ಭಾರತದ ವಿರಾಟ್ ಕೊಹ್ಲಿ ಅರ್ಷದೀಪ್ ಸಿಂಗ್ ಶುಭಮನ್ ಗಿಲ್ ಮತ್ತು ನಾಯಕ ರೋಹಿತ್ ಶರ್ಮಾ –ಪಿಟಿಐ ಚಿತ್ರ
ದುಬೈ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ ಸತತ ಮೂರನೇ ಬಾರಿ ಫೈನಲ್ ಪ್ರವೇಶಿಸಿ ದಾಖಲೆ ಬರೆಯುವತ್ತ ಚಿತ್ತ ನೆಟ್ಟಿರುವ ಭಾರತ ತಂಡವು ಗುರುವಾರ ಇಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ತನ್ನ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ.
2013ರಲ್ಲಿ ಮಹೇಂದ್ರಸಿಂಗ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ ಆಗಿದ್ದ ತಂಡವು, 2017ರಲ್ಲಿ ಫೈನಲ್‌ನಲ್ಲಿ ಪಾಕಿಸ್ತಾನ ತಂಡದ ಎದುರು ಸೋತಿತ್ತು. ಇದೇ 23ರಂದು ಇಲ್ಲಿ ಭಾರತ ಮತ್ತು ಪಾಕ್ ಮುಖಾಮುಖಿಯಾಗಲಿವೆ.
ಅದಕ್ಕೂ ಮುನ್ನ ಭಾರತವು ನಜ್ಮುಲ್ ಹುಸೇನ್ ಶಾಂತೋ ನಾಯಕತ್ವದ ಬಾಂಗ್ಲಾದ ಸವಾಲನ್ನು ಮೀರಬೇಕಿದೆ. ಗುರುವಾರ ಈ ಪಂದ್ಯದಲ್ಲಿ ಭಾರತ ತಂಡದ ಸಾಮರ್ಥ್ಯದ ಪರೀಕ್ಷೆಯಾಗಲಿದೆ. ಏಕೆಂದರೆ; ಟೂರ್ನಿಗೆ ಬರುವ ಮುನ್ನ ನಡೆದ ಆಟಗಾರರ ಆಯ್ಕೆಯ ಕುರಿತು ಬಹಳಷ್ಟು ಪರ–ವಿರೋಧ ಚರ್ಚೆಗಳು ನಡೆದಿದ್ದವು.
ಅದರಿಂದಾಗಿ; ರೋಹಿತ್ ಶರ್ಮಾ ನಾಯಕತ್ವ ರಂಗೇರುವುದೇ? ಯುವ ಆಟಗಾರ, ಉಪನಾಯಕ ಶುಭಮನ್ ಗಿಲ್ ಗಮನ ಸೆಳೆಯುವರೇ? ವಿರಾಟ್ ಕೊಹ್ಲಿ ತಮ್ಮ ಗತವೈಭವಕ್ಕೆ ಮರಳುವರೇ? ‘ವೇಗದ ಸರದಾರ’ ಜಸ್‌ಪ್ರೀತ್ ಬೂಮ್ರಾ ಅವರ ಗೈರುಹಾಜರಿಯಲ್ಲಿ ತಂಡದ ಬೌಲಿಂಗ್ ಪಡೆ ಒತ್ತಡವನ್ನು ನಿಭಾಯಿಸುವುದೇ? ಎಂಬ ಸವಾಲುಗಳು ಕುತೂಹಲ ಕೆರಳಿಸಿವೆ.
ಹಾಗೆ ನೋಡಿದರೆ; ಏಕದಿನ ಕ್ರಿಕೆಟ್ ಮಾದರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ತಂಡಕ್ಕೆ ಹಾಗೂ ವೈಯಕ್ತಿಕವಾಗಿ ಆಟಗಾರರು ತಮ್ಮ ಸಾಮರ್ಥ್ಯ ಮೆರೆಯಲು ಉತ್ತಮ ವೇದಿಕೆಯಾಗಿದೆ. ವಿರಾಟ್, ರೋಹಿತ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಕಳೆದ ಆರು ತಿಂಗಳುಗಳಿಂದ ವೈಫಲ್ಯಗಳ ಕಹಿಯನ್ನೇ ಹೆಚ್ಚು ಅನುಭವಿಸಿದ್ದಾರೆ. ಆದರೂ ತಮ್ಮ ಸ್ಥಾನಗಳಲ್ಲಿ ಉಳಿದುಕೊಂಡಿದ್ದಾರೆ. ಅವರಿಗೆ ನಿರಂತರ ಅವಕಾಶಗಳು ಸಿಗುತ್ತಿರುವುದು ವಿಶೇಷ. ಇದೀಗ ಚಾಂಪಿಯನ್ಸ್ ಟ್ರೋಫಿ ಗೆಲುವಿನೊಂದಿಗೆ ಹಿಂದಿನ ಎಲ್ಲ ವೈಫಲ್ಯಗಳನ್ನು ಮರೆಸುವ ಅವಕಾಶ ಅವರಿಗೆ ಇದೆ.
ಈಚೆಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಪಂದ್ಯದಲ್ಲಿ ರೋಹಿತ್ ಶತಕ ಬಾರಿಸಿ ತಮ್ಮ ಲಯಕ್ಕೆ ಮರಳಿದ್ದರು. ಅದೇ ಸರಣಿಯಲ್ಲಿ ಗಿಲ್ ಎರಡು ಅರ್ಧಶತಕ ಮತ್ತು ಒಂದು ಶತಕ ಹೊಡೆದಿದ್ದರು. ಮಧ್ಯಮ ಕ್ರಮಾಂಕದಲ್ಲಿ ಕೆ.ಎಲ್. ರಾಹುಲ್ ಅವರ ಮೇಲೆ ಹೆಚ್ಚು ಜವಾಬ್ದಾರಿ ಬೀಳಲಿದೆ. ಅಲ್ಲದೇ ಅವರು ವಿಕೆಟ್ ಕೀಪಿಂಗ್ ಕೂಡ ನಿರ್ವಹಿಸಲಿದ್ದಾರೆ.
