ADVERTISEMENT

ಏಷ್ಯಾಕಪ್: ಭಾರತ ಪಾಕ್ ಪಂದ್ಯ ತಡೆ ಅಸಾಧ್ಯ; ಕ್ರೀಡಾ ಸಚಿವಾಲಯ

ಪಿಟಿಐ
Published 21 ಆಗಸ್ಟ್ 2025, 12:33 IST
Last Updated 21 ಆಗಸ್ಟ್ 2025, 12:33 IST
   

ಮವದೆಹಲಿ: ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಣ ದ್ವಿಪಕ್ಷೀಯ ಸರಣಿಗಳನ್ನು ಆಯೋಜಿಸುವುದಿಲ್ಲ. ತಟಸ್ಥ ಸ್ಥಳಗಳಲ್ಲಿಯೂ ಆಡಿಸುವುದಿಲ್ಲ. ಆದರೆ ಬಹುತಂಡಗಳ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ, ಪಾಕ್ ಮುಖಾಮುಖಿಯನ್ನು ತಡೆಯುವುದು ಸಾಧ್ಯವಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವಾಲಯ ಸ್ಪಷ್ಟಪಡಿಸಿದೆ.

ಭಾರತದ ಅಂತರರಾಷ್ಟ್ರೀಯ ಸರಣಿಗಳಿಗೆ ಸಂಬಂಧಿಸಿದಂತೆ ಪಾಕಿಸ್ತಾನವನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ನೀತಿಯನ್ನು ಸಚಿವಾಲಯ ಬಿಡುಗಡೆ ಮಾಡಿದೆ. ಇದು ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದೆ.

‘ಪಾಕಿಸ್ತಾನ ತಂಡ ಇರುವ ಕ್ರೀಡಾಕೂಟಗಳಲ್ಲಿ ಭಾರತದ ಭಾಗವಹಿಸುವಿಕೆಯ ಕುರಿತ ನೀತಿಯು ಸ್ಪಷ್ಟವಾಗಿದೆ. ಭಾರತ ತಂಡಗಳು ಪಾಕಿಸ್ತಾನದಲ್ಲಿ ನಡೆಯುವ ಟೂರ್ನಿಗಳಲ್ಲಿ ಭಾಗವಹಿಸುವುದಿಲ್ಲ. ಅಲ್ಲದೇ ಪಾಕ್ ತಂಡಗಳು ಭಾರತಕ್ಕೆ ಬಂದು ಆಡಲು ಅನುಮತಿಯನ್ನೂ ನೀಡುವುದಿಲ್ಲ’ ಎಂದು ಹೇಳಿದ್ದಾರೆ. 

ADVERTISEMENT

ಆದರೂ, ಬಹುತಂಡಗಳ ಸರಣಿಗಳ ಮೇಲೆ ಈ ನೀತಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸಚಿವಾಲಯ ಹೇಳಿದೆ.

‘ಬಹುಪಕ್ಷೀಯ ಸರಣಿಯಾಗಿರುವ ಏಷ್ಯಾ ಕಪ್‌ನಲ್ಲಿ ಭಾರತೀಯ ಕ್ರಿಕೆಟ್ ತಂಡವು ಆಡುವುದನ್ನು ನಾವು ತಡೆಯುವುದಿಲ್ಲ’ ಎಂದು ಸಚಿವಾಲಯ ಹೇಳಿದೆ.

‘ದ್ವಿಪಕ್ಷೀಯ ಕ್ರೀಡಾಕೂಟಗಳಲ್ಲಿ ಭಾರತದ ನೆಲದಲ್ಲಿ ಆಡಲು ಪಾಕಿಸ್ತಾನಕ್ಕೆ ಅನುಮತಿಸಲಾಗುವುದಿಲ್ಲ. ಆದರೆ, ನಾವು ಒಲಿಂಪಿಕ್ ಚಾರ್ಟರ್‌ಗೆ ಬದ್ಧರಾಗಿರುವುದರಿಂದ ಬಹುಪಕ್ಷೀಯ ಸರಣಿಗಳಲ್ಲಿ ಭಾಗವಹಿಸದಂತೆ ತಂಡವನ್ನು ತಡೆಯುವುದಿಲ್ಲ’ಎಂದು ಅದು ಹೇಳಿದೆ.

