ADVERTISEMENT

Lords Test: ಹೋರಾಡಿ ಸೋತ ಗಿಲ್‌ ಬಳಗ; ಫಲ ನೀಡದ ಬಾಲಗೋಂಚಿಗಳ ಹೋರಾಟ

ರವೀಂದ್ರ ಜಡೇಜ ಅಜೇಯ ಅರ್ಧಶತಕ l ಸರಣಿಯಲ್ಲಿ ಇಂಗ್ಲೆಂಡ್‌ ತಂಡಕ್ಕೆ 2–1 ಮುನ್ನಡೆ

ಏಜೆನ್ಸೀಸ್
Published 14 ಜುಲೈ 2025, 18:36 IST
Last Updated 14 ಜುಲೈ 2025, 18:36 IST
   
ಜಡೇಜ ಅಜೇಯ ಅರ್ಧಶತಕ l ಕೆಳ ಕ್ರಮಾಂಕದ ಆಟಗಾರರ ಪ್ರತಿರೋಧ

ಲಂಡನ್‌: ನಿಧಾನಗತಿಯಲ್ಲಿ ಸಾಗಿದ ಹೋರಾಟ ಮಧ್ಯಾಹ್ನದ ಬಳಿಕ ಜೀವಕಳೆ ಪಡೆಯಿತು. ಸ್ವಲ್ಪ ರೋಚಕತೆಯತ್ತಲೂ ಸಾಗಿತು. ಮೂರನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದ ಅಂತಿಮ ದಿನವಾದ ಸೋಮವಾರ ಭಾರತ ಕೊನೆಯವರೆಗೂ ಹೋರಾಟ ನಡೆಸಿತು. ಆದರೆ, ಕೆಚ್ಚೆದೆಯಿಂದ ಆಡಿದ ಇಂಗ್ಲೆಂಡ್‌ ತಂಡ 22 ರನ್‌ಗಳಿಂದ ಜಯಶಾಲಿಯಾಯಿತು.

ಆತಿಥೇಯರು ಐದು ಟೆಸ್ಟ್‌ಗಳ ಸರಣಿಯಲ್ಲಿ 2–1 ಮುನ್ನಡೆ ಪಡೆದರು. 

ತೀವ್ರ ಪೈಪೋಟಿ ಕಂಡಿದ್ದ ಈ ಟೆಸ್ಟ್‌ನಲ್ಲಿ 4 ವಿಕೆಟ್‌ಗೆ 58 ರನ್‌ಗಳೊಡನೆ ಕೊನೆಯ ದಿನದಾಟ ಮುಂದುವರಿಸಿದ ಭಾರತಕ್ಕೆ ಇನ್ನೂ 135 ರನ್ ಗಳಿಸಬೇಕಾಗಿತ್ತು. ಭಾರತದ ಆಸೆ ಕೆ.ಎಲ್‌.ರಾಹುಲ್ ಮತ್ತು ರಿಷಭ್‌ ಪಂತ್‌ ಅವರ ಆಟದ ಮೇಲಿತ್ತು. ಇವರಿಬ್ಬರು ಕೊನೆಯ ಪರಿಣತ ಬ್ಯಾಟರ್‌ಗಳಾಗಿದ್ದರು. ಆದರೆ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್ (48ಕ್ಕೆ3) ಮತ್ತು ತಮ್ಮ ವೇಗದಿಂದಲೇ ಖ್ಯಾತಿ ಹೊಂದಿರುವ ಜೋಫ್ರಾ ಆರ್ಚರ್‌ (55ಕ್ಕೆ3) ಅವರು ತಮ್ಮ ತಂಡವನ್ನು ದೊಡ್ಡ ಗೆಲುವಿನ ಬಳಿ ತಲುಪಿಸಿದರು. ಭೋಜನದ ವೇಳೆಗೆ 7 ವಿಕೆಟ್‌ಗೆ 82 ರನ್‌ಗಳೊಡನೆ ಭಾರತ ದಯನೀಯ ಸ್ಥಿತಿಯಲ್ಲಿತ್ತು.

ADVERTISEMENT

ಆದರೆ ಭಾರತ ಸುಲಭವಾಗಿ ಸೋಲೊಪ್ಪಲಿಲ್ಲ. ಹಲವು ಹೋರಾಟಗಳ ಅನುಭವಿ ರವೀಂದ್ರ ಜಡೇಜ (ಅಜೇಯ 61, 181 ಎಸೆತ) ಅವರು ಕೆಚ್ಚೆದೆಯಿಂದ ಆಡಿ ಮೂರು ಜೊತೆಯಾಟಗಳಲ್ಲಿ ಭಾಗಿಯಾದರು. ‘ಕ್ರಿಕೆಟ್‌ನ ತವರು ನೆಲ’ದ ಪ್ರೇಕ್ಷಕರಲ್ಲಿ ರೋಮಾಂಚನ ಮೂಡಿಸಿದರು.

