ADVERTISEMENT

IND vs SA 3rd T20: ಧರ್ಮಶಾಲಾ ಮೈದಾನದ ‘ಪಿಚ್‌ ರಿಪೋರ್ಟ್‘ ಹೀಗಿದೆ..

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಡಿಸೆಂಬರ್ 2025, 10:08 IST
Last Updated 14 ಡಿಸೆಂಬರ್ 2025, 10:08 IST
   

ಧರ್ಮಶಾಲಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ–20 ಸರಣಿಯ ಮೂರನೇ ಪಂದ್ಯವು ಭಾನುವಾರ (ಡಿ.14) ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್‌ ಅಸೋಸಿಯೇಷನ್‌ ಮೈದಾನದಲ್ಲಿ ನಡೆಯಲಿದೆ.

ಹಿಮಾಲಯದ ತಪ್ಪಲಿನಲ್ಲಿರುವ ಕ್ರೀಡಾಂಗಣವು ಬ್ಯಾಟಿಂಗ್‌ ಸ್ನೇಹಿ ಪಿಚ್‌ ಆಗಿದ್ದು, 3ನೇ ಟಿ–20 ಪಂದ್ಯದಲ್ಲಿ ರನ್‌ ಹೊಳೆ ಹರಿಯುವ ನಿರೀಕ್ಷೆಯಿದೆ. ಹಿಬ್ಬನಿಯ ಕಾರಣ, ಪಂದ್ಯದಲ್ಲಿ ಟಾಸ್‌ ಮಹತ್ತರ ಪಾತ್ರವಹಿಸಲಿದೆ.

ಇದುವರೆಗೂ ಧರ್ಮಶಾಲಾ ಮೈದಾನದಲ್ಲಿ ಟೀಂ ಇಂಡಿಯಾಗೆ ಮಿಶ್ರಫಲ ದೊರಕಿದೆ. ಈ ಮೈದಾನದಲ್ಲಿ ಒಟ್ಟು 2 ಟೆಸ್ಟ್‌ ಪಂದ್ಯಗಳು ಜರುಗಿದ್ದು, 2ರಲ್ಲೂ ಭಾರತ ಗೆಲುವು ಕಂಡಿದೆ. 5 ಏಕದಿನ ಪಂದ್ಯಗಳನ್ನು ಆಡಿದ್ದು 3ರಲ್ಲಿ ಗೆಲವು ಸಾಧಿಸಿದೆ.

ADVERTISEMENT

ಧರ್ಮಶಾಲಾ ಮತ್ತು ಚುಟುಕು ಕ್ರಿಕೆಟ್‌

ಧರ್ಮಶಾಲಾ ಮೈದಾನವು ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ದೇಶಿ ಟೂರ್ನಿಯಲ್ಲಿ ಹಿಮಾಚಲ ಪ್ರದೇಶದ ತವರು ಮೈದಾನವಾಗಿದೆ.

ಇದುವರೆಗೂ ಈ ಮೈದಾನದಲ್ಲಿ 11 ಅಂತರರಾಷ್ಟ್ರೀಯ ಟಿ–20 ಪಂದ್ಯಗಳು ಜರುಗಿದ್ದು, ಮೊದಲು ಬ್ಯಾಟಿಂಗ್‌ ಮಾಡಿದ ತಂಡ 4 ಬಾರಿ ಹಾಗೂ ಗುರಿ ಬೆನ್ನತ್ತಿದ ತಂಡವು 6 ಬಾರಿ ಗೆಲುವು ಸಾಧಿಸಿದೆ. ಒಂದು ಪಂದ್ಯ ರದ್ದಾಗಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ತಂಡದ ಸರಾಸರಿ 137 ರನ್ ಇದ್ದರೆ, ಚೇಸಿಂಗ್‌ ವೇಳೆ 128 ರನ್ ಸರಾಸರಿ ಇದೆ.

ಭಾರತ ತಂಡವು ಈ ಮೈದಾನದಲ್ಲಿ 3 ಪಂದ್ಯಗಳನ್ನು ಆಡಿದ್ದು, 2ರಲ್ಲಿ ಗೆಲುವು ಸಾಧಿಸಿದ್ದರೆ, 1 ಪಂದ್ಯದಲ್ಲಿ ಸೋತಿದೆ. 2022ರಲ್ಲಿ ಈ ಕ್ರೀಡಾಂಗಣದಲ್ಲಿ ಭಾರತ ತಂಡವು ಕೊನೆಯ ಅಂತರರಾಷ್ಟ್ರೀಯ ಟಿ–20 ಪಂದ್ಯವನ್ನು ಆಡಿದ್ದು, ಶ್ರೀಲಂಕಾ ವಿರುದ್ಧ ಜಯ ಗಳಿಸಿತ್ತು.

ಧರ್ಮಶಾಲಾ ಮೈದಾನದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾವು 200 ರನ್‌ ಗಳಿಸಿರುವುದು ಅತಿದೊಡ್ಡ ಮೊತ್ತವಾಗಿದೆ.

2015ರಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತಂಡವು ರೋಹಿತ್‌ ಶರ್ಮ ಶತಕದ ನೆರವಿನಿಂದ 5 ವಿಕೆಟ್‌ ನಷ್ಟಕ್ಕೆ 199 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾವು 7 ವಿಕೆಟ್‌ಗಳ ಜಯ ಗಳಿಸಿತ್ತು.

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ–20 ಸರಣಿಯು 1–1ರಲ್ಲಿ ಸಮಬಲವಾಗಿದ್ದು, ಭಾರತವು ಪಂದ್ಯ ಗೆಲ್ಲುವ ವಿಶ್ವಾಸದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.