ಆಲ್‌ರೌಂಡರ್‌ಗಳಾದ ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜ ಅವರ ಮೇಲೂ ಹೆಚ್ಚಿನ ನಿರೀಕ್ಷೆಗಳಿವೆ. ಈ ಬಾರಿ ತಂಡದಲ್ಲಿ ಒಟ್ಟು ಐವರು ಸ್ಪಿನ್ನರ್‌ಗಳಿದ್ದಾರೆ. ಹರ್ಷಿತ್ ರಾಣಾ ಮತ್ತು ಅರ್ಷದೀಪ್ ಅವರಲ್ಲಿ ಒಬ್ಬರು ಮೊಹಮ್ಮದ್ ಶಮಿಯೊಂದಿಗೆ ವೇಗದ ವಿಭಾಗವನ್ನು ನಿಭಾಯಿಸುವ ಸಾಧ್ಯತೆ ಇದೆ. ಕುಲದೀಪ್ ಯಾದವ್ ಅಥವಾ ವರುಣ ಚಕ್ರವರ್ತಿಯವರಲ್ಲಿ ಒಬ್ಬರಿಗೆ ಅವಕಾಶ ಸಿಗಬಹುದು.
ಬಾಂಗ್ಲಾ ತಂಡವು ಪ್ರಮುಖ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರಿಲ್ಲದೇ ಕಣಕ್ಕಿಳಿಯಬೇಕಿದೆ. ಅನುಭವಿಗಳಾದ ಸೌಮ್ಯ ಸರ್ಕಾರ್, ಮುಷ್ಫಿಕುರ್ ರಹೀಮ್, ವೇಗಿ ಮುಸ್ತಫಿಜುರ್ ರೆಹಮಾನ್ ಅವರ ಮೇಲೆ ತಂಡವು ಹೆಚ್ಚು ಅವಲಂಬಿತವಾಗಿದೆ.
ಭಾರತ:
ರೋಹಿತ್ ಶರ್ಮಾ (ನಾಯಕ) ಶುಭಮನ್ ಗಿಲ್ ವಿರಾಟ್ ಕೊಹ್ಲಿ ಶ್ರೇಯಸ್ ಅಯ್ಯರ್ ಕೆ.ಎಲ್. ರಾಹುಲ್ ರಿಷಭ್ ಪಂತ್ ಹಾರ್ದಿಕ್ ಪಾಂಡ್ಯ ಅಕ್ಷರ್ ಪಟೇಲ್ ವಾಷಿಂಗ್ಟನ್ ಸುಂದರ್ ಕುಲದೀಪ್ ಯಾದವ್ ಹರ್ಷಿತ್ ರಾಣಾ ಮೊಹಮ್ಮದ್ ಶಮಿ ಅರ್ಷದೀಪ್ ಸಿಂಗ್ ರವೀಂದ್ರ ಜಡೇಜ ವರುಣ ಚಕ್ರವರ್ತಿ
ಬಾಂಗ್ಲಾದೇಶ: ನಜ್ಮುಲ್ ಹುಸೇನ್ ಶಾಂತೊ (ನಾಯಕ) ಸೌಮ್ಯ ಸರ್ಕಾರ್ ತಂಜೀದ್ ಹಸನ್ ತವಾಹಿದ್ ಹೃದಯ್ ಮುಷ್ಫಿಕುರ್ ರಹೀಮ್ ಮೊಹಮ್ಮದ್ ಮೆಹಮೂದ್ ಉಲ್ಲಾ ಜಕೀರ್ ಅಲಿ ಅನಿಕ್ ಮೆಹದಿ ಹಸನ್ ಮಿರಾಜ್ ರಿಷದ್ ಹುಸೇನ್ ತಸ್ಕಿನ್ ಅಹಮದ್ ಮುಸ್ತಫಿಜುರ್ ರೆಹಮಾನ್ ಪರ್ವೇಜ್ ಹೊಸಾಯ್ ಎಮಾನ್ ನಸೂಮ್ ಅಹಮದ್ ತಂಜೀಮ್ ಹಸನ್ ಸಕೀಬ್ ನಹೀದ್ ರಾಣಾ. ಪಂದ್ಯ ಆರಂಭ: ಮಧ್ಯಾಹ್ನ 2.30 ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್. ಜಿಯೊಹಾಟ್‌ಸ್ಟಾರ್ ಆ್ಯಪ್
ಭಾರತ ತಂಡವು ಎ ಗುಂಪಿನಲ್ಲಿ ಮೂರು ತಂಡಗಳನ್ನು ಎದುರಿಸಲಿದೆ. ಬಾಂಗ್ಲಾ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಭಾರತಕ್ಕೆ ಸವಾಲೊಡ್ಡಲಿವೆ. ಮೂರು ತಂಡಗಳೂ ಉತ್ತಮ ಆಟಗಾರರನ್ನು ಒಳಗೊಂಡಿವೆ. ಗುಂಪಿನಲ್ಲಿ ಮೊದಲ ಎರಡು ಸ್ಥಾನ ಪಡೆದ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಆದ್ದರಿಂದ ಗುಂಪು ಹಂತವು ರೋಚಕವಾಗುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.