ADVERTISEMENT

ಋತುರಾಜ್‌– ಶುಭಮನ್‌ ಗಿಲ್‌ ಜುಗಲ್‌ಬಂದಿ; 2–0 ಮುನ್ನಡೆ ಸಾಧಿಸಿದ ಭಾರತ ‘ಎ’

ಶ್ರೀಕಾಂತ ಕಲ್ಲಮ್ಮನವರ
Published 8 ಜೂನ್ 2019, 18:27 IST
Last Updated 8 ಜೂನ್ 2019, 18:27 IST
ಬೆಳಗಾವಿಯ ಆಟೊನಗರದಲ್ಲಿ ಶನಿವಾರ ನಡೆದ ಎರಡನೇ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ‘ಎ’ ತಂಡದ ಶುಭಮನ್‌ ಗಿಲ್‌ ಶತಕ ಸಿಡಿಸಿದರು
ಬೆಳಗಾವಿಯ ಆಟೊನಗರದಲ್ಲಿ ಶನಿವಾರ ನಡೆದ ಎರಡನೇ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ‘ಎ’ ತಂಡದ ಶುಭಮನ್‌ ಗಿಲ್‌ ಶತಕ ಸಿಡಿಸಿದರು   

ಬೆಳಗಾವಿ: ಮೊದಲ ಏಕದಿನ ಪಂದ್ಯ ಗೆದ್ದ ಆತ್ಮವಿಶ್ವಾಸದಲ್ಲಿಯೇ ಮೈದಾನಕ್ಕಿಳಿದ ಭಾರತ ‘ಎ’ ತಂಡದ ಆಟಗಾರರು ಎರಡನೇ ಪಂದ್ಯವನ್ನೂ ಗೆದ್ದು ಬೀಗಿದರು. ಶ್ರೀಲಂಕಾ ‘ಎ’ ತಂಡ ನೀಡಿದ್ದ 243 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಅವರು, ಯಾವುದೇ ವಿಕೆಟ್‌ ನಷ್ಟವಿಲ್ಲದೇ ಕೇವಲ 33.3 ಓವರ್‌ಗಳಲ್ಲಿ ತಲುಪಿ ಜಯದ ನಗೆ ಬೀರಿದರು. ಐದು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳ ಸರಣಿಯಲ್ಲಿ 2–0 ಅಂತರದಿಂದ ಮುನ್ನಡೆ ಸಾಧಿಸಿದರು.

ಇಲ್ಲಿನ ಆಟೊನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಶನಿವಾರ ಪಂದ್ಯ ನಡೆಯಿತು. ಟಾಸ್‌ ಗೆದ್ದ ಭಾರತ ‘ಎ’ ತಂಡದ ನಾಯಕ ಇಶಾನ್‌ ಕಿಶನ್‌ ಅವರು ಫೀಲ್ಡಿಂಗ್‌ ಆಯ್ದುಕೊಂಡಿದ್ದರು. ತಮ್ಮ ನಾಯಕ ತೆಗೆದುಕೊಂಡ ನಿರ್ಧಾರ ಸರಿಯಾದುದು ಎನ್ನುವಂತೆ ಕರಾರುವಾಕ್ಕವಾಗಿ ಬೌಲಿಂಗ್‌ ನಡೆಸಿದ ಬೌಲರ್‌ಗಳು, ಶ್ರೀಲಂಕಾದ ಆರಂಭಿಕ ಬ್ಯಾಟ್ಸ್‌ಮನ್‌ಗಳು ತಳವೂರದಂತೆ ನೋಡಿಕೊಂಡರು.

ತಂಡದ ಮೊತ್ತ 6 ರನ್‌ಗಳಿದ್ದಾಗಲೇ ಮೊದಲ ವಿಕೆಟ್‌ ಕಬಳಿಸಿದರು. ನಿರೋಶಾನ್‌ ಡಿಕ್ವೆಲ್‌ (5) ಕಟ್‌ ಮಾಡಿದ್ದ ಬಾಲ್‌ ಕ್ಯಾಚ್‌ ಹಿಡಿದ ಬೌಲರ್‌ ಇಶಾನ್‌ ಪೊರೆಲ್‌ ಪೆವಿಲಿಯನ್‌ ದಾರಿ ತೋರಿಸಿದರು. ನಂತರದ ಓವರ್‌ನಲ್ಲಿ ಭಾನುಕಾ ರಾಜಪಕ್ಸ (0) ಅವರನ್ನು ತುಷಾರ್‌ ದೇಶಪಾಂಡೆ ಔಟ್‌ ಮಾಡಿದರು. ಭಾನುಕಾ ಟಚ್‌ ಮಾಡಿದ್ದ ಬಾಲ್‌ ಅನ್ನು ದೀಪಕ್‌ ಹೂಡಾ ಕ್ಯಾಚ್‌ ಹಿಡಿದಿದ್ದರು. ಸಡೇರಾ ಸಮರವಿಕ್ರಮ (6), ಅಶಾನ್‌ ಪ್ರಿಯಂಜನ್‌ (5), ಕಮಿಂಡು ಮೆಂಡೀಸ್‌ (10) ದಾಸೂನ್‌ ಶನಕ (20) ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್‌ ನತ್ತ ಪರೇಡ್‌ ನಡೆಸಿದರು.