ಯಾವುದೇ ಬಹುಪಕ್ಷೀಯ ಸರಣಿಗಳಿಗಾಗಿ ಭಾರತ ತಂಡಗಳು ಪಾಕಿಸ್ತಾನಕ್ಕೆ ಪ್ರಯಾಣಿಸಲು ಅನುಮತಿಸಲಾಗುತ್ತದೆಯೇ ಎಂದು ಕೇಳಿದಾಗ, ಆ ಸನ್ನಿವೇಶದಲ್ಲಿ, ಏನನ್ನಾದರೂ ನಿರ್ಧರಿಸುವ ಮೊದಲು ನಾವು ಪರಿಸ್ಥಿತಿಯನ್ನು ಪರಿಶೀಲಿಸುತ್ತೇವೆ ಎಂದು ಸಚಿವಾಲಯ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

‘ಬಹುತಂಡಗಳ ಟೂರ್ನಿಗಳಲ್ಲಿಯೂ ನಮ್ಮ ಅಥ್ಲೀಟ್‌ಗಳನ್ನು ತೊಂದರೆಗೆ ಸಿಲುಕಿಸುವುದಿಲ್ಲ. ಎಷ್ಟೇ ಆದರೂ ಪಾಕಿಸ್ತಾನವು ಕೊಂಪೆಯೆಂದು ಘೋಷಿಸಲು ಹಿಂಜರಿಕೆ ಏನಿಲ್ಲ ಮತ್ತು ಅದು ಫಳಫಳ ಹೊಳೆಯುವ ಮರ್ಸಿಡೀಸ್ ಕಾರಿನಂತಿರುವ ಭಾರತಕ್ಕೆ ಕೊಳೆ ಅಂಟಿಸಬಹುದು’ ಎಂದು ಅಧಿಕಾರಿ ಹೇಳಿದರು. 

ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ವಿವರವಾದ ಕ್ರೀಡಾ ಪಾಲಿಸಿಯನ್ನು ಪ್ರಕಟಿಸಲಾಗಿದೆ. ಅದರಲ್ಲಿ‍; ‘ಈಚೆಗೆ ಪೆಹಲ್ಗಾಮ್‌ನಲ್ಲಿ ನಡೆದಿದ್ದ ಭಯೋತ್ಪಾದನಾ ದಾಳಿಯಲ್ಲಿ 26 ಜನರು ಹತರಾಗಿದ್ದರು. ಆ ದಾಳಿಯು ಪಾಕ್‌ ಪ್ರಚೋದಿತವಾಗಿದೆ. ಆದ್ದರಿಂದ ನೆರೆಯ ದೇಶವು ಅಪರಾಧಿಯಾಗಿದೆ. ಆ ದಾಳಿಗೆ ಪ್ರತಿಕಾರವಾಗಿ ಭಾರತವು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ನಡೆಸಿತ್ತು‘ ಎಂದು ಉಲ್ಲೇಖಿಸಿದೆ.

‘ಅಮೆರಿಕದಲ್ಲಿ ಆಯೋಜನೆಗೊಂಡರೂ ಭಾರತ ಮತ್ತು ಪಾಕ್ ನಡುವಣ ದ್ವಿಪಕ್ಷೀಯ ಸರಣಿ ನಡೆಸುವುದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. 

ಭಾರತವು 2030ರಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಮತ್ತು 2036ರಲ್ಲಿ ಒಲಿಂಪಿಕ್ ಕೂಟಕ್ಕೆ ಆತಿಥ್ಯ ವಹಿಸುವ ಅವಕಾಶಕ್ಕಾಗಿ ಬಿಡ್‌ ಮಾಡಿದೆ. ವಿಶ್ವಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸುವ ದೇಶಗಳು ಎಲ್ಲರನ್ನೂ ಒಳಗೊಳ್ಳಬೇಕಿರುವುದು ಒಲಿಂಪಿಕ್ ಆಂದೋಲನದ ಧ್ಯೇಯವಾಗಿದೆ.

ಅದಕ್ಕಾಗಿಯೇ ಮುಂದಿನ ತಿಂಗಳು ಬಿಹಾರದಲ್ಲಿ ನಡೆಯಲಿರುವ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಆಡಲು ಪಾಕಿಸ್ತಾನದ ಆಟಗಾರರಿಗೆ ಕೇಂದ್ರ ಸರ್ಕಾರವು ವೀಸಾ ನೀಡಲು ಸಮ್ಮತಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.