ಎಂಟನೇ ವಿಕೆಟ್‌ಗೆ ನಿತೀಶ್ ಕುಮಾರ್ ರೆಡ್ಡಿ ಜೊತೆ 30 ರನ್ ಸೇರಿಸಿದರು. ಈ ಜೊತೆ ಯಾಟ ಲಂಚ್‌ಗೆ ಕೆಲವೇ ಕ್ಷಣ ಮೊದಲು ಕೊನೆಗೊಂಡಿತು. ಆ ಹಂತದಲ್ಲಿ ಸೋಲಿನ ಕ್ಷಣಗಣನೆ ಆರಂಭವಾಗುವಂತೆ ಕಂಡಿತು. ಏಕೆಂದರೆ ಭಾರತದ ಬಳಿ ಎರಡು ವಿಕೆಟ್‌ ಗಳಿದ್ದು, ಗುರಿ 81 ರನ್‌ಗಳಷ್ಟು ದೂರವಿತ್ತು.

ಸತತ ನಾಲ್ಕು ಸಲ ಸೊನ್ನೆ ಸುತ್ತಿದ್ದ ಜಸ್‌ಪ್ರೀತ್ ಬೂಮ್ರಾ ಉಳಿದ ಇಬ್ಬರಲ್ಲಿ ಒಬ್ಬರಾಗಿದ್ದರು. ಗೆಲುವಿನ ನಿರೀಕ್ಷೆಯಲ್ಲಿ ಮೊದಲ ಅವಧಿಯಂತೆ  ಬೆಂಕಿಯುಂಡೆಗಳಂಥ ಶಾರ್ಟ್‌ಪಿಚ್‌ಗಳಿಂದ ಬಾಲಂಗೋಚಿಗಳನ್ನು ಇಂಗ್ಲೆಂಡ್‌ ವೇಗಿಗಳು ಕಾಡಿದರು. ಆದರೆ ಬೂಮ್ರಾ ಅವುಗಳನ್ನು ದೃಢ ನಿರ್ಧಾರದಿಂದ, ಅಷ್ಟೇ ವಿಶ್ವಾಸದಿಂದ ನಿಭಾಯಿಸಿದರು. ಪ್ರೇಕ್ಷಕ ವರ್ಗದಲ್ಲಿ ಬಹಳಷ್ಟು ಸಂಖ್ಯೆಯಲ್ಲಿದ್ದ ಭಾರತೀಯರೂ ಹುರಿದುಂಬಿಸಿದರು. ಎಲ್ಲ ತಂತ್ರಗಳನ್ನು ಬಳಸಿದ ಇಂಗ್ಲೆಂಡ್‌ ಹತಾಶೆಯಲ್ಲಿದ್ದಂತೆ ಕಂಡಿತು.

ಬೂಮ್ರಾ 104 ನಿಮಿಷ ಬ್ಯಾಟ್ ಮಾಡಿದರು. ಸ್ಟೋಕ್ಸ್‌ ಬೌಲಿಂಗ್‌ನಲ್ಲಿ ಮಹತ್ವಾಕಾಂಕ್ಷಿ ಪುಲ್‌ ಹೊಡೆತಕ್ಕೆ ಹೋಗಿ ಮಿಡ್‌ಆನ್‌ನಲ್ಲಿ ಕ್ಯಾಚಿತ್ತರು. ಆದರೆ ಆಗಲೂ ಭಾರತ ಶರಣಾಗಲಿಲ್ಲ. ಜಡೇಜ ಜೊತೆಗೂಡಿದ ಸಿರಾಜ್ ನಿಧಾನವಾಗಿ ಗುರಿಯತ್ತ ಸಾಗಿದರು. ಈ ವೇಳೆ ಜೋಫ್ರಾ ಆರ್ಚರ್‌ ಬೌಲಿಂಗ್‌ನಲ್ಲಿ ಚೆಂಡು ಸಿರಾಜ್ ಅವರ ತೋಳಿಗೆ ಅಪ್ಪಳಿಸಿತು. ಆದರೂ ಆಟ ಮುಂದುವರಿಸಿದರು. ಜಡೇಜ ಅಸಾಧಾರಣ ಗೆಲುವನ್ನು ಕೊಡಿಸುವ ಆಸೆ ಮೂಡಿತ್ತು. ಆದರೆ ಬೆರಳು ಮುರಿದುಕೊಂಡು ಹೆಚ್ಚಿನ ಅವಧಿಯಲ್ಲಿ ಹೊರಗಿದ್ದ ಸ್ಪಿನ್ನರ್ ಶೋಯೆಬ್‌ ಬಶೀರ್‌ ಭಾರತದ ಪ್ರತಿರೋಧವನ್ನು ಅಂತಿಮವಾಗಿ ಕೊನೆಗೊಳಿಸಿದರು. ಭಾರತ 170 ರನ್‌ಗಳಿಗೆ ಆಲೌಟ್‌ ಆಯಿತು.