ADVERTISEMENT

ಇನ್ನೊಂದು ತುದಿಯಲ್ಲಿ ವಿಚಲಿತರಾಗದೆ ನಿಂತಿದ್ದ ಶೆಹಾನ್‌ ಜಯಸೂರ್ಯ ಅವರಿಗೆ 7ನೇ ವಿಕೆಟ್‌ನಲ್ಲಿ ಜೊತೆಗೂಡಿದ ಇಶಾನ್‌ ಜಯರತ್ನೆ ಉತ್ತಮ ಸಾಥ್‌ ನೀಡಿದರು. ಇವರಿಬ್ಬರೂ ಜೊತೆಗೂಡಿ 155 ಎಸೆತಗಳಲ್ಲಿ 142 ರನ್‌ಗಳನ್ನು ಕೂಡಿಹಾಕಿದರು. ತಂಡದ ಮೊತ್ತ 223ಕ್ಕೆ ತಲುಪಿದ್ದಾಗ ದೀಪಕ್‌ ಹೂಡಾ ಅವರ ಎಸೆತವನ್ನು ಶೇಹಾನ್‌ ಆಕಾಶಕ್ಕೆ ಚಿಮ್ಮಿಸಿದರು. ಪಿ.ಎಸ್‌. ಚೋಪ್ರಾ ಸಲೀಸಾಗಿ ಕ್ಯಾಚ್‌ ಹಿಡಿದರು. ಇಶಾನ್‌ ಅವರು 73 ಎಸೆತಗಳನ್ನು ಎದುರಿಸಿ 79 ರನ್‌ ಸಂಗ್ರಹಿಸಿದ್ದರು.

ಜುಗಲ್‌ಬಂದಿ:ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಭಾರತ ‘ಎ’ ತಂಡದ ಆರಂಭಿಕ ಬ್ಯಾಟ್ಸಮನ್‌ ಋತುರಾಜ್‌ ಗಾಯಕವಾಡ್‌ ಈ ಪಂದ್ಯದಲ್ಲೂ ತಮ್ಮ ಬಿರುಸಿನ ಬ್ಯಾಟಿಂಗ್‌ ಮುಂದುವರಿಸಿದರು. ಇವರ ಜೊತೆ ಕ್ರೀಸ್‌ಗೆ ಇಳಿದಿದ್ದ ಶುಭಮನ್‌ ಗಿಲ್‌ ಕೂಡ ತಾವೇನೂ ಕಡಿಮೆಯಿಲ್ಲ ಎನ್ನುವ ರೀತಿಯಲ್ಲಿ ಎಲ್ಲ ದಿಕ್ಕುಗಳಿಗೂ ಚೆಂಡು ಅಟ್ಟಿದರು.

ಋತುರಾಜ್‌ ಅವರು 94 ಎಸೆತಗಳಲ್ಲಿ 125 ರನ್‌ ಕಲೆಹಾಕಿದರು. ಶುಭಮನ್‌ ಅವರು 96 ಎಸೆತಗಳಲ್ಲಿ 109 ರನ್‌ ಗಳಿಸಿದರು. ಇವರಿಬ್ಬರ ಜೊತೆಯಾಟದಲ್ಲಿ 226 ರನ್‌ಗಳು ಹರಿದುಬಂದವು. ಕಮಿಂಡು ಮೆಂಡೀಸ್‌ ಅವರ ಎಸೆತವನ್ನು ಬೌಂಡರಿಗೆ ಅಟ್ಟಿದಾಗ ಶುಭಮನ್‌ ಅವರ ಕಾಲಿನ ಸ್ನಾಯು ಸೆಳೆತ ಕಾಣಿಸಿಕೊಂಡಿತು. ಗಾಯಗೊಂಡ ಅವರು ಕ್ರೀಡಾಂಗಣದಿಂದ ನಿರ್ಗಮಿಸಿದರು. ಅದಾಗಲೇ ತಂಡವು ಜಯದ ಹೊಸ್ತಿಲಲ್ಲಿ ಬಂದು ನಿಂತಿತ್ತು. ಕೊನೆ ಗಳಿಗೆಯಲ್ಲಿ ಬಂದ ಪ್ರಶಾಂತ ಚೋಪ್ರಾ 1 ರನ್‌ ತೆಗೆದರು. ಭಾರತ ‘ಎ’ ತಂಡ 243ರ ಗುರಿಯನ್ನು ಸಲೀಸಾಗಿ ತಲುಪಿತು.

ಸರಣಿಯ ಮೂರನೇ ಪಂದ್ಯವು ಇದೇ ತಿಂಗಳ 10ರಂದು ಇದೇ ಮೈದಾನದಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌:

ಶ್ರೀಲಂಕಾ ‘ಎ’: 50 ಓವರ್‌ಗಳಲ್ಲಿ 7ಕ್ಕೆ 242 (ನಿರೋಶಾನ್‌ ಡಿಕ್ವೆಲ್‌ 5, ಭಾನುಕಾ ರಾಜಪಕ್ಸ 0, ಸಡೇರಾ ಸಮರವಿಕ್ರಮ 6, ಆಶಾನ್‌ ಪ್ರಿಯಂಜನ 5, ಕಮಿಂಡು ಮೆಂಡೀಸ್‌ 10, ದಾಸೂನ್‌ ಶನಕ 20, ಶೆಹಾನ್‌ ಜಯಸೂರ್ಯ 101, ಇಶಾನ್‌ ಜಯರತ್ನ– ಔಟಾಗದೇ 79)

ಭಾರತ ‘ಎ’: 33.3 ಓವರ್‌ಗಳಲ್ಲಿ ಯಾವುದೇ ವಿಕೆಟ್‌ ನಷ್ಟವಿಲ್ಲದೇ 243

(ಋತುರಾಜ್‌ ಗಾಯಕವಾಡ್‌ – ಔಟಾಗದೇ 125, ಶುಭಮನ್‌ ಗಿಲ್‌ 109, ಪ್ರಶಾಂತ ಚೋಪ್ರಾ– ಔಟಾಗದೇ 1 )

ಪಂದ್ಯಶ್ರೇಷ್ಠ: ಶುಭಮನ್‌ ಗಿಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.