ADVERTISEMENT

ಟಿ20 ರ‍್ಯಾಂಕಿಂಗ್‌: ಅಗ್ರಸ್ಥಾನದಲ್ಲಿ ಭಾರತ

ಪಿಟಿಐ
Published 29 ಮೇ 2024, 23:40 IST
Last Updated 29 ಮೇ 2024, 23:40 IST
ಭಾರತದ ಸೂರ್ಯಕುಮಾರ್ ಯಾದವ್
ಭಾರತದ ಸೂರ್ಯಕುಮಾರ್ ಯಾದವ್   

ದುಬೈ: ಭಾರತ ತಂಡವು ಐಸಿಸಿ ಟಿ20 ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ಬ್ಯಾಟರ್‌ಗಳಲ್ಲಿ ಭಾರತದ ಸೂರ್ಯಕುಮಾರ್ ಯಾದವ್‌, ಬೌಲರ್‌ಗಳಲ್ಲಿ ಇಂಗ್ಲೆಂಡ್‌ನ ಅದಿಲ್‌ ರಶೀದ್‌ ಮೊದಲ ಸ್ಥಾನದಲ್ಲಿದ್ದಾರೆ.

ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ಜೂನ್‌ 2ರಂದು ಟಿ20 ವಿಶ್ವಕಪ್‌ ಟೂರ್ನಿ ಆರಂಭವಾಗಲಿದೆ. ಅದಕ್ಕೂ ಮುನ್ನ ಬಿಡುಗಡೆಯಾದ ಪಟ್ಟಿಯಲ್ಲಿ ಚೊಚ್ಚಲ ವಿಶ್ವಕಪ್‌ ಗೆದ್ದಿದ್ದ ಭಾರತ ತಂಡವು 264 ಪಾಯಿಂಟ್ಸ್‌ಗಳೊಂದಿಗೆ ಮೊದಲ ಸ್ಥಾನ ಕಾಪಾಡಿಕೊಂಡಿದೆ.

ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಎರಡು ಸ್ಥಾನ ಬಡ್ತಿ ಪಡೆದು ನಾಲ್ಕನೇ ಸ್ಥಾನಕ್ಕೆ ಏರಿದೆ. ಇತ್ತೀಚಿನ ಕೆಲ ಟೂರ್ನಿಗಳಲ್ಲಿ ತಂಡವು ಉತ್ತಮ ಪ್ರದರ್ಶನ ತೋರಿದ್ದು ಇದಕ್ಕೆ ಕಾರಣ.

ADVERTISEMENT

2012 ಮತ್ತು 2016 ಆವೃತ್ತಿಯ ಚಾಂಪಿಯನ್‌ ವಿಂಡೀಸ್‌, ದಕ್ಷಿಣ ಆಫ್ರಿಕಾ ವಿರುದ್ಧದ ಟೂರ್ನಿಯಲ್ಲಿ 3-0ರಿಂದ ಗೆಲುವು ಸಾಧಿಸಿತ್ತು. ಹೀಗಾಗಿ, ರ‍್ಯಾಂಕಿಂಗ್‌ನಲ್ಲಿ ನ್ಯೂಜಿಲೆಂಡ್‌ ಮತ್ತು ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿದೆ. 2021ರ ಚಾಂಪಿಯನ್‌ ಆಸ್ಟ್ರೇಲಿಯಾ (257) ಮತ್ತು ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ (254) ಕ್ರಮವಾಗಿ ಎರಡನೇ ಮತ್ತು ಮೂರನೇ ಸ್ಥಾನದಲ್ಲಿವೆ. ನ್ಯೂಜಿಲೆಂಡ್‌ (250), ಪಾಕಿಸ್ತಾನ (244) ಮತ್ತು ದಕ್ಷಿಣ ಆಫ್ರಿಕಾ (244) ಕ್ರಮವಾಗಿ ಐದು, ಆರು ಮತ್ತು ಏಳನೇ ಸ್ಥಾನದಲ್ಲಿವೆ.

ಬ್ಯಾಟರ್‌ಗಳ ಪಟ್ಟಿಯಲ್ಲಿ 861 ಅಂಕ ಪಡೆದಿರುವ ಸೂರ್ಯಕುಮಾರ್‌ ಅವರ ಅಗ್ರಸ್ಥಾನ ಅಭಾದಿತವಾಗಿದೆ. ಅವರ ನಂತರದ ಸ್ಥಾನದಲ್ಲಿ ಇಂಗ್ಲೆಂಡ್‌ನ ಫಿಲ್‌ ಸಾಲ್ಟ್‌ (788), ಪಾಕಿಸ್ತಾನದ ಮೊಹಮ್ಮದ್‌ ರಿಜ್ವಾನ್ (769), ಪಾಕ್‌ ತಂಡದ ನಾಯಕ ಬಾಬರ್‌ ಅಜಂ (761) ಇದ್ದಾರೆ. ಭಾರತದ ಯಶಸ್ವಿ ಜೈಸ್ವಾಲ್‌ (714) ಆರನೇ ಸ್ಥಾನ ಪಡೆದಿದ್ದಾರೆ.

ಬೌಲರ್‌ಗಳಲ್ಲಿ ಅದಿಲ್‌ 722 ಪಾಯಿಂಟ್ಸ್‌ ಪಡೆದು ನಂಬರ್‌ 1 ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ವನಿಂದು ಹಸರಂಗ (687), ಭಾರತದ ಅಕ್ಷರ್‌ ಪಟೇಲ್‌ (660) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಸ್ಪಿನ್ನರ್‌ ರವಿ ಬಿಷ್ಣೋಯಿ ಐದನೇ ಸ್ಥಾನಕ್ಕೇರಿದ್ದಾರೆ. ಆಲ್‌ರೌಂಡರ್‌ ಪಟ್ಟಿಯಲ್ಲೂ ವನಿಂದು ಮೊದಲ ಸ್ಥಾನದಲ್ಲಿದ್ದಾರೆ. ಭಾರತದ ಹಾರ್ದಿಕ್ ಪಾಂಡ್ಯ ಏಳರಿಂದ ಎಂಟನೇ ಸ್ಥಾನಕ್ಕೆ ಜಾರಿದ್ದಾರೆ.

ಭಾರತದ ಸೂರ್ಯಕುಮಾರ್ ಯಾದವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.