧಶತಕ (57) ಸಾಧನೆ ಮಾಡಿದರು. ಕ್ರೀಸಿನಲ್ಲಿ ಹೆಚ್ಚು ಸಮಯ ವ್ಯಯಿಸಲು ಸಾಧ್ಯವಾಗಿರುವುದು ಉತ್ತಮ ಭಾವನೆ ಉಂಟು ಮಾಡಿದೆ ಎಂದು ಹೇಳಿದರು.

'ಐಪಿಎಲ್‌ನಲ್ಲಿ ಹೆಚ್ಚು ಪಂದ್ಯ ಆಡಿರಲಿಲ್ಲ. ಆದರೆ ನೆಟ್ಸ್‌ನಲ್ಲಿ ಸಾಕಷ್ಟು ಸಮಯ ವಿನಿಯೋಗಿಸುವ ಮೂಲಕ ಇಲ್ಲಿನ ಪರಿಸ್ಥಿತಿಗೆ ಒಗ್ಗಿಕೊಂಡಿದ್ದೇನೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.