ADVERTISEMENT

ಬೂಮ್ರಾ ಮೇಲೆ ಅತಿ ಅವಲಂಬನೆ: ಮೊಹಮ್ಮದ್ ಅಜರ್

ಪಿಟಿಐ
Published 29 ಜೂನ್ 2025, 14:20 IST
Last Updated 29 ಜೂನ್ 2025, 14:20 IST
ಮೊಹಮ್ಮದ್ ಅಜರುದ್ದೀನ್ 
ಮೊಹಮ್ಮದ್ ಅಜರುದ್ದೀನ್    

ಹೈದರಾಬಾದ್: ಭಾರತ ಕ್ರಿಕೆಟ್ ತಂಡವು ವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಮೇಲೆ ವಿಪರೀತ ಅವಲಂಬಿತವಾಗಿದೆ. ಮುಂಬರುವ ಎಜ್‌ಬಾಸ್ಟನ್ ಟೆಸ್ಟ್‌ನಲ್ಲಿ ತಂಡವು ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಕಣಕ್ಕಿಳಿಸಬೇಕು ಎಂದು ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅಭಿಪ್ರಾಯಪಟ್ಟಿದ್ದಾರೆ.

ಲೀಡ್ಸ್‌ನಲ್ಲಿ ಹೋದವಾರ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡವು 5 ವಿಕೆಟ್‌ಗಳಿಂದ ಸೋತಿತ್ತು. ಆ ಪಂದ್ಯದಲ್ಲಿ ಭಾರತ ತಂಡವು ವಿಕೆಟ್ ಗಳಿಕೆ ಮತ್ತು ರನ್‌ ನಿಯಂತ್ರಣಕ್ಕೆ ಬೂಮ್ರಾ ಅವರ ಮೇಲೆ ಅವಲಂಬಿತವಾಗಿದ್ದು ಎದ್ದು ಕಂಡಿತ್ತು.

ಈ ಕುರಿತು ಪಿಟಿಐ ವಿಡಿಯೊಸ್‌ ನಲ್ಲಿ ಮಾತನಾಡಿರುವ ಅವರು, ‘ಬೂಮ್ರಾ ಅವರ ಮೇಲೆ ಅತಿಯಾದ ಅವಲಂಬನೆ ಸಲ್ಲದು. ಅನುಭವಿ ಬೌಲರ್‌ಗಳ ಅಗತ್ಯ ತಂಡಕ್ಕಿದೆ.  ಆದ್ದರಿಂದ ಕುಲದೀಪ್ ಯಾದವ್ ಅವರನ್ನು ಆಡಿಸುವುದು ಸೂಕ್ತ. ಅದರಿಂದ ತಂಡದಲ್ಲಿ ಸಮತೋಲನ ಕಾಪಾಡಿಕೊಳ್ಳಬಹುದು’ ಎಂದರು. 

ADVERTISEMENT

‘ಬ್ಯಾಟರ್‌ಗಳ ಕುಸಿತವೂ ಮೊದಲ ಪಂದ್ಯದ ಸೋಲಿಗೆ ಒಂದು ಕಾರಣ. ಆದ್ದರಿಂದ ಸೂಕ್ತ ಆಟಗಾರರನ್ನು ಆಯ್ಕೆ ಮಾಡುವುದು ಮುಖ್ಯ. ಬೌಲಿಂಗ್ ವಿಭಾಗವು ಕರಾರುವಾಕ್ ಆಗಿರಬೇಕು’ ಎಂದು 62 ವರ್ಷದ ಅಜರುದ್ದೀನ್ ಹೇಳಿದರು. 

‘ಶುಭಮನ್ ಗಿಲ್ ಅವರು ನಾಯಕರಾಗಿ ಆಡಿದ ಮೊದಲ ಪಂದ್ಯ ಇದು. ಅವರ ನಾಯಕತ್ವದ ಕುರಿತು ಈಗಲೇ ಮಾತನಾಡುವುದು ಸಲ್ಲದು. ಅವರಿಗೆ ಇನ್ನೂ ಅವಕಾಶಗಳನ್ನು ನೀಡಬೇಕು. ಬಹಳಷ್ಟು ಸಮಯ ಮತ್ತು ಬೆಂಬಲ ಕೊಡಬೇಕು.  ಸುಮ್ಮನೇ ದೂರುವುದು ಅಥವಾ ಟೀಕಿಸುವುದನ್ನು ಮಾಡಬಾರದು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.