ತಮ್ಮ ಆಕ್ರಮಣಕಾರಿ ದಾಳಿಯಿಂದ ಬೆನ್‌ ಸ್ಟೋಕ್ಸ್‌ ಮೆಚ್ಚುಗೆಗೆ ಪಾತ್ರರಾಗಿರುವ ಜೋಫ್ರಾ ಆರ್ಚರ್‌ ಅವರು ನಾಯಕನ ವಿಶ್ವಾಸ ಹುಸಿಗೊಳಿಸಲಿಲ್ಲ. 30 ವರ್ಷದ ವೇಗದ ಬೌಲರ್‌ ಪರಿಣಾಮಕಾರಿ ಎಸೆತಗಳನ್ನು ಪ್ರಯೋಗಿಸಿದರು. ಅದೂ ಕರಾರುವಾಕ್‌ ಆಗಿ. ದಿನದ ಎರಡನೇ ಓವರಿನಲ್ಲಿ ಅಮೋಘ ಎಸೆತದಲ್ಲಿ ಆಫ್‌ ಸ್ಟಂಪ್ ಹಾರಿಸಿ ಪಂತ್ ಅವರನ್ನು ಔಟ್‌ ಮಾಡಿದರು. ಪಿಚ್‌ ಆದ ನಂತರ ಚೆಂಡು ಚೂರು ತಿರುವು ಪಡೆದು ಪಂತ್‌ ಅವರನ್ನು ಗಲಿಬಿಲಿಗೊಳಿಸಿತು.

ಎಲ್ಲಾ ಮಾದರಿಗಳಲ್ಲಿ ಶ್ರೇಷ್ಠ ಆಲ್‌ರೌಂಡರ್ ಎನಿಸಿರುವ ಸ್ಟೋಕ್ಸ್‌ ಕೊನೆ ದಿನ ಬೌಲಿಂಗ್ ಹೊಣೆ ಮುಂದುವರಿಸಿದರು. ಅವರು ರಾಹುಲ್‌ ವಿಕೆಟ್‌ ಪಡೆದು ಪ್ರವಾಸಿ ತಂಡಕ್ಕೆ ಬಲವಾದ ಪೆಟ್ಟು ನೀಡಿದರು.ಜೋಫ್ರಾ, ತಮ್ಮದೇ ಬೌಲಿಂಗ್‌ನಲ್ಲಿ ಒಂದೇ ಕೈಲಿ ಹಿಡಿದ ಅಮೋಘ ಕ್ಯಾಚಿಗೆ ವಾಷಿಂಗ್ಟನ್‌ ಸುಂದರ್ ನಿರ್ಗಮಿಸಬೇಕಾಯಿತು. ಈ ವೇಳೆ ಇಂಗ್ಲೆಂಡ್‌ಗೆ ಸ್ಪಷ್ಟ ಮೇಲುಗೈ ಪಡೆಯಿತು.

ಅತಿಯಾದ ಆವೇಶ: ಸಿರಾಜ್‌ಗೆ ದಂಡ

ಲಂಡನ್‌: ಲಾರ್ಡ್ಸ್‌ ಟೆಸ್ಟ್‌ ಪಂದ್ಯದ ನಾಲ್ಕನೇ ದಿನವಾದ ಭಾನುವಾರ ಇಂಗ್ಲೆಂಡ್‌ನ ಆರಂಭ ಆಟಗಾರ ಬೆನ್‌ ಡಕೆಟ್‌ ಅವರನ್ನು ಔಟ್‌ ಮಾಡಿದ ನಂತರ ಅತಿಯಾದ ಆವೇಶ ಪ್ರದರ್ಶಿಸಿದ್ದಕ್ಕೆ ಭಾರತದ ವೇಗದ ಬೌಲರ್ ಮೊಹಮ್ಮದ್‌ ಸಿರಾಜ್ ಅವರಿಗೆ ಸೋಮವಾರ ಪಂದ್ಯ ಸಂಭಾವನೆಯ ಶೇ 15 ರಷ್ಟು ದಂಡ ವಿಧಿಸಲಾಗಿದೆ. ಒಂದು ಡಿಮೆರಿಟ್‌ ಪಾಯಿಂಟ್‌ ಕೂಡ ಹಾಕಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.